ಹೆಲ್ಮೆಟ್, 112 ಜಾಗೃತಿಗಾಗಿ 300 ಕಿಮೀ ಸೈಕಲ್ ಜಾಥಾ!
– ತೀರ್ಥಹಳ್ಳಿ ಪೊಲೀಸ್ ಪೇದೆಯ ಮಾದರಿ ಪಯಣ
– ತೀರ್ಥಹಳ್ಳಿ ಟು ಮಂಗಳೂರು ಸೈಕಲ್ ಹೊಡೆದರು
– ಕಾನ್ಸ್ಟೇಬಲ್ ಪ್ರದೀಪ್, ಕೃಷ್ಣ ಸಾಹಸ
NAMMUR EXPRESS NEWS
ತೀರ್ಥಹಳ್ಳಿ: ಜೀವ ಮತ್ತು ಜೀವನ ಅಮೂಲ್ಯವಾಗಿದ್ದು, ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಪೊಲೀಸ್ ಇಲಾಖೆಯ 112 ಯೋಜನೆಯ ಜಾಗೃತಿ ಮೂಡಿಸಲು ತೀರ್ಥಹಳ್ಳಿ ಪೊಲೀಸ್ ಕಾನ್ಸ್ಟೇಬಲ್ ಪ್ರದೀಪ್ 300 ಕಿಮೀ ಸೈಕಲ್ ಜಾಥಾ ಮೂಲಕ ಗಮನ ಸೆಳೆದಿದ್ದಾರೆ. ಭಾನುವಾರ ತೀರ್ಥಹಳ್ಳಿಯಿಂದ ಹೆಲ್ಮೆಟ್ ಧರಿಸುವಿಕೆ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸುವ ಪೊಲೀಸರ ಸೈಕಲ್ ಜಾಥಾ ಅಭಿಯಾನ ಮತ್ತು ಒಂದೇ ದೇಶ ಒಂದೇ ಕರೆ ಸಂಖ್ಯೆ 112 ವಾಹನಗಳ ಪ್ರಚಾರ ಅಭಿಯಾನ ಕೈಗೊಂಡರು. ತೀರ್ಥಹಳ್ಳಿಯ ಯುವಕ ಕೃಷ್ಣ ಇವರಿಗೆ ಸಾಥ್ ನೀಡಿದ್ದಾರೆ.
ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳ ಅಪಘಾತವೇ ಹೆಚ್ಚಾಗಿದ್ದು ಅದರಲ್ಲಿ ಹೆಲ್ಮಟ್ ಧರಿಸದೆ ಸಾವನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಅಪಘಾತಗಳು ಸಂಭವಿಸಿದಾಗ ಕೈ ಕಾಲುಗಳಿಗೆ ಗಂಭೀರ ಗಾಯವಾದರೂ ಪ್ರಾಣ ಉಳಿಯಬಹುದು. ಆದರೆ ತಲೆಗೆ ಏಟು ಬಿದ್ದರೆ ಉಳಿಯುವುದು ಕಷ್ಟ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಜಾಗೃತರಾಗಿ ಹೆಮ್ಮೆಟ್ ಧರಿಸಿ, ಸಂಚಾರ ನಿಯಮ ಪಾಲನೆ ಮಾಡಬೇಕು ಎಂಬುದು ಈ ಜಾಥಾದ ಉದ್ದೇಶ.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ನ್ಯಾಯ ಮತ್ತು ಭದ್ರತೆ ದೊರಕಿಸಲು ಪೊಲೀಸ್ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಕೆಲವೇ ಕ್ಷಣದಲ್ಲಿ ತಾವಿದ್ದ ಸ್ಥಳಕ್ಕೆ 112 ವಾಹನ ಜೊತೆ ಸಿಬ್ಬಂದಿ ರಕ್ಷಿಸಲು ಬರಲಿದ್ದಾರೆ. ಇದಲ್ಲದೇ ತೊಂದರೆಯಲ್ಲಿರುವ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಪ್ರತಿಕ್ರಿಯಿಸುವ ಸಲುವಾಗಿ ರಾಜ್ಯ ಸರ್ಕಾರ ಒಂದೇ ದೇಶದ ಒಂದೇ ರಸ್ತೆ ಕರೆ ಸಂಖ್ಯೆ 112 ಈ ಸೇವೆಯನ್ನು ಜಾರಿಗೆ ತಂದಿದೆ. ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಈ ಯೋಜನೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾನ್ಸ್ಟೇಬಲ್ ಪ್ರದೀಪ್ ಹಾಗೂ ಕೃಷ್ಣ ಸತತ 300 ಕಿಲೋಮೀಟರ್ ಪಯಣ ಶುರು ಮಾಡಿದ್ದಾರೆ.
ತೀರ್ಥಳ್ಳಿಯಿಂದ -ಧರ್ಮಸ್ಥಳ, ಧರ್ಮಸ್ಥಳದಿಂದ -ಮಂಗಳೂರು ತಲುಪಿ ನಂತರ ತೀರ್ಥಹಳ್ಳಿಗೆ ಬರಲಿದ್ದಾರೆ. ಜಾಗೃತಿ ಮೂಡಿಸುವ ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಪಡೆದಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಇಲಾಖೆ ಅಧಿಕಾರಿಗಳು ಇವರಿಗೆ ಸಾಥ್ ನೀಡಿದ್ದಾರೆ.