ಸೈಬರ್ ವಂಚನೆ ನಷ್ಟಕ್ಕೆ ಬ್ಯಾಂಕ್ ಹೊಣೆ!?
– ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
– ಗ್ರಾಹಕರು ಬ್ಯಾಂಕ್ ಮಾಹಿತಿ ಹಂಚಿಕೊಳ್ಳಬೇಡಿ!
– ಸೈಬರ್ ವಿಚಾರದಲ್ಲಿ ಪೊಲೀಸ್ ಇಲಾಖೆ ಇನ್ನು ಅಲರ್ಟ್ ಆಗಬೇಕು!
NAMMUR EXPRESS NEWS
ನವದೆಹಲಿ: ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ಗ್ರಾಹಕರಿಗೆ ಆರ್ಥಿಕ ನಷ್ಟ ಸಂಭವಿಸಿದರೆ ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ಗಳೇ ಹೊಣೆ ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಇದೇ ವೇಳೆ ಗ್ರಾಹಕರು ಕೂಡಾ ಜಾಗ್ರತೆ ವಹಿಸಬೇಕು, ಒಟಿಪಿ ಸಂಖ್ಯೆ, ಸಿವಿವಿ, ಎಟಿಎಂ ಪಿನ್ನಂಥ ಸೂಕ್ಷ್ಮ ವಿಚಾರವನ್ನು ಹಂಚಿಕೊಳ್ಳುವುದು ಬಿಡಬೇಕು ಎಂದು ಸಲಹೆ ನೀಡಿದೆ. ಇತ್ತೀಚಿಗೆ ಹೆಚ್ಚುತ್ತಿರುವ ಸೈಬರ್ ಮೋಸದ ಹಿನ್ನೆಲೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಏನಿದು ಪ್ರಕರಣ?: ಅಸ್ಸಾಂನ ಪಲ್ಲಬ್ ಭೌಮಿಕ್, ಆನ್ಲೈನ್, ಮೂಲಕ ವಸ್ತುವೊಂದನ್ನು ಖರೀದಿಸಿದ್ದರು. ತೃಪ್ತಿಯಾಗದ ಕಾರಣ ಅದನ್ನು ಮರಳಿಸಲು ನಿರ್ಧರಿಸಿದ್ದರು. ಆ ವಸ್ತುವನ್ನು ಮರಳಿಸುವ ಪ್ರಕ್ರಿಯೆ ವೇಳೆ ಕಸ್ಟಮರ್ ಕೇರ್ ಹೆಸರಿನಲ್ಲಿ ಪಲ್ಲಬ್ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ನಿರ್ದಿಷ್ಟ ಆ್ಯಪ್ ಡೌನ್ ಲೋಡ್ಗೆ ಸೂಚಿಸಿದ್ದ. ಪಲ್ಲಬ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡ ಬಳಿಕ ಕಸ್ಟಮರ್ ಕೇರ್ ಎಂದು ಹೇಳಿದ್ದ ವ್ಯಕ್ತಿಗೆ ಎಂಪಿನ್, ಒಟಿಪಿ ಎಲ್ಲವನ್ನೂ ನೀಡಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಅವರ ಖಾತೆಯಿಂದ 94204 ರು. ಹಣ ಎಗರಿಸಲಾಗಿತ್ತು.
ಇದನ್ನು ನಿಯಮದಂತೆ 24 ಗಂಟೆಯಲ್ಲಿ ಪಲ್ಲಬ್ ಬ್ಯಾಂಕ್ ಗಮನಕ್ಕೆ ತಂದಿದ್ದರು. ಆದರೆ ನೀವು ಒಟಿಪಿ, ಎಂಪಿನ್ ಸೇರಿದಂತೆ ರಹಸ್ಯ ಮಾಹಿತಿಯನ್ನು ವಂಚಕರಿಗೆ ನೀಡಿದ್ದೀರಿ. ಬ್ಯಾಂಕ್ನ ತಪ್ಪಿಲ್ಲ. ಹಣ ಮರಳಿಸಲಾಗಲ್ಲ ಎಂದು ಬ್ಯಾಂಕ್ ಹೇಳಿತ್ತು. ಈ ಬಗ್ಗೆ ಪಲ್ಲಬ್ ಹೈಕೋರ್ಟ್ ಮೊರೆ ಹೋಗಿದ್ದರು. ಗುವಾಹಟಿ ಹೈಕೋರ್ಟ್ ಪಲ್ಲಬ್ ಪರ ತೀರ್ಪು ನೀಡಿತ್ತು. ಇದನ್ನು ಎಸ್ಬಿಐ ಸುಪ್ರೀಂನಲ್ಲಿ ಪ್ರಶ್ನಿಸಿತ್ತು. ಈ ಕುರಿತು ತೀರ್ಪು ನೀಡಿರುವ ಸುಪ್ರೀಂ, ‘ಮೂರನೇ ವ್ಯಕ್ತಿಯಿಂದಾದ ವಂಚನೆಗೆ ಗ್ರಾಹಕ ಹೊಣೆಯಲ್ಲ ಎಂದು ಆರ್ಬಿಐ ನಿಯಮಗಳೇ ಹೇಳಿವೆ. ಸೈಬರ್ ವಂಚನೆಯಂಥ ಪ್ರಕರಣದಲ್ಲಿ ಗ್ರಾಹಕರ ಹಿತ ಕಾಪಾಡುವುದು ಬ್ಯಾಂಕ್ಗಳ ಹೊಣೆಗಾರಿಕೆ. ಈ ಪ್ರಕರಣದಲ್ಲಿ ತಾಂತ್ರಿಕ ಸಂಪನ್ಯೂಲ ಲಭ್ಯವಿದ್ದರೂ ವಂಚನೆ ತಡೆಯುವಲ್ಲಿ ಎಸ್ಬಿಐ ವಿಫಲವಾಗಿದೆ. ಈ ಹಿನ್ನೆಲೆ ಗ್ರಾಹಕನಿಗೆ ಹಣ ಮರಳಿಸುವಂತೆ ಎಸ್ಬಿಐಗೆ ನ್ಯಾಯಪೀಠ ಸೂಚಿಸಿದೆ.
ಸೈಬರ್ ಮೋಸಕ್ಕೆ ಪ್ರತಿ ದಿನ ಸಾವಿರಾರು ಜನ ಬಲಿ!
ಸೈಬರ್ ಮೋಸದ ಜಾಲಕ್ಕೆ ಪ್ರತಿ ದಿನ ಸಾವಿರಾರು ಮಂದಿ ಮೋಸ ಹೋಗುತ್ತಿದ್ದಾರೆ. ಆದರೆ ಇದನ್ನು ತಡೆಯುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಅತ್ಯುತ್ತಮ ಟೆಕ್ ತಂತ್ರಜ್ಞಾನ, ಪರಿಣಿತರ ತಂಡ ರಚನೆ ಮಾಡಿದಲ್ಲಿ ಕಳ್ಳರ ಹಿಡಿದು ಅವರ ಬುಡ ಸಮೇತ ಕೀಳುವುದು ದೊಡ್ಡ ವಿಚಾರ ಅಲ್ಲ. ಆದರೆ ಪೊಲೀಸ್ ಇಲಾಖೆ ಈ ವಿಷಯದಲ್ಲಿ ಕುರುಡು ಪ್ರದರ್ಶನ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.