ತೀರ್ಥಹಳ್ಳಿ ದಸರಾ ಸೂಪರ್.. ಸೂಪರ್..!
– ಆಚರಣೆಗೆ ನೂತನ ಸಮಿತಿ: ಸಮಿತಿ ಸಂಚಾಲಕರಾಗಿ ಸಂದೇಶ್ ಜವಳಿ ಆಯ್ಕೆ
– ಬಿಜೆಪಿ -ಕಾಂಗ್ರೆಸ್ ಒಟ್ಟಾಗಿ ನಾಡ ಹಬ್ಬ ಆಚರಿಸಲಿ…!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಸುಮಾರು 12.5 ಲಕ್ಷ ವೆಚ್ಚದಲ್ಲಿ ನಡೆಸಲು ಶನಿವಾರ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ತೀರ್ಥಹಳ್ಳಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮುಜರಾಯಿ ಇಲಾಖೆ, ಸಹಭಾಗಿತ್ವದಲ್ಲಿ ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಭಕ್ತವೃಂದ, ದಾನಿಗಳ ಸಹಕಾರದಲ್ಲಿ ನಡೆಯುವ ದಸರಾ ಉತ್ಸವ ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ. ಅಂದಾಜು 12.5 ಲಕ್ಷ ರೂಪಾಯಿ ವೆಚ್ಚದಲ್ಲಿ ಉತ್ಸವದ ಅಯವ್ಯಯ ಸಿದ್ಧಪಡಿಸಲಾಗಿದೆ.
ನೂತನ ಸಮಿತಿಯಲ್ಲಿ ಯಾರು ಯಾರು?
ಶನಿವಾರ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದೊಂದಿಗೆ ಸಂಚಾಲಕರಾಗಿ ಶಿವಮೊಗ್ಗ ರಂಗಾಯಣ ಮಾಜಿ ನಿರ್ದೇಶಕ ಸಂದೇಶ ಜವಳಿ ಮರು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ತಾಲ್ಲೂಕು ದಂಡಾಧಿಕಾರಿ ಲಿಂಗರಾಜು, ಗೌರವಾಧ್ಯಕ್ಷರಾಗಿ ಶಾಸಕ ಆರಗ ಜ್ಞಾನೇಂದ್ರ ಇರಲಿದ್ದಾರೆ. ಉಪಾಧ್ಯಕ್ಷರಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಆಯ್ಕೆ ಮಾಡಲಾಗಿದೆ.ಇನ್ನುಳಿದಂತೆ 2022ರ ದಸರಾ ಸಮಿತಿ ಬಹುತೇಕ ಯಥಾವತ್ ಮುಂದುವರೆಯಲಿದೆ.
ಆರ್ಥಿಕ ಸಮಿತಿಗೆ ಸಿರಿಬೈಲ್ ಧರ್ಮೇಶ್
ಕಳೆದ ಬಾರಿ ಗೃಹಸಚಿವರಾಗಿದ್ದ ಆರಗ ಜ್ಞಾನೇಂದ್ರ ಸಾಕಷ್ಟು ಅದ್ದೂರಿ ದಸರಾ ಆಚರಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆರ್ಥಿಕ ಸಮಿತಿಗೆ ಸಿರಿಬೈಲು ಧರ್ಮೇಶ್, ಸೊಪ್ಪುಗುಡ್ಡೆ ರಾಘವೇಂದ್ರ ನೇಮಕವಾಗಿದ್ದಾರೆ.
50 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ..!
ಕಲೆ, ಸಾಹಿತ್ಯ, ಸಾಂಸ್ಕೃತಿಕ ವೈಭವದ ನಡುವೆ ತೀರ್ಥಹಳ್ಳಿಯ ಹುಲಿವೇಷ, 15ಕ್ಕೂ ಹೆಚ್ಚು ಸ್ತಬ್ಧಚಿತ್ರ, ಚಂಡೆ, ವಾದ್ಯಘೋಷಗಳೊಂದಿಗೆ ಹೊರಡುವ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಈ ಬಾರಿ ವಿಶೇಷ ಆಕರ್ಷಣೆಯ ಜೊತೆಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಗ್ರಾಮೀಣ ಪ್ರದೇಶ ಒಳಗೊಂಡಂತೆ ಅಂದಾಜು 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.