ಆಡಳಿತದ ವಿರುದ್ಧ ಮತ ಹಾಕದ ಸಾವಿರಾರು ಜನ!
– ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜಲ ಜೀವನ್ ಮಿಷನ್ ವಿರುದ್ಧ ರೈತರ ಪ್ರತಿಭಟನೆ
– ಮತದಾನದಲ್ಲಿ ಭಾಗವಹಿಸುವಂತೆ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ ಕಾರ್ಯಕರ್ತರು?
– ಮತಗಟ್ಟೆಯಿಂದ ದೂರವೇ ಉಳಿದ ಗ್ರಾಮಸ್ಥರು
NAMMUR EXPRESS NEWS
ತೀರ್ಥಹಳ್ಳಿ: ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯು ವಿಕೇಂದ್ರೀಕರಣ ತತ್ತ್ವಕ್ಕೆ ವಿರುದ್ಧವಾಗಿದೆ ಹಾಗೂ ಮಲೆನಾಡು ಪ್ರದೇಶಕ್ಕೆ ಅವೈಜ್ಞಾನಿಕ ಯೋಜನೆ ಎಂದು ತುಂಗಾ ನದಿ ದಡದ ರೈತರು ಕಳೆದ ಎಂಟು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಯೋಜನೆಯ ಪ್ರಮುಖ ಭಾಗವಾದ ನೀರು ಶುದ್ಧೀಕರಣ ಘಟಕವನ್ನು ಕೋಡ್ಲು ಗ್ರಾಮದಲ್ಲಿ ನಿರ್ಮಿಸಲು ಪೊಲೀಸ್ ಬಲ ಬಳಸಿಕೊಂಡು ರೈತರು ಕಾಪಾಡಿಕೊಂಡು ಬಂದಿದ್ದ ಹಾಡ್ಯದಲ್ಲಿ ಬೆಳೆದಿದ್ದ ಬೆಲೆಬಾಳುವ ಬೋಗಿ ಮುಂತಾದ ಮರಗಳನ್ನು ಕದ್ದು ಸಾಗಿಸಿ ಹಾಡ್ಯವನ್ನು ಧ್ವಂಸಗೊಳಿಸಲಾಯಿತು. ಇದನ್ನು ಪ್ರಶ್ನಿಸಿ ಪ್ರತಿಭಟಿಸಿ ರೈತರು ಒಂದು ತಿಂಗಳ ಕಾಲ ಹೆಗ್ಗೋಡು ಸಮೀಪ ಧರಣಿ ಸತ್ಯಾಗ್ರಹ ನಡೆಸಿದರು. ಲೋಕಸಭೆ ಚುನಾವಣೆ ಪ್ರಕಟಗೊಂಡಾಗ ಧರಣಿ ಸತ್ಯಾಗ್ರಹವನ್ನು ಮುಂದೂಡಿ ತುಂಗಾ ನದಿ ದಡದ ಚಳುವಳಿ ನಿರತ ರೈತರಲ್ಲಿ ಅನೇಕರು ಸ್ವಯಂ ಪ್ರೇರಣೆಯಿಂದ ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಘೋಷಣಾ ಪತ್ರ ಸಲ್ಲಿಸಿದರು.
ಮತ ಚಲಾಯಿಸಲು ಎರಡು ದಿನ ಬಾಕಿ ಇರುವಾಗ ಆಡಳಿತ ಯಂತ್ರ ಪ್ರಮುಖ ಚಳವಳಿಗಾರರ ಮೇಲೆ ಮೊಕದ್ದಮೆ ಹೂಡಿ ಬೆದರಿಕೆ ಒಡ್ಡಲು ಮುಂದಾಯಿತು. ಮತದಾನದಲ್ಲಿ ಭಾಗವಹಿಸದವರಿಂದ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಅಂದರೆ ವೃದ್ಧಾಪ್ಯ ವೇತನ, ಗೃಹ ಲಕ್ಷ್ಮಿ ಮುಂತಾದವುಗಳ ಜೊತೆಗೆ ಬಿಪಿಎಲ್ ಕಾರ್ಡ್ ಹಿಂಪಡೆಯಲಾಗುತ್ತದೆ ಇತ್ಯಾದಿ ಇತ್ಯಾದಿ ಎಂದು ರಾಜಕೀಯ ಪಕ್ಷದ ಕಾರ್ಯಕರ್ತರು ಕೀಳು ಮಟ್ಟದ ಪ್ರಚಾರ ನಡೆಸಿದರು. ಈ ಮೂಲಕ ಅಲ್ಪ ಪ್ರಮಾಣದಲ್ಲಿ ಮತ ಸೆಳೆಯಲಷ್ಟೆ ರಾಜಕೀಯ ಕಾರ್ಯಕರ್ತರು ಯಶಸ್ಸು ಗಳಿಸಲು ಸಾಧ್ಯವಾಯಿತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಲೋಕಸಭಾ ಚುನಾವಣೆಯಲ್ಲಿ ತುಂಗಾ ನದಿ ದಡದ ರೈತರನ್ನು ಬೆಂಬಲಿಸಿ ಸಾವಿರಾರು ಮತದಾರರು ಮತ ಚಲಾಯಿಸಲಿಲ್ಲ.
ಕೆಲವು ಮತದಾರರು ರಾಜಕೀಯ ಪಕ್ಷಗಳ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಮತಕೇಂದ್ರಕ್ಕೆ ಹೋಗಿ ನೋಟಾ ಚಲಾಯಿಸುವುದಾಗಿ ಹೇಳಿರುತ್ತಾರೆ. ಹೋರಾಟ ಸಮಿತಿಯವರ ನಿರೀಕ್ಷೆಗೂ ಮೀರಿ ಹೆಚ್ಚು ಸಂಖ್ಯೆಯಲ್ಲಿ ಜನರು ಮತದಾನದಿಂದ ದೂರವೇ ಉಳಿದರು. ವಿಶೇಷವಾಗಿ ಹೆಚ್ಚು ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಕೋಡ್ಲು, ಆಲಗೇರಿ ಮತಗಟ್ಟೆಗಳಲ್ಲಿ ಯಾವ ರೀತಿಯ ಬೆದರಿಕೆಗಳಿಗೂ ಜಗ್ಗದೆ ದೊಡ್ಡ ಪ್ರಮಾಣದಲ್ಲಿ ಜನರು ಮತಗಟ್ಟೆಗಳಿಂದ ದೂರವೇ ನಿಂತರು. ಸುಮಾರು 1000 ಜನ ಮತ ಮಾಡಿಲ್ಲ ಎನ್ನಲಾಗಿದ್ದು ಅಳಗೇರಿ, ಕೋಡ್ಲು, ಕಾಸರವಳ್ಳಿ, ಹೊನ್ನಾನಿ ಬೂತ್ ಅಲ್ಲಿ ಮತದಾನ ಬಹಿಷ್ಕಾರ ನಡೆದಿದೆ.
ಕೇಸ್?
ಜಲಜೀವನ್ ಕಾಮಗಾರಿ ವಿರೋಧಿಸಿ ಮತದಾನ ಬಹಿಷ್ಕಾರಕ್ಕೆ ಕರೆ ಕೊಟ್ಟ ಕೋಡ್ಲು-ಆಲಗೇರಿ ಗ್ರಾಮದ 6 ಜನರ ವಿರುದ್ಧ ಕ್ರಮ ಜರುಗಿಸಿ ನೋಟೀಸ್ ನೀಡಲಾಗಿದೆ. ನೀತಿ ಸಂಹಿತೆಗೆ ವಿರುದ್ಧವಾಗಿ ಗ್ರಾಮಸ್ಥರಿಗೆ ಮತದಾನ ಮಾಡದಂತೆ ಬೆದರಿಕೆ ಹಾಕಿದ ಸುಮೊಟೊ ಪ್ರಕರಣ ದಾಖಲಾಗಿದೆ. ಜಲಜೀವನ್ ಕಾಮಗಾರಿ ವಿರೋಧಿಸಿ ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದ ಕೋಡ್ಲು, ಆಲಗೇರಿ ಗ್ರಾಮದ 6 ಜನರ ವಿರುದ್ಧ ತಾಲ್ಲೂಕು ಆಡಳಿತ ಸಮನ್ಸ್ ಜಾರಿ ಮಾಡಿದೆ. ನೀತಿ ಸಂಹಿತೆಗೆ ವಿರುದ್ಧವಾಗಿ ಗ್ರಾಮಸ್ಥರಿಗೆ ಮತದಾನ ಮಾಡದಂತೆ ಬೆದರಿಕೆ ಒಡ್ಡಿದ್ದು, ಭೀತಿ ಉಂಟುಮಾಡುವ ಸಾಧ್ಯತೆಯ ಕಾರಣ ನೀಡಿ ತಹಶೀಲ್ದಾರ್ ರೈತ ಸಂಘದ ಅಧ್ಯಕ್ಷ ಕೋಡ್ಲುವೆಂಕಟೇಶ್, ಪ್ರಮುಖ ರಾದ ಸುಧೀರ್, ಅಭಿಲಾಶ್, ಗಣೇಶ್, ಸುಂದರೇಶ್, ರಾಕೇಶ್, ಸಚಿನ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದೂರಿನ ಆಧಾರದ ಮೇಲೆ ಸಮನ್ಸ್ ಜಾರಿಗೊಳಿಸಲಾಗಿದೆ.