ಕರುನಾಡಲ್ಲಿ ಕಾಂಗ್ರೆಸ್ ಕಿಲಕಿಲ!
– ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯೋತ್ಸವ
– ಚನ್ನಪಟ್ಟಣದಲ್ಲಿ ಯೋಗೇಶ್ವರ್, ಸಂಡೂರಲ್ಲಿ ಅನ್ನಪೂರ್ಣ, ಶಿಗ್ಗಾವಿ ಯಾಸಿರ್ ಖಾನ್ ಭರ್ಜರಿ ಗೆಲುವು
NAMMUR EXPRESS NEWS
ಬೆಂಗಳೂರು: ಕರುನಾಡಲ್ಲಿ ಕಾಂಗ್ರೆಸ್ ಮೂರಕ್ಕೆ ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮತ್ತೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ.
ಚನ್ನಪಟ್ಟಣದಲ್ಲಿ ಯೋಗೇಶ್ವರ್, ಸಂಡೂರಲ್ಲಿ ಅನ್ನಪೂರ್ಣ ತುಕಾರಾಂ, ಶಿಗ್ಗಾವಿಯಲ್ಲಿ ಯಾಸಿರ್ ಖಾನ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಚನ್ನಪಟ್ಟಣ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಸಂಡೂರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಶಿಗ್ಗಾವಿಯಲ್ಲಿ ಮಾಜಿ ಸಿಎಂ ಮಗ ಭರತ್ ಬೊಮ್ಮಾಯಿ ಗೆಲುವು ಸೋಲು ಕಂಡಿದ್ದಾರೆ.
ಗಣಿ ನಾಡಲ್ಲಿ ಕಾಂಗ್ರೆಸ್ ಗೆಲುವಿನ ನಗೆ
ಸಂಡೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರು 93,606 ಮತ ಪಡೆದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು 83,961 ಮತ ಪಡೆದು ಸುಮಾರು 9500 ಮತ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಅವರ ಪತಿ ತುಕಾರಾಂ ಇಲ್ಲಿ ಶಾಸಕರಾಗಿದ್ದರು.
ಅನ್ನಪೂರ್ಣ 9,500+ ಮತಗಳಿಂದ ಗೆದ್ದು ಬೀಗಿದ್ದಾರೆ. ಇದರೊಂದಿಗೆ ಸಂಡೂರಿನಲ್ಲಿ ಕಾಂಗ್ರೆಸ್ಗೆ ಸತತ 5ನೇ ಬಾರಿ ಜಯದ ನಗೆ ಬೀರಿದೆ.
ನಿಖಿಲ್ ಸೋಲು: ಮೈತ್ರಿಗೆ ಹಿನ್ನಡೆ
ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕುಮಾರಸ್ವಾಮಿ ಅವರು ಗೆದ್ದಿದ್ದ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಪಕ್ಷದ ಯೋಗೇಶ್ವರ್ 25,515 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಈ ಮೂಲಕ ಮೈತ್ರಿ ಅಭ್ಯರ್ಥಿಗೆ ಭಾರೀ ಹಿನ್ನಡೆ ಆಗಿದೆ. ಯೋಗೇಶ್ವರ್ 1,12,388 ಮತ ಪಡೆದಿದ್ದು, ನಿಖಿಲ್ ಕುಮಾರಸ್ವಾಮಿ 87,031 ಮತ ಪಡೆದಿದ್ದಾರೆ.
ಶಿಗ್ಗಾವ್ ಅಲ್ಲಿ ನಿರೀಕ್ಷೆ ಹುಸಿಯಾಯಿತು!
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪುತ್ರನಿಗೆ ಸೋಲಾಗಿದೆ. ಶಿಗ್ಗಾಂವ ಕ್ಷೇತ್ರದಲ್ಲಿ ಈ ಹಿಂದೆ ಬಸವರಾಜ್ ಬೊಮ್ಮಾಯಿ ಶಾಸಕರಾಗಿದ್ದು, ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಕಾರಣ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗಿತ್ತು. ಬೊಮ್ಮಾಯಿ ಪುತ್ರ ತನ್ನ ಮಗನಿಗೆ ಟಿಕೇಟ್ ಗಿಟ್ಟಿಸಿಕೊಂಡಿದ್ದರು.ಕಾಂಗ್ರೆಸ್ನಿಂದ ಯಾಸಿರ್ ಖಾನ್ ಪಠಾಣ್ ಸ್ಪರ್ಧಿಸಿದ್ದು, ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಸಿ ಎಂ ಪುತ್ರ ಭರತ್ ಬೊಮ್ಮಾಯಿಗೆ ಭಾರೀ ಸೋಲಾಗಿದೆ. ಭರತ್ ಬೊಮ್ಮಾಯಿ 85,571 ಮತ ಪಡೆದಿದ್ದು, ಯಾಸಿರ್ ಖಾನ್ 99,230 ಮತ ಪಡೆದು 17 ಸಾವಿರ ಅಂತರದಲ್ಲಿ ಗೆದ್ದಿದ್ದಾರೆ.
( ಮತಗಳ ಮಾಹಿತಿ 1 ಗಂಟೆಯ ಫಲಿತಾಂಶದ ಆಧಾರದಲ್ಲಿ ಹಾಕಲಾಗಿದೆ. ಅಂತಿಮ ಮತ ಫಲಿತಾಂಶ ಇನ್ನು ಘೋಷಣೆ ಬಾಕಿ ಇದೆ)