ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ
* ಕನ್ನಡ ಹೋರಾಟಗಾರ, ಸಮಾಜವಾದಿ ಹಿರಿಯ ಕೊಂಡಿಗೆ ರಾಜ್ಯದ ನಮನ
* ಮಲೆನಾಡು ಕಂಡ ಅಪ್ರತಿಮ ನಾಯಕನಿಗೆ ಒಲಿದ ಪ್ರಶಸ್ತಿ
ಕನ್ನಡದ ಕಣ್ಮಣಿಗಳು-1
ವಿಶೇಷ ವರದಿ:ಉಮೇಶ್ ದೇಮ್ಲಾಪುರ
ಶಿವಮೊಗ್ಗ: ಮಾಜಿ ಶಾಸಕರು, ಸಮಾಜವಾದಿ ಹೋರಾಟಗಾರರು ಆದ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಮೂಲಕ ಸಮಾಜವಾದಿ ಹಿರಿಯ ಕೊಂಡಿ ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಮಲೆನಾಡಿಗರ ಸಂತಸಕ್ಕೆ ಕಾರಣವಾಗಿದೆ.
ಕನ್ನಡದ ಕಾವ್ಯ, ನಾಟಕ, ಸಾಹಿತ್ಯ, ರಾಜಕೀಯ ಹಾಗೂ ಹೋರಾಟದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಕೋಣಂದೂರು ಲಿಂಗಪ್ಪ ಅವರು ಈ ಬಾರಿ 2025ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೋಣಂದೂರು ಲಿಂಗಪ್ಪ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಉಳುವವನೇ ಹೊಲದೊಡೆಯ ಚಳುವಳಿಯ ಮೂಲಕ ಗೇಣಿದಾರರ ರೈತರಿಗೆ ಭೂ ಒಡೆತನ ಸಿಗುವಂತೆ ಮಾಡಿದ ಅಪ್ಪಟ ಸಮಾಜವಾದಿ ಹೋರಾಟಗಾರರಾಗಿದ್ದಾರೆ.
ಬಹುಮುಖ ಪ್ರತಿಭೆ ಲಿಂಗಪ್ಪ
ಕೋಣಂದೂರು ಮೂಲದ ಈ ಬಹುಮುಖ ಪ್ರತಿಭೆ ಮಾಜಿ ಶಾಸಕರಾಗಿ, ಕನ್ನಡ ಪರ ಹೋರಾಟಗಾರರಾಗಿ, ಕವಿಯಾಗಿ, ಸಾಹಿತಿಯಾಗಿ, ನಾಟಕಕಾರರಾಗಿ ಹಾಗೂ ಸಮಾಜ ಸೇವಕರಾಗಿ ವಿಶಿಷ್ಟ ಗುರುತಿಸಿಕೊಂಡಿದ್ದಾರೆ. ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಲಿಂಗಪ್ಪ ಅವರು ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರ ರಾಜಕೀಯದ ಮಾದರಿಯಾಗಿದ್ದರು. ರಾಜಕೀಯದಲ್ಲಿ ಇದ್ದಾಗ ಕನ್ನಡದ ಪರ ಹೋರಾಟದಿಂದ ಹಿಂದೆ ಸರಿಯದೆ, ಜನರ ಹಿತಕ್ಕಾಗಿ ಹೋರಾಟ ನಡೆಸಿದ ನಾಯಕನಾಗಿ ಇಂದಿಗೂ ಜನಮನದಲ್ಲಿ ಅಚ್ಚಳಿಯದ ಗುರುತು ಬಿಟ್ಟಿದ್ದಾರೆ.
ಲಿಂಗಪ್ಪ ಅವರ ಸಾಹಿತ್ಯ ಕಾರ್ಯ ಚಟುವಟಿಕೆಗಳು ಅತ್ಯಂತ ವಿಶಾಲ. ನಾಟಕಗಳು, ಕವನಗಳು, ಲೇಖನಗಳು, ಪತ್ರಗಳು, ಪದಸಂಗ್ರಹಗಳು ಇವೆಲ್ಲವೂ ಅವರ ಸಾಹಿತ್ಯಪ್ರತಿಭೆಯ ಸಾಕ್ಷ್ಯ. ಅಂಟಿಗೆ ಪಿಂಡಿಗೆ ಪದಗಳ ಸಂಗ್ರಹ ಎಂಬಂತಹ ಅಪರೂಪದ ಭಾಷಾ ಸಂಗ್ರಹ ಕಾರ್ಯದಿಂದ ಅವರು ಕನ್ನಡದ ನಾಡಿನ ಮಾತಿನ ಪರಂಪರೆಯನ್ನು ಉಳಿಸಲು ಶ್ರಮಿಸಿದ್ದಾರೆ. ಈ ಎಲ್ಲ ಬರಹಗಳನ್ನು ಸಂಗ್ರಹಿಸಿದರೆ ಮತ್ತೊಂದು ವಿಶಿಷ್ಟ ಕೃತಿ ಮೂಡಿ ಬರುವಷ್ಟು ಅವರ ಸಾಹಿತ್ಯ ಸಂಪತ್ತು ವಿಶಾಲವಾಗಿದೆ. ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಬಳಿಯ ದೇಮ್ಲಾಪುರ ಅವರ ಮೂಲಸ್ಥಳವಾಗಿದ್ದು, ಅಲ್ಲಿಯೇ ಅವರ ಪೂರ್ವಜರ ನೆಲೆ ಇದೆ. ಪ್ರಸ್ತುತ ಶಿವಮೊಗ್ಗದಲ್ಲೇ ವಾಸವಿದ್ದರೂ, ದೇಮ್ಲಾಪುರದ ತಮ್ಮ ಕೃಷಿ ಜಮೀನಿನಲ್ಲಿ ನಿರಂತರ ಕೃಷಿ ಚಟುವಟಿಕೆ ನಡೆಸುತ್ತಾರೆ. ಹಬ್ಬ ಹರಿದಿನ, ದೇವರ ಹರಕೆ ಸಂದರ್ಭಗಳಲ್ಲಿ ಅವರು ಅಲ್ಲೇ ಕೆಲವು ತಿಂಗಳು ಕಾಲವ್ಯಯ ಮಾಡುತ್ತಿದ್ದು, ಗ್ರಾಮೀಣ ಜೀವನದ ನೆಲದ ನಂಟು ಕಳೆದುಕೊಳ್ಳದೆ ಉಳಿಸಿಕೊಂಡಿದ್ದಾರೆ.
ಸಾಹಿತ್ಯ, ಸಮಾಜ, ರಾಜಕೀಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ನೀಡಿದ ಅವರ ದೀರ್ಘಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಈ ವರ್ಷ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಸುದ್ದಿ ತೀರ್ಥಹಳ್ಳಿ ಮತ್ತು ಕೋಣಂದೂರಿನಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದೆ.
ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಸಾಹಿತ್ಯ ವಲಯದವರು ಹಾಗೂ ಕನ್ನಡ ಹೋರಾಟಗಾರರು ಪ್ರಶಸ್ತಿ ಪ್ರಕಟಣೆಯ ನಂತರ ಸಂತೋಷ ವ್ಯಕ್ತಪಡಿಸಿದ್ದಾರೆ.
ಲಿಂಗಪ್ಪನವರಂತಹ ಹೋರಾಟಗಾರರು, ಶಿಕ್ಷಕರು ಮತ್ತು ಸಾಹಿತಿಗಳು ಕನ್ನಡ ಸಂಸ್ಕೃತಿಯ ಜೀವಾಳ.ಅವರಂತಹವರ ಸೇವೆಗೆ ರಾಜ್ಯ ಪ್ರಶಸ್ತಿ ಸಿಕ್ಕಿರುವುದು ಕನ್ನಡದ ಗೌರವದ ಕ್ಷಣ ಎಂದು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಕೋಣಂದೂರು ಲಿಂಗಪ್ಪ ಅವರ ಜೀವನದ ಮೂಲ ಮಂತ್ರವೇ ಕನ್ನಡ, ಕೃತಿ ಮತ್ತು ಕಾಯಕ. ಅವರು ಕನ್ನಡದ ಪರ ಹೋರಾಡಿದಂತೆಯೇ, ಸಾಹಿತ್ಯದ ಮೂಲಕವೂ ಜನಮನ ತಟ್ಟಿದ್ದಾರೆ. ಕನ್ನಡ ರಾಜ್ಯೋತ್ಸವದ ಈ ಗೌರವವು ಅವರ ಜೀವನಸಾಧನೆಗೆ ತಕ್ಕ ರೀತಿಯ ಮಾನ್ಯತೆ ಎಂದು ಸಾಹಿತ್ಯ ಲೋಕದಲ್ಲಿ ಪ್ರಶಂಸೆಯ ಸುರಿಮಳೆಯಾಗಿದೆ.








