ಶ್ರೀ ಕ್ಷೇತ್ರ ಉಬ್ಬೂರಿನಲ್ಲಿ ಅದ್ದೂರಿ ಕಾರ್ತಿಕ ದೀಪೋತ್ಸವ
– ಆರಗ, ಜಯಪ್ರಕಾಶ್, ಪ್ರಕಾಶ್ ಪಂಡಿತ್, ಕಾವ್ಯಶ್ರೀ, ಭಾನುಮತಿ, ರಾಜೇಂದ್ರ ಅವರಿಗೆ ಸನ್ಮಾನ
– ಉದ್ಯಮಿ ಯೋಗಿ ಎನ್ ಗೌಡ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಉಬ್ಬೂರಿನಲ್ಲಿ ಇತ್ತೀಚಿಗೆ ಶ್ರೀ ಸಿದ್ದೇಶ್ವರ ಮತ್ತು ಕುಮಾರರಾಮ ಸ್ವಾಮಿ ದೇವರ ಕಾರ್ತಿಕ ದೀಪೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
ವಿಶೇಷ ಹೋಮ ಹವನ, ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ, ಸನ್ಮಾನ ಸಮಾರಂಭ, ಯಕ್ಷಗಾನ ಭಕ್ತಿ ಭಾಗವತಿಕೆ, ಕಾರ್ತಿಕ ದೀಪೋತ್ಸವ ನಡೆಯಿತು.
ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರದಲ್ಲಿ ಒಂದಾದ ಶ್ರೀ ಕ್ಷೇತ್ರ ಉಳ್ಳೂರಿನ ಶ್ರೀ ಸಿದ್ದೇಶ್ವರ ಮತ್ತು ಕುಮಾರರಾಮ ಸ್ವಾಮಿ ದೇವಸ್ಥಾನ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷದಂತೆ ನವೆಂಬರ್ 3ರಂದು ಅದ್ದೂರಿಯಾಗಿ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ, ಯಕ್ಷಗಾನ ಭಕ್ತಿ ಭಾಗವತಿಕೆ ಹಾಗೂ ಕಾರ್ತಿಕ ದೀಪೋತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಬೆಳಿಗ್ಗೆ 6 ಗಂಟೆಗೆ ಮೊದಲುಗೊಂಡು ಶ್ರೀ ಸಿದ್ದೇಶ್ವರ ದೇವರಿಗೆ ಬ್ರಹ್ಮ ಕುಂಭ ಸ್ಥಾಪನೆ, ಕಲಾ ಹೋಮ, ಕುಂಭಾಭಿಷೇಕ, ರುದ್ರಾಭಿಷೇಕ ಮಹಾಪೂಜೆ, ಶ್ರೀ ವೀರಭದ್ರ ದೇವರಿಗೆ ಕಲಾತತ್ವ ಕಲಶಾಭಿಷೇಕ ಪೂಜಾ, ಶ್ರೀ ನಾಗ ದೇವರಿಗೆ ಪರಮಾನ ಕಲಶಾಭಿಷೇಕ ಪೂಜೆ, ಸಪರಿವಾರ ದೈವಗಳಿಗೆ ನವಕ ಪ್ರಧಾನ ಹೋಮ, ಕುಂಬಾಭಿಷೇಕ ಬಳಿಕ ಮಧ್ಯಾಹ್ನ 2:30 ರಿಂದ 4:30ರ ವರೆಗೆ ಸ್ಥಳೀಯ ಮಕ್ಕಳಿಂದ ಹಾಗೂ ಕಲಾವಿದರಿಂದ ವಿವಿಧ ಆಕರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಈ ವೇದಿಕೆ ಕಾರ್ಯಕ್ರಮವನ್ನು ತೀರ್ಥಹಳ್ಳಿ ಕ್ಷೇತ್ರದ ಶಾಸಕರೂ ಮಾಜಿ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ನಾಡಿನ ಖ್ಯಾತ ಯಕ್ಷಗಾನ ಭಾಗವತರಾದ ಶ್ರೀಮತಿ ಕಾವ್ಯಶ್ರೀ ಅಜೇರು ತಂಡದವರಿಂದ ಭಕ್ತಿ ಭಾಗವತಿಕೆ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಸಿದ್ದೇಶ್ವರ ಹಾಗೂ ಪರಿವಾರ ದೇವರುಗಳ ಭವ್ಯ ದೀಪೋತ್ಸವ, ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಿತು..
ಆರಗ, ಜಯಪ್ರಕಾಶ್, ಪ್ರಕಾಶ್ ಪಂಡಿತ್, ಕಾವ್ಯಶ್ರೀ ಅಜೇರು ಅವರಿಗೆ ಸನ್ಮಾನ:
ಸರ್ಕಾರದ ನಿವೃತ್ತ ಲೆಕ್ಕಾಧಿಕಾರಿಗಳು ಹಾಗೂ ಬೆಂಗಳೂರು ಸಹ್ಯಾದ್ರಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಸಿ. ಜಯಪ್ರಕಾಶ್, ನಾಟಿ ವೈದ್ಯರಾದ ಪ್ರಕಾಶ್ ಪಂಡಿತ್ ಹಾಗೂ ಖ್ಯಾತ ತೆಂಕುತಿಟ್ಟಿನ ಮಹಿಳಾ ಯಕ್ಷಗಾನ ಭಾಗವತೆಯಾದ ಕಾವ್ಯಶ್ರೀ ಅಜೇರು ಇವರನ್ನು ಸನ್ಮಾನಿಸಲಾಯಿತು.
ಕಾರ್ತಿಕ ದೀಪೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಡಾ. ಭಾನುಮತಿ, ಐಎ ಎಸ್ ಅಧಿಕಾರಿ ರಾಜೇಂದ್ರ ಅವರ ಪರವಾಗಿ ಕಾನಳ್ಳಿ ವಿಶ್ವನಾಥ್ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಯೋಗಿ ಎನ್ ಗೌಡ, ಕಾರ್ಯಾಧ್ಯಕ್ಷರಾದ ಯು.ಟಿ. ವಾಸಪ್ಪ, ಶ್ರೀಮತಿ ಕಲ್ಪನಾ ಯೋಗಿ ಎನ್ ಗೌಡ, ಲೆಕ್ಕಪರಿಶೋಧಕರಾದ ಯು ಟಿ ಸತೀಶ್, ಖಜಾಂಚಿ ಯು ಜೆ ಮಹೇಶ್, ಅನುಪ್ ವೈ ಗೌಡ, ಹೆಚ್.ಸಿ ಜಯಪ್ರಕಾಶ್, ರಾಮಣ್ಣ, ಡಾ.ಭಾನುಮತಿ, ಕಾನಳ್ಳಿ ವಿಶ್ವನಾಥ್, ಗಣಪತಿ, ಶಶಿಕಾಂತ್ ಅತ್ತಿಕೊಡಿಗೆ, ವಿಷ್ಣುಮೂರ್ತಿ ಇತರರು ಇದ್ದರು.
ಯೋಗಿ ಎನ್ ಗೌಡ ಹಾಗೂ ಅವರ ಕುಟುಂಬ ವರ್ಗ ಪ್ರತಿಷ್ಠಾನ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಊರಿನ ಗ್ರಾಮಸ್ಥರು ಅತ್ಯುತ್ಸವದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.








