-ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೂ ಗೈರು?
- ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದ ಸಚಿವ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. ಖಾತೆ ಹಂಚಿಕೆ ಬೆನ್ನಲ್ಲೇ ಬದಲಿ ಖಾತೆ ಕೊಟ್ಟಿದ್ದಕ್ಕೆ ಸಚಿವ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಖಾತೆ ಬದಲಾವಣೆ ಮಾಡಿದ ಹಿನ್ನೆಲೆಯಿಂದಾಗಿ ಬೇಸರಗೊಂಡಿರುವ ಸಚಿವ ಮಾಧುಸ್ವಾಮಿ, ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇಂದು ಸಿದ್ದಗಂಗಾ ಶ್ರೀ ಶಿವಕುಮಾರ ಶ್ರೀ ಗಳ ಎರಡನೇ ಪುಣ್ಯ ಸ್ಮರಣೆ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುಮಕೂರಿಗೆ ತೆರಳಿದ್ದು, ಈ ಕಾರ್ಯಕ್ರಮಕ್ಕೆ ಮಾಧುಸ್ವಾಮಿ ಗೈರಾಗುವ ಸಾಧ್ಯತೆಗಳಿವೆ. ಕಾನೂನು- ಸಂಸದೀಯ ವ್ಯವಹಾರ ಹಾಗೂ ಸಣ್ಣನೀರಾವರಿ ಸಚಿವರಾಗಿದ್ದ ಮಾಧುಸ್ವಾಮಿ, ಖಾತೆ ಬದಲಾವಣೆಯ ನಂತರ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಇನ್ನು ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಹಾಜರಾಗುವ ಬಗ್ಗೆ ಮಾತನಾಡಿದ ಮಾಧುಸ್ವಾಮಿ ಡಾ.ಶಿವಕುಮಾರ ಶ್ರೀಗಳ 2ನೇ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಕೇಂದ್ರ ಸಚಿವ ಸಾರಂಗಿಯವರು ಬರುತ್ತಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ. ನಾನ್ಯಾಕೆ ಅಸಮಾಧಾನ ಮಾಡಿಕೊಳ್ಳಲಿ. ನಾನು ಸಿಟ್ಟಾಗುವುದಕ್ಕೆ ಖಾತೆ ಬದಲಾವಣೆಗೆ ಏನು ಸಂಬಂಧ ಎಂದು ಹೇಳಿದ್ದರು.