ಲೋಕಸಭಾ ಚುನಾವಣೆ ಕೊನೆ ಮತದಾನದ ಕ್ಲೈಮಾಕ್ಸ್!
– ಬಿಜೆಪಿಯೋ..ಇಂಡಿಯಾ’ ಮೈತ್ರಿಕೂಟವೋ…?
– ಜೂನ್ 1ರಂದು ಮಹತ್ವದ ಸಭೆ ಕರೆದ ‘ಇಂಡಿಯಾ’ ಮೈತ್ರಿಕೂಟ!
– ಮೋದಿ ಮತ್ತೆ ಪ್ರಧಾನಿ? ದೇಶದಲ್ಲಿ ಮೋದಿ ಹವಾ!
NAMMUR EXPRESS NEWS
ನವದೆಹಲಿ : ಲೋಕಸಭಾ ಚುನಾವಣೆ 2024ರ ಕೊನೆಯ ಹಂತದ ಮತದಾನ ಬಾಕಿ ಇದೆ. ಜೂನ್ 1ರ ಶನಿವಾರ ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರ ಮಂಗಳವಾರ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಇಡೀ ದೇಶ ಫಲಿತಾಂಶಕ್ಕಾಗಿ ಕಾದು ಕುಳಿತಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಎದುರಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾಗಿದೆ. ಅಂತಿಮ ಹಂತದ ಮತದಾನ ನಡೆಯುವ ಜೂನ್ 1ರಂದು ಇಂಡಿಯಾ ಮೈತ್ರಿಕೂಟ ಮಹತ್ವದ ಸಭೆಯನ್ನು ಕರೆದಿದೆ. ಜೂನ್ 1ರಂದು ಅಂತಿಮ ಹಂತದ ಮತದಾನ ನಡೆದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತವೆ. ಅಂದೇ ಇಂಡಿಯಾ ಮೈತ್ರಿಕೂಟ ಸಭೆಯನ್ನು ಕರೆದಿದ್ದು, ಮೈತ್ರಿಕೂಟದ ಎಲ್ಲಾ ಪಕ್ಷದ ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.
ದೆಹಲಿಯಲ್ಲಿ ನಡೆಯುವ ಸಭೆ
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ 4 ದಿನಗಳ ಮೊದಲು ನವ ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಈ ಸಭೆ ನಡೆಯಲಿದೆ. ಜೂನ್ 2ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿಗೆ ಶರಣಾಗಬೇಕಿದೆ. ಇದಕ್ಕೂ ಮೊದಲು ಸಭೆ ನಡೆಯುತ್ತಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ. ಚುನಾವಣಾ ಫಲಿತಾಂಶ ಏನಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪ್ರಚಾರ, ಮತದಾನ ಪ್ರಮಾಣ, ಎಕ್ಸಿಟ್ ಪೋಲ್ ಫಲಿತಾಂಶದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಇಂಡಿಯಾ ಮೈತ್ರಿಕೂಟದ ಸಭೆಗೆ ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಅನೇಕ ನಾಯಕರಿಗೆ ಆಹ್ವಾನ ನೀಡಲಾಗಿದೆ.
ಇಂಡಿಯಾ ಮೈತ್ರಿಕೂಟಕ್ಕೆ ಗೆಲುವಿನ ಭರವಸೆ!
ಶನಿವಾರ 6ನೇ ಹಂತದ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಇಂಡಿಯಾ ಮೈತ್ರಿಕೂಟ ಸರಳ ಬಹುಮತದ 272 ಸೀಟುಗಳನ್ನು ಪಡೆಯಲಿದೆ. ನಮ್ಮ ಗುರಿ 350 ಸೀಟುಗಳನ್ನು ಪಡೆಯುವುದು ಎಂದು ಹೇಳಿತ್ತು. ಎನ್ಡಿಎ ಮೈತ್ರಿಕೂಟವನ್ನು ಇಂಡಿಯಾ ಈ ಬಾರಿ ಅಧಿಕಾರದಿಂದ ದೂರ ಇಡಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದರು. ದೇಶದಲ್ಲಿ ಇದು ವರೆಗೂ 6 ಹಂತದ ಲೋಕಸಭೆ ಚುನಾವಣೆಯ ಮತದಾನ ನಡೆದಿದೆ. 486 ಸೀಟುಗಳಿಗೆ ಮತದಾನ ಪೂರ್ಣಗೊಂಡು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. 28 ಪಕ್ಷಗಳನ್ನು ಒಳಗೊಂಡಿರುವ ಇಂಡಿಯಾ ಮೈತ್ರಿಕೂಟ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವನ್ನು ಎದುರಿಸುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿದ್ದೇನು..?
ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಜನ ಹಾಗೂ ಮೋದಿ ನಡುವೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಆಡಳಿತದಿಂದ ಬೇಸತ್ತಿರುವ ಜನರು ಇಂಡಿಯಾ ಮೈತ್ರಿಕೂಟದ ಪರವಾಗಿ ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ” ಎಂದರು. ಸದ್ಯದ ಪರಿಸ್ಥಿತಿಯಲ್ಲಿ ಜನರು ಇಂಡಿಯಾ ಮೈತ್ರಿಕೂಟದ ಕೈ ಹಿಡಿದಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಇದೆಲ್ಲವನ್ನೂ ನೋಡಿ ಜನರು ಮತದಾನ ಮಾಡಿದ್ದಾರೆ” ಎಂದು ಖರ್ಗೆ ಹೇಳಿದರು. ನರೇಂದ್ರ ಮೋದಿ ಅವರಿಗೆ ಈ ಬಾರಿ 400 ಸ್ಥಾನ ಬರುವುದಿಲ್ಲ ಎಂಬುದು ಗೊತ್ತಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 400ರೊಳಗೆ ಬರುತ್ತದೆ ಎಂದು ಹೇಳಿದ್ದಾರೆ. ಕೇರಳ, ಮಹಾರಾಷ್ಟ್ರದಲ್ಲಿ ನಮಗೆ 30ಕ್ಕಿಂತಲೂ ಹೆಚ್ಚು ಸ್ಥಾನ ಲಭಿಸಲಿದೆ” ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.
ಮತ್ತೆ ಮೋದಿ ಪ್ರಧಾನಿ ಸಾಧ್ಯತೆ!?
ದೇಶದಲ್ಲಿ ಈ ಚುನಾವಣೆಯಲ್ಲೂ ಎಲ್ಲೆಡೆ ಮೋದಿ ಹವಾ ಕಂಡು ಬಂದಿದೆ. ಸುಮಾರು 350-400 ಸ್ಥಾನ ಎನ್ ಡಿ ಎ ಮೈತ್ರಿ ಕೂಟಕ್ಕೆ ಲಭಿಸಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಮೋದಿ ಪ್ರಧಾನಿ ಅಗಲಿದ್ದಾರೆ ಎಂದು ಚುನಾವಣೆ ಸಮೀಕ್ಷೆಗಳು ಹೇಳುತ್ತಿವೆ.