– ಸಚಿವರ ಅತೃಪ್ತಿ ಶಮನಕ್ಕೆ ಬಿ.ಎಸ್ ವೈ ಪ್ರಯತ್ನ
– ಮತ್ತೆ ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸುವ ಸಾಧ್ಯತೆ
ಬೆಂಗಳೂರು: ಖಾತೆ ಬದಲಾವಣೆಯ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಮತ್ತೆ ಬಂಡಾಯ ತೀವ್ರಗೊಂಡಿದೆ. ಸಚಿವರು ಗೈರು ಹಾಜರಿಯಾಗುವ ಮೂಲಕ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಖಾತೆ ಬದಲಾವಣೆ ವಿಚಾರವಾಗಿ ಅಸಮಾಧಾನಗೊಂಡಿರುವ ಸಚಿವರ ಬಂಡಾಯ ಶಮನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಾಲಿಗೆ ಸವಾಲಾಗಿದೆ.
ಸಚಿವ ಜೆ.ಸಿ ಮಾಧುಸ್ವಾಮಿ, ಕೆ. ಸುಧಾಕರ್, ನಾರಾಯಣ ಗೌಡ, ಕೆ. ಗೋಪಾಲಯ್ಯ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡರೆ ಎಂಟಿಬಿ ನಾಗರಾಜ್ ವಸತಿ ಖಾತೆಯ ಮೇಲೆ ಕಣ್ಣಿಟ್ಟಿದ್ದು ಅಬಕಾರಿ ಖಾತೆ ಕೊಟ್ಟಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಗುರುವಾರ ಸಂಪುಟ ಸಭೆಯ ಬಳಿಕವೂ ಸಿಎಂ ಯಡಿಯೂರಪ್ಪ ಅವರು ಅತೃಪ್ತ ಸಚಿವರ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಸಚಿವರ ಬಂಡಾಯ ಶಮನ ಮಾಡುವ ಹೊಣೆಯನ್ನು ಯಡಿಯೂರಪ್ಪನವರು ಆರ್. ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಆರ್. ಅಶೋಕ್ ಬಂಡಾಯ ಸಚಿವರಿಗೆ ಕರೆ ಮಾಡಿ ಕ್ಯಾಬಿನೆಟ್ ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದರು. ಆದರೆ ಅವರ ಮನವಿಗೂ ಬಂಡಾಯಗಾರರು ಬಗ್ಗಲಿಲ್ಲ.
ಇದೀಗ ಮತ್ತೆ ಪ್ರತ್ಯೇಕವಾಗಿ ಕರೆದು ಸ್ವತಃ ಸಿಎಂ ಯಡಿಯೂರಪ್ಪನವರು ಮಾತುಕತೆ ನಡೆಸುವ ಸಾಧ್ಯತೆ ಇದೆ.