ತೀರ್ಥಹಳ್ಳಿಯಲ್ಲಿ ಗೀತಾ ಶಿವರಾಜ್ ಕುಮಾರ್ ಸ್ವಾಗತಕ್ಕೆ ಸಿದ್ದತೆ..!
– ಬೆಜ್ಜವಳ್ಳಿಯಿಂದ ಬೃಹತ್ ಬೈಕ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ
– ಬಿಜೆಪಿ ದೇಶಕ್ಕೆ ಮಾರಕ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕೆಟಿಕೆ ಸಭಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮ್ಮುಖದಲ್ಲಿ ಕಾರ್ಯಕರ್ತರ ಸಭೆಯನ್ನು ಭಾನುವಾರ ನಡೆಸಲಿದ್ದು ತೀರ್ಥಹಳ್ಳಿಗೆ ಗೀತಾ ಶಿವರಾಜ್ ಕುಮಾರ್ ಅವರು ಆಗಮಿಸಲಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ್ದು, ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ನಿಮ್ಮನೆ ರತ್ನಾಕರವರು ಬಡವರಿಗೆ ನಿವೇಶನ ನೀಡುತ್ತೇನೆ ಎನ್ನುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ತಾಲ್ಲೂಕಿನಾದ್ಯಂತ ರೀಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಹಿಂಬಾಲಕರೇ ರೀಯಲ್ ಎಸ್ಟೇಟ್ ವ್ಯವಹಾರದ ಪ್ರಮುಖ ರೂವಾರಿಗಳು. ಹೊಸನಗರ 22 ಎಕರೆ, ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ನೂರಾರು ಎಕರೆ ಬೇನಾಮಿ ಜಮೀನು ಖರೀದಿಸಿದ್ದಾರೆ. ಆರಗ ಜ್ಞಾನೇಂದ್ರ ಆಲೆಕಣೆ ಕೋಣದ ರೀತಿಯಲ್ಲಿ ತಿರುಗಾಡುತ್ತಿದ್ದಾರೆ. ಚುನಾವಣೆಗಾಗಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮತ್ತೆ ಎರಡು ಕೋಮು ಸಂಘರ್ಷ ಪ್ರಕರಣವನ್ನು ನಡೆಸುವ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಪತ್ರಿಕಾಗೋಷ್ಟಿಯಲ್ಲಿ ಗಂಭೀರ ಆರೋಪಿಸಿದರು.
ವಿರೋಧ ಪಕ್ಷಗಳು ಕಣದಲ್ಲಿಯೇ ಇರಬಾರದು ಎಂಬ ಧೋರಣೆ ಹಿಟ್ಲರ್, ಮುಸಲೊನಿ ಆಡಳಿತದಲ್ಲಿ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ಸರ್ವಾಧಿಕಾರಿಯಾಗಿ ಬದಲಾಗಿದ್ದಾರೆ. ಮಣಿಪುರದಲ್ಲಿ ವಿಶ್ವವೇ ಬೆಚ್ಚಿ ಬೀಳುವ ಅತ್ಯಾಚಾರ ಪ್ರಕರಣ ನಡೆಯುತ್ತಿದ್ದರು, ನರೇಂದ್ರ ಮೋದಿ ಮುಗುಮ್ಮಾನಾಗಿ ಪ್ರತಿಕ್ರೀಯೆ ನೀಡದೆ ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದಲ್ಲಿಯೇ ಬೃಹತ್ ಕಾರ್ಯಕರ್ತರನ್ನು ಹೊಂದಿರುವ ಏಕೈಕ ಪಕ್ಷ. ಚುನಾವಣೆಯ ಸೋಲಿನ ಭಯದಲ್ಲಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದಾರೆ. ಇಂತಹ ಕ್ರೂರ ಆಡಳಿತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಇರಲಿಲ್ಲ ಎಂದರು.
ಪ್ರಾದೇಶಿಕ, ಪಂಥೀಯ, ಭಾಷೆ ಆಧಾರದಲ್ಲಿ ದೇಶ, ರಾಜ್ಯ ಶಾಸಕಾಂಗ, ಕಾರ್ಯಾ೦ಗದ ವಿಂಗಡಣೆ ಮಾಡಿಲ್ಲ. ಕೇಂದ್ರೀಕೃತ ಸರ್ಕಾರ ಸ್ಥಾಪಿಸಲು ಸಂವಿಧಾನವನ್ನು ಮರು ಪರಿಶೀಲನೆ ಮಾಡಬೇಕು. ಹೊಸ ಕರುಡು ಸಿದ್ಧಪಡಿಸಬೇಕು ಎಂಬ ಆರ್ಎಸ್ಎಸ್ ಪ್ರಮುಖ ಎಂ.ಎಸ್. ಗೊಲ್ವಾಲ್ಕರ್ ಬರೆದಿರುವ ಬಂಚ್ ಆಫ್ ಥಾಟ್ಸ್ ಆಶಯದ ದೇಶ ನಿರ್ಮಾಣಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ. ಅದಕ್ಕೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಸಾಥ್ ನೀಡುತ್ತಿದೆ. ಮೋದಿಗೆ ಪ್ರಚಾರ ಭಾಷಣಕ್ಕೆ ಅವಕಾಶ ನೀಡುವ ಹಿನ್ನಲೆಯಲ್ಲಿ ಚುನಾವಣೆ ಆಯೋಗ 7 ಹಂತದ ಚುನಾವಣೆ ಘೋಷಿಸಿದೆ. ಮಾದ್ಯಮಗಳು ಚುನಾವಣಾ ಬಾಂಡ್ ಖರೀದಿಸಿದ್ದು ಕಾಂಗ್ರೆಸ್ ಸುದ್ದಿ ಹಾಕುವವರು ಯಾರು. ಮಾಧ್ಯಮಗಳು ವಿಶ್ವಾಸ ಕಳೆದುಕೊಂಡಿದೆ. 400 ಸೀಟು ಕುರಿತ ಮೋದಿಯ ಪ್ರೀತಿ ಗಮನಿಸಿದರೆ ಇವಿಎಂ ಪೂರ್ಣ ತಯಾರಿ ಮಾಡಿಕೊಂಡಂತೆ ಕಾಣಿಸುತ್ತಿದೆ. ಭಾರತದ ನಾಗರೀಕರಿಗೆ ಇದು ಕೊನೆಯ ಚುನಾವಣೆಯಾಗಿದ್ದು ದೇಶಕ್ಕಾಗಿ ಮತ ಚಲಾಯಿಸಬೇಕು ಎಂದರು.
ಪ್ರತಿಪಕ್ಷ ನಿಯಂತ್ರಿಸಲು ಇಡಿ, ಐಟಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಪರಿಶಿಷ್ಟ ಸಮುದಾಯಕ್ಕೆ ಮೀಸಲಾತಿ ನೀಡಿರುವುದು ಬಿಜೆಪಿ, ಆರ್ಎಸ್ಎಸ್ ಮುಖಂಡರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಗಾಂಧಿ, ಅಂಬೇಡ್ಕರ್, ಕಾಂಗ್ರೆಸ್ ಪಕ್ಷದ ಕಾರಣದಿಂದ ಪರಿಶಿಷ್ಟರಿಗೆ ಮಾತನಾಡುವ ಅವಕಾಶ ಸಿಕ್ಕಿದೆ. ಬಿಜೆಪಿ ಸಿದ್ಧಾಂತಗಳ ಬಗ್ಗೆ ಪುಸ್ತಕ ಓದಿ ತಿಳಿದುಕೊಳ್ಳಬೇಕು. ಜನ ಕುರಿ ಆಗದೆ ಹುಲಿ ಆಗಬೇಕು ಎಂದು ಹೇಳಿದರು.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಗೆಲ್ಲುತ್ತಾರೆ. ತಾಲ್ಲೂಕಿನ 258 ಮತಗಟ್ಟೆಯಲ್ಲೂ ‘ನನ್ನ ಬೂತ್ ನನ್ನ ಜವಾಬ್ದಾರಿ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿಯೊಂದು ಬೂತ್ನಲ್ಲಿ ಕನಿಷ್ಟ 100 ಮತಗಳು ಹೆಚ್ಚಿಗೆ ನೀಡುತ್ತೇವೆ. ಭಾನುವಾರ ಮಧ್ಯಾಹ್ನ 2.30ಕ್ಕೆ ಕೆಟಿಕೆ ಸಭಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮ್ಮುಖದಲ್ಲಿ ಕಾರ್ಯಕರ್ತರ ಸಭೆ ಇದೆ. ಯುವ ಕಾಂಗ್ರೆಸ್ ವತಿಯಿಂದ ಬೆಜ್ಜವಳ್ಳಿ ಬೃಹತ್ ಬೈಕ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ ನಡೆಯಲಿದೆ. ಕಾರ್ಯಕರ್ತರು ಭಾಗವಹಿಸಬೇಕೆಂದು ಕೋರಿದರು. ಕುಡುಮಲ್ಲಿಗೆಯಿಂದ ಕೆ ಟಿ ಕೆ ವರೆಗೂ ಬೈಕ್ ಜಾತ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ವಕ್ತಾರ ನಾರಾಯಣ ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ, ಜಿಲ್ಲಾ ವಕ್ತಾರ ಡಿ.ಎಸ್. ವಿಶ್ವನಾಥ ಶೆಟ್ಟಿ ಮುಖಂಡರಾದ ಅಮರನಾಥ ಶೆಟ್ಟಿ, ರಾಘವೇಂದ್ರ ಶೆಟ್ಟಿ, ವಿಲಿಯಂ ಮಾರ್ಟೀಸ್, ಗೀತಾ ರಮೇಶ್, ಬಿ.ಗಣಪತಿ, ಮಂಗಳ ಗೋಪಿ, ಮಂಜುಳಾ, ಸುಶೀಲ ಶೆಟ್ಟಿ, ವಿಶ್ವನಾಥ ಹಾರೋಗೊಳಿಗೆ ಇದ್ದರು.