ತೀರ್ಥಹಳ್ಳಿಯಲ್ಲಿ ಅವ್ಯವಸ್ಥೆಯ ಆಗರವಾದ ಕ್ರೀಡಾಕೂಟ
– ಕಾಟಾಚಾರಕ್ಕೆ ಹೋಬಳಿ, ತಾಲ್ಲೂಕು ಮಟ್ಟದ ಕ್ರೀಡಾಕೂಟ ಆಯೋಜನೆ
– ಸಾರ್ವಜನಿಕರ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ : ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ವಾಲಿಬಾಲ್ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು. ಕ್ರೀಡಾಪಟುಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಆಡಳಿತ, ಕ್ಷೇತ್ರ ಶಿಕ್ಷಣಾ ಇಲಾಖೆ ವಿಫಲವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಕ್ರೀಡಾಕೂಟಕ್ಕೆ ಅಗತ್ಯವಾಗಿ ಬೇಕಿದ್ದ ವಾಲಿಬಾಲ್, ನಟ್, ಕೋರ್ಟ್, ಕ್ರೀಡಾ ಉಪಕರಣ ಇಲ್ಲದೆ ವಿದ್ಯಾರ್ಥಿಗಳೇ ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯ ನಿರ್ಮಾಣವಾಗಿತ್ತು. ಬಿಸಿಲಿನ ಬೇಗೆಗೆ ದಣಿವರಿಸಿಕೊಳ್ಳಲು ನೀರು ಕೂಡ ಆಯೋಜಕರು ವ್ಯವಸ್ಥೆ ಮಾಡದ ಹಿನ್ನಲೆಯಲ್ಲಿ ಸೇರಿದ್ದ ಕ್ರೀಡಾ ಪ್ರೇಮಿಗಳು ಶಪಿಸಿದರು.
ಕಾಟಾಚಾರಕ್ಕೆ ಅವಸರದ ಕ್ರೀಡಾಕೂಟ ನಡೆಸಿದ್ದಾರೆ. 5 ರಿಂದ 7ನೇ ತರಗತಿ ಮಕ್ಕಳ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಕೂಟ ಏಕಕಾಲದಲ್ಲಿ ನಡೆಸುವ ಮೂಲಕ ವಿದ್ಯಾರ್ಥಿಗಳ ಕ್ರೀಡಾ ಸ್ಥೈರ್ಯ ಹಾಳುಗೆಡವಲಾಗಿದೆ. ಬೆಳಿಗ್ಗೆ 9 ರಿಂದ ಹೋಬಳಿ ಮಟ್ಟ ನಡೆಸಿ ನಂತರ ಮಧ್ಯಾಹ್ನದ ಹೊತ್ತಿಗೆ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆದಿದೆ. ಶಿಕ್ಷಣ ಇಲಾಖೆ ಇಂತಹ ಅವಸರದ ಧೋರಣೆ ಯಾಕೆ ಅನುಸರಿಸಬೇಕು ಎಂದು ಶಿಕ್ಷಕರು ಪ್ರಶ್ನಿಸಿದರು.
300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ 4 ಕೋರ್ಟ್ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಥ್ರೋಬಾಲ್ ಕೋರ್ಟ್ ಕೂಡ ಇದ್ದುದ್ದರಿಂದ ಮಕ್ಕಳಿಗೆ ಆಟವಾಡಲು ಸಮಸ್ಯೆಯಾಯಿತು. ಕಳೆಗುಂದಿದ ಹಳೆಯ ಬಾಲ್ಗಳನ್ನು ಆಟದಲ್ಲಿ ಬಳಸಿರುವುದು ವಿವಾದಕ್ಕೆ ಗುರಿಯಾಯಿತು. ಅಷ್ಟು ವಿದ್ಯಾರ್ಥಿಗಳು ಮಧ್ಯಾಹ್ನ ಆಟದ ನಡುವೆ ಊಟಕ್ಕೆಂದು ಸ್ಥಳೀಯ ಹೋಟಲ್ಗಳಿಗೆ ತೆರಳಿದ್ದರು. ಆದರೆ ಅಲ್ಲಿ ಊಟ ಸಿಗದೆ ಪರದಾಡುವಂತಾಯಿತು. ಗಾಯಾಳು ಕ್ರೀಡಾಪಟುಗಳಿಗೆ ಪ್ರಾಥಮಿಕ ಚಿಕಿತ್ಸಾ ಸೌಲಭ್ಯ ಕೂಡ ಸ್ಥಳದಲ್ಲಿ ಇಲ್ಲದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಯಿತು.
ಸಾರ್ವಜನಿಕರ ಅನಿಸಿಕೆ :
1. 30 ವರ್ಷಗಳಿಂದ ಕ್ರೀಡೆ ಪ್ರೋತ್ಸಾಹಿಸಿಕೊಂಡು ಬಂದಿದ್ದೇನೆ. ಎಲ್ಲಿಯೂ ಇಂತಹ ಕ್ರೀಡಾಕೂಡ ಕಂಡಿರಲಿಲ್ಲ. ಸರ್ಕಾರ ಸಾಕಷ್ಟು ಹಣ ವ್ಯಯಿಸಿ ಮಕ್ಕಳನ್ನು ಹುರಿದುಂಬಿಸುತ್ತದೆ. ಇಲಾಖೆ ಕನಿಷ್ಟ ಜ್ಞಾನವಿಲ್ಲದೆ ಕಾಟಾಚಾರಕ್ಕೆ ಕ್ರೀಡಾಕೂಟ ನಡೆಸುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
– ಉಮರ್ ಫಾರುಕ್, ಗುಡ್ಡೇಕೇರಿ ನೇಚರ್ ಕ್ಲಬ್ ಕಾರ್ಯದರ್ಶಿ
2. ಸೆಪ್ಟೆಂಬರ್ 9 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಇರುವುದರಿಂದ ಅವಸರದಲ್ಲಿ ಸ್ಥಳೀಯ ಕ್ರೀಡಾಕೂಟ ನಡೆಸಲಾಗಿದೆ. 3 ದಿನಗಳ ಹಿಂದೆ ಕ್ರೀಡೆ ಆಯೋಜನೆಗೊಂಡಿದ್ದರಿಂದ ದಾನಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಕೆಲವು ಗೊಂದಲಗಳು ಆಗಿದ್ದು ಬಗೆಹರಿಸಲಾಗಿದೆ.
-ವೈ. ಗಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿ