* ಉಳ್ಳಾಲ: ತಾಲ್ಲೂಕು ಆಸ್ಪತ್ರೆಗೆ ಬೇಡಿಕೆ
* ಮಂಗಳೂರು: ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಕರಾವಳಿ ಹುಡುಗಿ ಆಯ್ಕೆ
* ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವವರಿಗೆ ಹೆಚ್ಚಲಿದೆ ಟೋಲ್ ಶುಲ್ಕ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಉಳ್ಳಾಲ: ತಾಲ್ಲೂಕು ಆಸ್ಪತ್ರೆಗೆ ಬೇಡಿಕೆ
ಉಳ್ಳಾಲ: ಉಳ್ಳಾಲವು ತಾಲ್ಲೂಕಾಗಿ ರಚನೆಯಾಗಿ ಐದು ವರ್ಷಗಳು ಕಳೆದರೂ, ಇನ್ನೂ ಸರ್ಕಾರಿ ತಾಲ್ಲೂಕು ಆಸ್ಪತ್ರೆ ಸ್ಥಾಪನೆಯಾಗದಿರುವುದು ಸ್ಥಳೀಯರಲ್ಲಿ ಬೇಸರವನ್ನುಂಟು ಮಾಡಿದೆ. ಖಾಸಗಿ ಆಸ್ಪತ್ರೆಗಳ ಅಧಿಪತ್ಯದಿಂದ ನಲುಗಿರುವ ತಾಲ್ಲೂಕು ವಾಸಿಗಳಿಗೆ ತೀವ್ರ ಅಗತ್ಯವಾಗಿದೆ. ಅಲ್ಲದೆ ರಾಜ್ಯ ಸರ್ಕಾರದ ವೈದ್ಯಕೀಯ ಅಧಿನಿಯಮದ ಪ್ರಕಾರ ಪ್ರತಿ ತಾಲ್ಲೂಕಿಗೂ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗಳು ಇರಬೇಕೆಂಬ ನಿಯಮವಿದ್ದು, ಅದನ್ನು ಉಲ್ಲಂಘಿಸಲಾಗಿದೆ. ಜೊತೆಗೆ ತಾಲ್ಲೂಕು ವ್ಯಾಪ್ತಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಅಧೀನಕ್ಕೆ ಒಳಪಡಿಸಿರುವುದು, ಬಡ ಜನರ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಿದೆ ಎಂದು ಡಿವೈಎಫ್ಐ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಡಿವೈಎಫ್ಐ ಉಳ್ಳಾಲ ತಾಲ್ಲೂಕು ಸಮಿತಿಯು ತಕ್ಷಣ ಉಳ್ಳಾಲ ತಾಲ್ಲೂಕಿಗೆ ಸರ್ಕಾರಿ ಆಸ್ಪತ್ರೆ ಮಂಜೂರು ಮಾಡುವಂತೆ, ಮುಡಿಪು ಹೋಬಳಿಗೆ 40 ಹಾಸಿಗೆಗಳನ್ನುಳ್ಳ ಸಮುದಾಯ ಆಸ್ಪತ್ರೆ ತೆರೆಯುವಂತೆ ಹಾಗೂ ತಾಲ್ಲೂಕು ವ್ಯಾಪ್ತಿಯ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ತಾಲ್ಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ, ಉಪಾಧ್ಯಕ್ಷರಾದ ರಜಾಕ್ ಮುಡಿಪು, ಮಂಗಳೂರು ನಗರದ ಕಾರ್ಯದರ್ಶಿ ತೈಯ್ಯೂಬ್ ಬೆಂಗ್ರೆ, ಮುಖಂಡರಾದ ರಫೀಕ್ ಹರೇಕಳ ಅವರು ಪಾಲ್ಗೊಂಡಿದ್ದರು.
* ಮಂಗಳೂರು: ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಕರಾವಳಿ ಹುಡುಗಿ ಆಯ್ಕೆ
ಮಂಗಳೂರು: ನವೆಂಬರ್ 13ರ ಗುರುವಾರದಂದು ಬಾಂಗ್ಲಾದೇಶದಲ್ಲಿ ನಡೆಯುವ, 12 ರಾಷ್ಟ್ರಗಳ ಮಹಿಳಾ ವಿಶ್ವ ಕಪ್ ಕಬಡ್ಡಿಯಲ್ಲಿ ಭಾಗವಹಿಸುವ ಭಾರತೀಯ ಮಹಿಳಾ ತಂಡದಲ್ಲಿ ಸೂರತ್ಕಲ್ ನ ಇಡ್ಯಾ ನಿವಾಸಿ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿಯಾದ ಧನಲಕ್ಷ್ಮಿ ಅವರು ಆಯ್ಕೆಯಾಗಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಧನಲಕ್ಷ್ಮಿ ಅವರ ಕಬಡ್ಡಿ ಕ್ರೀಡೆಯಲ್ಲಿನ ಸಾಮರ್ಥ್ಯವನ್ನು ಗುರುತಿಸಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವ ಅವರು ಧನಲಕ್ಷ್ಮಿ ಅವರಿಗೆ ತಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟು, ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹವನ್ನು ನೀಡಿದ್ದಾರೆ ಎನ್ನಲಾಗಿದೆ. ಇದುವರೆಗೂ 12 ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದು, ಜೂನಿಯರ್ ಸೀನಿಯರ್ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಧನಲಕ್ಷ್ಮಿ ಅವರು 2025ರ ಸೀನಿಯರ್ ಲೆವೆಲ್ ಫೆಡರೇಶನ್ ನಾಯಕತ್ವ ವಹಿಸಿ ಮುನ್ನಡೆಸಿದ್ದಾರೆ. ಇದೀಗ ಮಹಿಳಾ ವಿಶ್ವಕಪ್ ಕಬಡ್ಡಿ ಸ್ಪರ್ಧೆಯಲ್ಲಿ ಭಾರತೀಯ ತಂಡದಲ್ಲಿ ಕರ್ನಾಟಕದಿಂದ ಪರವಾಗಿ ಒಬ್ಬರೇ ಆಯ್ಕೆಯಾಗಿದ್ದಾರೆ.
* ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವವರಿಗೆ ಹೆಚ್ಚಲಿದೆ ಟೋಲ್ ಶುಲ್ಕ
ಪುತ್ತೂರು: ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣವು ಅಂತಿಮ ಹಂತದಲ್ಲಿದ್ದು, ಬಿ.ಸಿ ರಸ್ತೆ ಮತ್ತು ಅಡ್ಡ ಹೊಳೆ ಚತುಷ್ಪಥ ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದ್ದು, ಇದು 2026ರ ಏಪ್ರಿಲ್ ನಿಂದ ಪ್ರಾರಂಭಗೊಳ್ಳಲಿದೆ. ಉಳಿದ ಮಾರ್ಗಗಳ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಟೋಲ್ ಸಂಗ್ರಹ ಆರಂಭವಾಗಲಿದೆ. ಬಜತ್ತೂರು ಟೋಲ್ ಪ್ಲಾಜಾ ಪ್ರಾರಂಭಗೊಂಡರೆ ಈ ಮಾರ್ಗದಲ್ಲಿ ಏಳು ಟೋಲ್ ಪ್ಲಾಜಾಗಳಾದಂತಾಯಿತು. ಹೀಗಾಗಿ ಬೆಂಗಳೂರು ಮತ್ತು ಮಂಗಳೂರು ನಡುವೆ ಪ್ರಯಾಣಿಸುವವರಿಗೆ ಹೆಚ್ಚುವರಿ ಟೋಲ್ ಪ್ಲಾಜಾ ದೊರಕುವುದರಿಂದ ಪ್ರಯಾಣದ ವೆಚ್ಚ ಹೆಚ್ಚಳವಾಗಲಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೊದಲಿಗೆ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗುವುದು, ಬಳಿಕ ಹಂತ ಹಂತವಾಗಿ ಟೋಲ್ ನ ದರಗಳು, ಸ್ಥಳೀಯ ವಾಹನಗಳಿಗೆ ವಿನಾಯಿತಿ ಮತ್ತು ಸಂಗ್ರಹಣೆ, ಜವಾಬ್ದಾರಿಯುತ ಏಜೆನ್ಸಿ ಮುಂತಾದ ವಿಚಾರಗಳ ಕುರಿತ ವಿವರಗಳನ್ನು ಅಂತಿಮವಾಗಿ ನಿರ್ಧರಿಸಲಿದೆ.







