ತೀರ್ಥಹಳ್ಳಿಯಲ್ಲಿ ಮತದಾನ: ಪತಿ ತೀರಿಕೊಂಡರೂ ಮತ ಹಾಕಿದ ಮಹಿಳೆ!
– ಸುಳುಗೋಡು ಯಡೂರು ಬೂತ್ ನಂ 171 ನಲ್ಲಿ ಕೈಕೊಟ್ಟ ಮತಯಂತ್ರ: 45 ನಿಮಿಷ ಮತದಾನ ವಿಳಂಬ
– ಸಿಂದೂವಾಡಿ ಮತಕೇಂದ್ರದಲ್ಲಿ ಕೈಕೊಟ್ಟ ಮತ ಯಂತ್ರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಜನ ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಈ ನಡುವೆ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಮತದಾನ ವಿಳಂಬವಾಯಿತು. ತೀರ್ಥಹಳ್ಳಿ ತಾಲ್ಲೂಕಿನ ಸುಳುಗೋಡು ಗ್ರಾಮದಲ್ಲಿ ಬೂತ್ ನಂ 171ನಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಮತ ಚಲಾಯಿಸಲು ಬಂದ ಮತದಾರರು 45 ನಿಮಿಷಗಳ ಕಾಲ ಕಾಯಬೇಕಾಯಿತು. ಕೂಲಿ ಕೆಲಸಕ್ಕೆ ಹೋಗಬೇಕಿದ್ದ ಕಾರ್ಮಿಕರು, ಬೇಗ ಮತದಾನಕ್ಕೆ ಅವಕಾಶ ಸಿಗದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಪತಿ ತೀರಿಕೊಂಡ ಸುದ್ದಿ ತಿಳಿದ ಮೇಲೂ ಮತ ಹಾಕಿದ ಮಹಿಳೆ
ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಪಂಚಾಯತ್ ಆಡುಗೋಡಿನ ಕಲಾವತಿ ವೆಂಕಟೇಶ್ ಇವರ ಪತಿ ವೆಂಕಟೇಶ್ ಮಂಗಳವಾರ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಓಟು ಹಾಕಲು ಹೊರಡುವುದಕ್ಕಿಂತ ಮುಂಚೆ ಕಲಾವತಿ ವೆಂಕಟೇಶ್ ಅವರಿಗೆ ವಿಷಯ ತಿಳಿದಿದೆ. ದುಃಖದಲ್ಲೂ ಗಂಡ ತೀರಿಕೊಂಡ ಸುದ್ದಿ ತಿಳಿದ ಮೇಲೂ ದೇಶದ ಭವಿಷ್ಯಕ್ಕಾಗಿ ಓಟು ಹಾಕಲೇಬೇಕು ಎಂದು ಹಠ ಮಾಡಿ ಓಟು ಮಾಡಿ ಮಾದರಿಯಾದರು. ಇವರ ಈ ಮಾದರಿ ಕಾರ್ಯ ಎಲ್ಲೆಡೆ ಮೆಚ್ಚುಗೆ ಕಾರಣವಾಗಿದೆ.
– ಸಿಂದೂವಾಡಿ ಮತಕೇಂದ್ರದಲ್ಲಿ ಕೈಕೊಟ್ಟ ಮತ ಯಂತ್ರ!
ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಹೋಬಳಿಯ ಸಿಂಧೂವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮತಗಟ್ಟೆ ಸಂಖ್ಯೆ 128ರಲ್ಲಿ ಮತದಾನ ಪ್ರಕ್ರಿಯೆ ವೇಳೆ ತಾಂತ್ರಿಕ ದೋಷದಿಂದ ಮತಯಂತ್ರ ಕೈಕೊಟ್ಟಿದೆ. ಬೆಳಗ್ಗಿನಿಂದ ಸುಮಾರು 28 ಮತ ಚಲಾವಣೆಯ ಬಳಿಕ ಮತಯಂತ್ರ ಹಾಳಾಗಿರುವುದು ಮತದಾರರಲ್ಲಿ ಕೆಲ ಸಮಯದ ಕಾಲ ಆತಂಕ ಸೃಷ್ಟಿಸಿತ್ತು. ಚಲಾವಣೆಯಾದ ಮತಗಳು ಕೂಡ ಏನಾದವೂ ಎಂಬ ಗೊಂದಲ ನಿರ್ಮಾಣವಾಗಿತ್ತು. ತಕ್ಷಣ ಬೂತ್ ಸಿಬ್ಬಂದಿಗಳು ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು ತಾಂತ್ರಿಕ ಸಿಬ್ಬಂದಿಗಳನ್ನು ಕರೆಸಿಕೊಂಡು ಇವಿಎಂ ಮಿಷನ್ ದುರಸ್ಥಿಗೊಳಿಸಿದ್ದಾರೆ. ಈ ಪ್ರಕ್ರಿಯೆ ಸುಮಾರು 20 ನಿಮಿಷ ನಡೆದಿದ್ದರಿಂದ ಸಿಂಧೂವಾಡಿ ಮತಕೇಂದ್ರದಲ್ಲಿ ಕೆಲ ಕಾಲ ಗೊಂದಲಕ್ಕೆ ಈಡಾಗಿತ್ತು.