ತೀರ್ಥಹಳ್ಳಿ ಪ್ರಮುಖ ಸುದ್ದಿಗಳು
– ಕ್ರಿಕೆಟ್: ಸಹ್ಯಾದ್ರಿ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
– ತೀರ್ಥಹಳ್ಳಿ ಶಿಕ್ಷಕ ಅಣ್ಣಪ್ಪ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ
– ನಮೋ ಯುವ ಮ್ಯಾರಥಾನ್: ತೀರ್ಥಹಳ್ಳಿ ಪ್ರಮುಖರ ಓಟ!
NAMMUR EXPRESS NEWS
ತೀರ್ಥಹಳ್ಳಿ: ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಇವರ ಆಶ್ರಯದಲ್ಲಿ ದಿನಾಂಕ: 19.9.2025 ರ ಶುಕ್ರವಾರದಂದು, ತೀರ್ಥಹಳ್ಳಿ ತಾಲ್ಲೂಕಿನ ದಾನಸಾಲೆ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ 2025 – 26 ನೇ ಸಾಲಿನ 14 ರಿಂದ 17 ವರ್ಷ ವಯೋಮಿತಿ ಒಳಗಿನ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ *ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಪ್ರೌಢಶಾಲಾ ಬಾಲಕರ ತಂಡವು ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಿಕ್ಷಣ ಸಂಸ್ಥೆಗೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿರುತ್ತಾರೆ. ಈ ಕ್ರೀಡಾ ಪ್ರತಿಭೆಗಳನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಎಂ.ಎಸ್ ಇವರನ್ನು ಶಾಲಾ ಆಡಳಿತ ಮಂಡಳಿ , ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಬೋಧಕ, ಬೋಧಕೇತರ ವೃಂದದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಶಾಂತಕುಮಾರಿ, ಅಣ್ಣಪ್ಪಗೆ ಆದಿಕವಿ, ವಾಗ್ಗೇವಿ ಪ್ರಶಸ್ತಿ
ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ನೀಡಲಾಗುವ 2025ನೇ ಸಾಲಿನ ಆದಿಕವಿ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಸಂಶೋಧಕಿ, ಅಧ್ಯಾಪಕಿ ಪ್ರೊ.ವಿ. ಶಾಂತಕುಮಾರಿ ಹಾಗೂ ವಾಗ್ಗೇವಿ ಪುರಸ್ಕಾರಕ್ಕೆ ಕವಿ, ಶಿಕ್ಷಕ ಅರಬಗಟ್ಟೆ ಅಣ್ಣಪ್ಪ ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 1 ಲಕ್ಷ ರೂ. ನಗದು ಬಹುಮಾನದ ಜತೆಗೆ ಫಲಕ ಒಳಗೊಂಡಿದ್ದು, ಅ. 12ರಂದು ಪ್ರದಾನ ಮಾಡಲಾಗುವುದು.
ಪ್ರೊ. ಶಾಂತಕುಮಾರಿ 26ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ್ದಾರೆ.
ಕುವೆಂಪು ಭಾಷಾ ಭಾರತಿ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಸಂಶೋಧನೆ, ವಿಮರ್ಶೆ, ಅನುವಾದ ಹಾಗೂ ಬೋಧನೆಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅರಬಗಟ್ಟೆ ಅಣ್ಣಪ್ಪ ದಾವಣಗೆರೆ ಮೂಲದವರಾಗಿದ್ದು, ಪ್ರಸ್ತುತ ಶಿಕ್ಷಕರಾಗಿದ್ದಾರೆ. ಜಾತ್ರೆಗೆ ನುಗ್ಗಿದ ಮಗು, ಅಕ್ಕಡಿ ಸೇರಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಕವನಗಳನ್ನು ಬರೆದಿರುವ ಇವರು, ಕವನ ವಾಚನದ ಮೂಲಕ ಸಾಹಿತ್ಯ ಲೋಕದಲ್ಲಿ ಗಮನ ಸೆಳೆಯುತ್ತಿದ್ದಾರೆ.
ನಮೋ ಯುವ ಮ್ಯಾರಥಾನ್: ತೀರ್ಥಹಳ್ಳಿ ಪ್ರಮುಖರ ಓಟ!
ನಶೆ ಮುಕ್ತ ಭಾರತಕ್ಕೆ ಕೈಜೋಡಿಸೋಣ ಎಂಬ ಉದ್ದೇಶದಿಂದ ಶಿವಮೊಗ್ಗದಲ್ಲಿ ಏರ್ಪಡಿಸಲ್ಪಟ್ಟ ನಮೋ ಯುವ ಮ್ಯಾರಥಾನ್ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಮಂಡಲ ಬಿಜೆಪಿ ಯುವ ಮೋರ್ಚಾ ತಂಡದ ಜೊತೆ ಪಾಲ್ಗೊಳ್ಳಲಾಯಿತು. ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವೀನ್, ಪ್ರಮುಖರಾದ ಸಂತೋಷ್ ದೇವಾಡಿಗ, ಪೂರ್ಣೇಶ್ ಪೂಜಾರಿ, ಮಹಾಂತ, ಪ್ರದೀಪ್ ಗಬಡಿ, ಅಭಿ, ಕವಿರಾಜ್, ಯಶಸ್ವಿ, ವಿಶ್ವನಾಥ್ ಇತರರು ಇದ್ದರು.








