ತೀರ್ಥಹಳ್ಳಿಗೆ ಬಂದ ಕಾಡಾನೆ ಮಂಡಗದ್ದೆ ಹೋಬಳಿಯಲ್ಲಿ ಹಾವಳಿ!
– ಬೆಜ್ಜವಳ್ಳಿ ದಾಟಿ ವಿರೂಪಾಪುರ ತಲುಪಿದ ಆನೆಗಳು!
– ಆನೆ ಆಯ್ತು ಈಗ ಎಲ್ಲೆಡೆ ಕಾಡು ಕೋಣ ಹಾವಳಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ, ಶೃಂಗೇರಿ, ಹೊಸನಗರ, ಕೊಪ್ಪದಲ್ಲಿ ಭಾರೀ ಹಾವಳಿ ಮಾಡಿ ತೀರ್ಥಹಳ್ಳಿಗೆ ಆಗಮಿಸಿದ್ದ ಕಾಡು ಆನೆಗಳು ಇದೀಗ ಕುಡುಮಲ್ಲಿಗೆ ಬೆಜ್ಜವಳ್ಳಿ ಕಡೆಗೆ ಪಯಣ ಬೆಳೆಸಿವೆ.
ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನಳ್ಳಿ ರೈತ ಬಾಲರಾಜ್ ಗೌಡ ಎಂಬುವವರ ಗದ್ದೆಯನ್ನು ಕಾಡಾನೆಗಳು ಲೂಟಿ ಮಾಡಿವೆ. ಲೂಟಿಯಿಂದಾಗಿ ಬಾಲರಾಜ್ ಅವರ ಗದ್ದೆಯ ಬಹುಪಾಲು ಭಾಗಗಳಲ್ಲಿ ಕಾಡಾನೆ ಓಡಾಟ ನಡೆಸಿದೆ. ಜೊತೆಗೆ ಚಿಗುರೊಡೆದ ಭತ್ತದ ಸಸಿಗಳನ್ನು ತಿಂದು ಹಾಳು ಮಾಡಿವೆ.
ಬೆಜ್ಜವಳ್ಳಿ ದಾಟಿ ವಿರೂಪಾಪುರ ತಲುಪಿದ ಆನೆಗಳು!
ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸಿದ್ದ ಎರಡು ಕಾಡಾನೆಗಳು ಹೆದ್ದೂರಿನಲ್ಲಿ ಸೋಮವಾರ ವಿಶ್ರಾಂತಿ ಪಡೆದು ರಾತ್ರಿ ಸಂಚಾರ ಪುನರ್ ಆರಂಭಿಸಿದೆ. ಬೆಳಿಗ್ಗೆ ಅರಣ್ಯ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಮಹಿಷಿ, ಬೆಜ್ಜವಳ್ಳಿ ಮಾರ್ಗವಾಗಿ ವಿರೂಪಾಪುರ ಗ್ರಾಮಕ್ಕೆ ತೆರಳಿವೆ. ಬಾವೀಕೈಸರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರೂಪಾಪುರ ಗ್ರಾಮದಲ್ಲಿ ಆನೆಯ ಹೆಜ್ಜೆಗಳು, ಲದ್ದಿಗಳು ಕಾಣಿಸಿಕೊಂಡಿದ್ದು ಎಲ್ಲಿ ವಿಶ್ರಾಂತಿ ಪಡೆದಿವೆ ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಒಟ್ಟಿನಲ್ಲಿ ಶೇಡ್ಗಾರು ಮಾರ್ಗವಾಗಿ ತೀರ್ಥಹಳ್ಳಿ ಪ್ರವೇಶಿದ ಕಾಡಾನೆ ಇದೀಗ ಮುತ್ತೂರು, ಕಸಬಾ ಹೋಬಳಿ ಮುಗಿಸಿ ಇದೀಗ ಮಂಡಗದ್ದೆ, ಅಗ್ರಹಾರ ಹೋಬಳಿಗಳನ್ನು ಪ್ರವೇಶಿಸಿದೆ. ಮಂಗಳವಾರ ಅಲ್ಲಿ ವಿಶ್ರಾಂತಿ ಪಡೆದ ನಂತರ ಮತ್ತೆಲ್ಲಿ ಹೋಗಲಿದೆ ಎಂದು ಕಾದು ನೋಡಬೇಕಿದೆ.








