ರಾಜ್ಯದಲ್ಲಿ ಮಳೆ: ಗರಿಗೆದರಿದ ರೈತರ ನಿರೀಕ್ಷೆ.!
– ಹಲವೆಡೆ ಮಳೆಯಿಂದ ಅವಾಂತರ ಸೃಷ್ಟಿ
NAMMUR EXPRESS NEWS
ಮಂಗಳೂರು/ಮೈಸೂರು: ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದ್ದರೆ ದಕ್ಷಿಣ ಕನ್ನಡದ ಕೆಲವೆಡೆ ಸಾಮಾನ್ಯ ಮಳೆಯಾಗಿದೆ. ಮೈಸೂರು ಸುತ್ತಮುತ್ತ ಹಾಗೂ ಹಾಸನ ಜಿಲ್ಲೆಯಾದ್ಯಂತ ಭಾನುವಾರ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿದಿದ್ದು, ರೈತರ ನಿರೀಕ್ಷೆಗಳು ಗರಿಗೆದರಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಎನ್.ಆರ್.ಪುರ ಮತ್ತು ಕೊಪ್ಪ ತಾಲ್ಲೂಕು ವ್ಯಾಪ್ತಿಯಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ. ಪುತ್ತೂರು ತಾಲ್ಲೂಕಿನಲ್ಲಿ ಸಂಜೆ ಗುಡುಗು, ಗಾಳಿಯೊಂದಿಗೆ ಭಾರಿ ಮಳೆಯಾಗಿದ್ದು, ಮರ ಬಿದ್ದು ಮನೆಗೆ ಹಾನಿಯಾಗಿದೆ.
ಮೈಸೂರು ನಗರದ ಹೊರವಲಯದಲ್ಲಿ ಹಾಗೂ ಹಾಸನ, ಅರಸೀಕೆರೆ, ಅರಕಲಗೂಡು, ಚನ್ನರಾಯಪಟ್ಟಣದಲ್ಲಿ ಹದ ಮಳೆಯಾಗಿದೆ. ಹಳೇಬೀಡು, ಬೇಲೂರು, ಕೊಣನೂರಿನ ಸುತ್ತ ಸಾಧಾರಣ ಮಳೆ ಸುರಿದಿದೆ. ಸಕಲೇಶಪುರ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ಹೆಗ್ಗೋವೆ, ಆದರವಳ್ಳಿಯಲ್ಲಿ ಮರ ಹಾಗೂ ವಿದ್ಯುತ್ ಕಂಬ ನೆಲಕ್ಕುರುಳಿವೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಕಾನೂರು ಗ್ರಾ.ಪಂ. ವ್ಯಾಪ್ತಿಯ ಕಟ್ಟಿನಮನೆ ಎಂಬಲ್ಲಿ ಮರವೊಂದು ಕಾರಿನ ಮೇಲೆ ಬಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೊಪ್ಪದ ಸುನೀತಾ (48) ಎಂಬವರ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.