ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಜೋರು
– ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ರೈತರ ಹೋರಾಟ
– ಜಾನುವಾರುಗಳನ್ನು ತಂದು ಪ್ರತಿಭಟಿಸುತ್ತೇವೆ: ಎಚ್ಚರಿಕೆ
NAMMUR EXPRESS NEWS
ತೀರ್ಥಹಳ್ಳಿ: ಯಾವ ಕಾರಣಕ್ಕೂ ಭೀಮನ ಕಟ್ಟೆ ಒಂದೇ ಭಾಗದಿಂದ ನೀರು ತೆಗೆಯುವುದಕ್ಕೆ ಬಿಡುವುದಿಲ್ಲ. ಯೋಜನೆ ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಜಾನುವಾರುಗಳನ್ನು ತಂದು ಪ್ರತಿಭಟಿಸುತ್ತೇವೆ ಎಂದು ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಪ್ರಮುಖರು ಎಚ್ಚರಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗದಲ್ಲಿ ಭೀಮೇಶ್ವರ ಉಳಿಸಿ ಹೋರಾಟ ಸಮಿತಿ ವತಿಯಿಂದ ಜಲಜೀವನ್ ಮಿಷನ್ ಅಡಿಯಲ್ಲಿ ಆರಂಭಿಸಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಭೀಮೇಶ್ವರ ಸಂಗಮ ಒಂದೇ ಭಾಗದಿಂದ ನೀರು ತೆಗೆಯುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು.
ಒಂದೇ ಭಾಗದಿಂದ ನೀರಿನ ತೆಗೆದು ಇಡೀ ತೀರ್ಥಹಳ್ಳಿ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಕೊಡುವುದಕ್ಕೆ ಸಾಧ್ಯವಿಲ್ಲ ಇದೊಂದು ಅವೈಜ್ಞಾನಿಕ ಯೋಜನೆ. ರೈತರ ವಿರೋಧದ ನಡುವೆಯೂ ಈ ಯೋಜನೆ ಕಾಮಗಾರಿಗಳನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೋಡ್ಲು ವೆಂಕಟೇಶ್, ವೆಂಕಟೇಶ್ ಹೆಗ್ಡೆ, ರಾಘವೇಂದ್ರ ತಲಬಿ ಸೇರಿದಂತೆ ನೂರಾರು ಮಂದಿ ಯುವಕರು ಇದ್ದರು.