ಮಲ್ನಾಡ್ ಟಾಪ್ ನ್ಯೂಸ್
– ಕಾರು ಬಾನೆಟ್ ಮೇಲೆ ಪೊಲೀಸ್ ಪೇದೆ ಹೊತ್ತೊಯ್ದವ ಅರೆಸ್ಟ್!!
– ಶೃಂಗೇರಿ: ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಆದ ಖಾಸಗಿ ಬಸ್
– ಶಿವಮೊಗ್ಗ: ಆಕಸ್ಮಿಕ ವಿದ್ಯುತ್ ತಗುಲಿ ಕಾರ್ಮಿಕನ ಸಾವು
– ಶಿವಮೊಗ್ಗ: ಮೊಬೈಲ್ ಟವರ್ ಕದ್ದ ಕಳ್ಳರು!
NAMMUR EXPRESS NEWS
ಶಿವಮೊಗ್ಗ: ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿಯನ್ನು ಬಾನೆಟ್ ಮೇಲೆ ಹೊತ್ತೊಯ್ದ ಪ್ರಕರಣ ಸಂಬಂಧ ಕಾರು ಚಾಲಕನನ್ನು ಬಂಧಿಸಲಾಗಿದೆ. ಭದ್ರಾವತಿ ಹೊಸಮನೆ ಬಡಾವಣೆ ವಾಸಿ ಮಿಥುನ್ ಜಗದಾಳೆ ಬಂಧಿತ. ಸಹ್ಯಾದ್ರಿ ಕಾಲೇಜು ಮುಂಭಾಗ ಅ. 24ರಂದು ಮಧ್ಯಾಹ್ನ ವಾಹನ ತಪಾಸಣೆ ಸಂದರ್ಭ ಪೊಲೀಸ್ ಸಿಬ್ಬಂದಿಯನ್ನು ಕಾರಿನ ಬಾನೆಟ್ ಮೇಲೆ ಹೊತ್ತೊಯ್ಯಲಾಗಿತ್ತು. ವಿಡಿಯೋ ವೈರಲ್ ಆಗಿ, ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಪೊಲೀಸರು ಕಾರು ಚಾಲಕನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಕಾರು ಬಾನೆಟ್ ಮೇಲೆ ಪೊಲೀಸ್ ಪೇದೆಯನ್ನು ಹೊತ್ತೊಯ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರು ಚಾಲಕನನ್ನು ಭದ್ರಾವತಿಯ ಮಿಥುನ್ ಜಗದಾಳೆ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲು ಮಾಡಲಾಗಿದೆ. ಚಾಲಕನನ್ನು ಬಂಧಿಸಲಾಗಿದೆ.
* ಶೃಂಗೇರಿ: ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಆದ ಖಾಸಗಿ ಬಸ್
ಶೃಂಗೇರಿ: ಮಾರ್ಗ ಮಧ್ಯದಲ್ಲಿ ಪ್ರಯಾಣಿಕರೊಬ್ಬರು ಜ್ಞಾನ ತಪ್ಪಿ ಬಿದ್ದ ಸಂದರ್ಭದಲ್ಲಿ, ಕೂಡಲೇ ಬಸ್ ಚಾಲಕ ಬಸ್ ನ್ನು ಆಸ್ಪತ್ರೆಗೆ ಅಂಬ್ಯುಲೆನ್ಸ್ ರೀತಿಯಲ್ಲಿ ತೆಗೆದುಕೊಂಡು ಹೋದ ಘಟನೆ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆದಿದೆ.
ಮುಕಾಂಬಿಕಾ ಬಸ್ನಲ್ಲಿ ಪ್ರಯಾಣಿಕರೊಬ್ಬರು ಜ್ಞಾನ ತಪ್ಪಿದ್ದಾರೆ.ಅಂಬ್ಯುಲೆನ್ಸ್ ಬರುವುದು ತಡವಾಗುತ್ತದೆ ಎಂದು ಅರಿತ ಚಾಲಕ ಶಕೀರ್ ಹಾಗೂ ಕಂಡಕ್ಟರ್ ಸುರೇಶ್ ಅಸ್ವಸ್ಥಗೊಂಡ ಪ್ರಯಾಣಿಕರನ್ನು ಶೃಂಗೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ತುರ್ತು ಸಂದರ್ಭ ಮಾನವೀಯತೆ ಮೆರೆದ ಚಾಲಕನಿಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
* ಶಿವಮೊಗ್ಗ: ಆಕಸ್ಮಿಕ ವಿದ್ಯುತ್ ತಗುಲಿ ಕಾರ್ಮಿಕನ ಸಾವು!
ಶಿವಮೊಗ್ಗ: ಆನಂದಪುರ ಸಮೀಪದ ಮಲಂದೂರಿನಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಿವಮೊಗ್ಗ ಪಟ್ಟಣದ ನಿವಾಸಿ ಕೃಷ್ಣಮೂರ್ತಿ (46) ಸಾವಿಗೀಡಾದವರು. ಮಲ್ಲಂದೂರಿನ ಸಂತೋಷ್ ಅಗೋ ಕಂಪನಿಯ ಕಟ್ಟಡ ನಿರ್ಮಾಣ ಕಾರ್ಯ ನಡೆಸುತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ ತಕ್ಷಣ ಕಾರ್ಮಿಕರು ಅವರನ್ನು ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
* ಶಿವಮೊಗ್ಗ: 46.30 ಲಕ್ಷ ಮೌಲ್ಯದ ಮೊಬೈಲ್ ಟವರ್ ಕಳ್ಳತನ!
ಶಿವಮೊಗ್ಗ: ಮೊಬೈಲ್ ಟವರ್ ಕಳ್ಳತನವಾಗಿರುವ ವಿಚಿತ್ರ ಘಟನೆ ಟಿಪ್ಪು ನಗರದಲ್ಲಿ ನಡೆದಿದೆ.
2008ರಲ್ಲಿ ಮೊಬೈಲ್ ಟವರ್ ಅಳವಡಿಸಿ ನಿರ್ವಹಿಸುತ್ತಿರುವುದು ಗೊತ್ತಿದ್ದ ಸಂಗತಿ.ಅಳವಡಿಸಿದ್ದ ಬಿಡಿ ಭಾಗಗಳು ನಾಪತ್ತೆಯಾಗಿದ್ದವು ಎಂದು ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ದೂರು ಕೂಡ ನೀಡಲಾಗಿತ್ತು ಇದೀಗ ಟವರ್ ಮತ್ತು ಬಿಡಿ ಬಾಗಗಳನ್ನು ಹೊತ್ತೋಯ್ದಿದ್ದಾರೆ. ಇದರ ಅಂದಾಜು ಮೌಲ್ಯ 46.30 ಲಕ್ಷ ಎಂದು ಉಲ್ಲೇಖಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.