- ಹೈಕಮಾಂಡ್ ಕಡೆಯಿಂದ ಅಂತಿಮ ಘೋಷಣೆ
- ಸಿಟಿ ರವಿ, ಅಶ್ವಥನಾರಾಯಣ ಹೆಸರು ಕೂಡ ಚಾಲ್ತಿ
ಬೆಂಗಳೂರು: ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಹುತೇಕ ಫೈನಲ್ ಆಗಿದ್ದು, ಅಳೆದು ತೂಗಿ ಹೈಕಮಾಂಡ್ ವಿಪಕ್ಷ ನಾಯಕ ಸ್ಥಾನಕ್ಕೆ ಬೊಮ್ಮಾಯಿಯವರ ಹೆಸರು ಫೈನಲ್ ಮಾಡಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆರ್. ಅಶೋಕ್ ಹೆಸರು ಅಂತಿಮವಾಗಿದ್ದು, ಸಿದ್ದು, ಡಿಕೆ ಸರ್ಕಾರವನ್ನು ಸಮರ್ಥವಾಗಿ ಕಟ್ಟಿ ಹಾಕಲು ಹೈಕಮಾಂಡ್ ನಿಂದ ಮಹತ್ವದ ತೀರ್ಮಾನವಾಗಿದೆ.
ಸರ್ಕಾರವನ್ನು ಪ್ರತಿ ಹಂತದಲ್ಲಿ ಕಟ್ಟಿ ಹಾಕಲು ವಿಪಕ್ಷ ನಾಯಕ ಸ್ಥಾನಕ್ಕೆ ಬೊಮ್ಮಾಯಿ ಅವರೇ ಸೂಕ್ತವಾಗಿದ್ದು, ನಿಕಟ ಪೂರ್ವ ಮುಖ್ಯಮಂತ್ರಿ ಕಾರಣ ಎಲ್ಲ ಇಲಾಖೆಗಳ ಆಗುಹೋಗುಗಳ ಅರಿವು, ಜೊತೆಗೆ ಸದನದ ಅನುಭವ ಆಡಳಿತದ ಅನುಭವದ ಹಿನ್ನೆಲೆಯಲ್ಲಿ ಬೊಮ್ಮಾಯಿಗೆ ಮಣೆ ಹಾಕಿದ್ದಾರೆ.
ಹಲವು ಬಿಲ್ಲುಗಳ ಬಗ್ಗೆ ಸಮರ್ಥ ಚರ್ಚೆ ಮತ್ತು ಬಿಗಿಪಟ್ಟು ಹಾಕಲು ಸೂಕ್ತ ವ್ಯಕ್ತಿ ಬೊಮ್ಮಾಯಿಯಾಗಿದ್ದು, ಘಟಾನುಘಟಿ ಸಿದ್ದು, ಡಿಕೆಗೆ ಕೌಂಟರ್ ಕೊಡುವ ತಾಕತ್ತು ಇರುವುದು ಬೊಮ್ಮಾಯಿಗೆ ಮಾತ್ರ. ಜೊತೆಗೆ ಲಿಂಗಾಯಿತರನ್ನು ವಿಪಕ್ಷ ನಾಯಕ ಮಾಡಿದರೆ ಸಮುದಾಯಕ್ಕೆ ಒಳ್ಳೆಯ ಸಂದೇಶ ಸಿಗುತ್ತದೆ.
ಈ ಎಲ್ಲ ಕಾರಣಗಳಿಗಾಗಿ ಬೊಮ್ಮಾಯಿ ಅವರನ್ನು ವಿಪಕ್ಷ ನಾಯಕರಾಗಿಸಲು ಹೈಕಮಾಂಡ್ ತೀರ್ಮಾನ ಮಾಡಿದೆ. ಬಸನಗೌಡ ಪಾಟೀಲ್ ಯತ್ನಾಳ ಮತ್ತು ಮಾಜಿ ಸಚಿವ ಸುನಿಲ್ ಕುಮಾರ್ ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ನೀಡಿದ್ದು, ರಾಜ್ಯಾಧ್ಯಕ್ಷ ಹುದ್ದೆಗೆ ಒಕ್ಕಲಿಗ ಸಮುದಾಯದ ಆರ್ ಅಶೋಕ್ ಗೆ ಮಣೆ ಹಾಕುವ ಮೂಲಕ ಸಮುದಾಯದ ಒಲವುಗೊಳಿಸಲು ಬಿಜೆಪಿ ಮುಂದಾಗಿದೆ.
ಅಶೋಕ್ ಒಕ್ಕಲಿಗರ ಪ್ರಮುಖ ಬಿಜೆಪಿ ನಾಯಕರಾಗಿದ್ದು, ಅಶೋಕ್ ಬೆಂಗಳೂರು ಮತ್ತು ಹಳೆ ಮೈಸೂರು ಭಾಗದಲ್ಲಿ ಹಿಡಿತ ಹೊಂದಿದ್ದಾರೆ. ಅಶೋಕ್ ಪ್ರಬಲ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿ ಆಡಳಿತದ ಅನುಭವ ಹಾಗೂ ಶಾಸಕರ ಜೊತೆಯ ಉತ್ತಮ ಒಡನಾಟ ಹೊಂದಿದ್ದಾರೆ. ಹಾಗೆಯೇ ರಾಜ್ಯಾಧ್ಯಕ್ಷ ಹುದ್ದೆಗೆ ಸಿಟಿ ರವಿ ಮತ್ತು ಅಶ್ವಥ್ ನಾರಾಯಣ ಪ್ರಬಲ ಪೈಪೋಟಿ ನಡೆಸಿದ್ದಾರೆ.