ತೀರ್ಥಹಳ್ಳಿಯಲ್ಲಿ ಅಂಗನವಾಡಿ ಬಂದ್!
– ನ್ಯಾಯಕ್ಕಾಗಿ ಕಾರ್ಯಕರ್ತೆಯರ ಪ್ರತಿಭಟನೆ
– ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ
NAMMUR EXPRESS NEWS
ತೀರ್ಥಹಳ್ಳಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗೌರವ ಧನ ಹೆಚ್ಚಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್’ನ ತೀರ್ಥಹಳ್ಳಿ ತಾಲ್ಲೂಕು ಸಮಿತಿ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್’ಗೆ ಮನವಿ ಸಲ್ಲಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ₹15ಸಾವಿರ, ಸಹಾಯಕಿಯರಿಗೆ ₹10 ಸಾವಿರ ಗೌರವಧನ ಹೆಚ್ಚಿಸಬೇಕು. ನಿವೃತ್ತರಿಗೆ ₹3 ಲಕ್ಷ ಆರ್ಥಿಕ ನೆರವು ನೀಡಬೇಕು. ಅಂಗನವಾಡಿ ವ್ಯವಸ್ಥೆ ವಿರುದ್ಧವಾಗಿರುವ ಶಿಶುಪಾಲನಾ ಕೇಂದ್ರ ಮತ್ತು ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ಸರ್ಕಾರ ಹೊರಡಿಸಿರುವ ಆದೇಶ ವಾಪಸ್ ಪಡೆಯಬೇಕು.
ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ನಡೆಸಲು ಸೌಲಭ್ಯ ಕಲ್ಪಿಸಬೇಕು. ಉಪಧನ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅರ್ಹರು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತರು ಹಾಗೂ 600ಕ್ಕೂ ಹೆಚ್ಚು ಸಹಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಗಾಯತ್ರಿ ಹೆಗ್ಡೆ, ಶ್ರೀಮತಿ ಕುಸುಮ ಸೇರಿದಂತೆ ಹಲವರು ಇದ್ದರು.