ತೀರ್ಥಹಳ್ಳಿ ಪಟ್ಟಣದಲ್ಲಿ ಟ್ರಾಫಿಕ್ ಅವ್ಯವಸ್ಥೆ!
– ಎಲ್ಲೆಂದರಲ್ಲಿ ವಾಹನ ನಿಲುಗಡೆ : ಸುಗಮ ಸಂಚಾರಕ್ಕೂ ಸಂಚಕಾರ
– ನಿಯಮಕ್ಕೆ ಬೆಲೆ ಇಲ್ಲ: ಜನರಿಗೆ ತೊಂದರೆ.. ಕೇಳೋರು ಯಾರು..?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ.
ವಾಹನ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದಂತೆಯೇ ವಾಹನಗಳ ದಟ್ಟಣೆಯೂ ಅಧಿಕಗೊಳ್ಳುತ್ತಿರುವುದರಿಂದ ಪಟ್ಟಣದಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ಸಂಚಾರ ನಿಯಮವನ್ನು ಪಾಲಿಸದೆ ನಿಯಮಕ್ಕೆ ಬೆಲೆ ಇಲ್ಲದಂತೆ ವರ್ತಿಸಿ ಟ್ರಾಫಿಕ್ ಜಾಮ್ ಆಗುವಂತೆ ಮಾಡುತ್ತಿದ್ದಾರೆ. ಇದರಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಇತರೆ ಪಾದಚಾರಿಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತಿದೆ. ದ್ವಿಚಕ್ರವಾಹನ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಸಮಸ್ಯೆಯಾಗಿದೆ. ಕಾರು ನಿಲ್ಲಿಸುವಲ್ಲಿ ಬೈಕ್, ಬೈಕ್ ನಿಲ್ಲಿಸುವಲ್ಲಿ ಕಾರು ಪಾರ್ಕಿಂಗ್ ಮಾಡಲಾಗುತ್ತಿದೆ. ವಾಹನ ಸವಾರರ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ನಿಂದಾಗಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಸಂಚಕಾರ ಬಂದೊದಗಿದೆ. ಪಾದಚಾರಿಗಳು, ವಾಹನ ಚಾಲಕರಿಗೆ ನಿತ್ಯ ಅಪಘಾತದ ಭಯ ಕಾಡುತ್ತಿದೆ.
ರಸ್ತೆಯಲ್ಲಿಯೇ ವಾಹನ ನಿಲುಗಡೆ!
ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳ ಸಮೀಪ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಣ್ಣ, ದೊಡ್ಡ ವಿವಿಧ ವಾಹನಗಳನ್ನು ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಸದಾ ವಾಹನಗಳು ನಿಂತಿರುವುದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರ ಕಷ್ಟವಾಗಿದೆ. ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿ ಸದಾ ಜನಜಂಗುಳಿ ಇರುತ್ತದೆ. ಆದರೆ ಈ ರಸ್ತೆಯ ಇಕ್ಕೆಲಗಳಲ್ಲಿ ನಿತ್ಯ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಹಾಗೂ ಅನಧಿಕೃತ ವಾಹನ ಪಾರ್ಕಿಂಗ್ನಿಂದಾಗಿ ರಸ್ತೆ ಕಿರಿದಾಗುತ್ತಿದೆ.
ಶಾಸಕರು, ಆಡಳಿತ ಗಮನಿಸಲೇ ಇಲ್ಲ!
ತೀರ್ಥಹಳ್ಳಿ ಪಟ್ಟಣ ಮಲೆನಾಡಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣ. ಅಲ್ಲದೆ ಇಲ್ಲಿ ಕಾರು ಹಾಗೂ ಬೈಕ್ ಹೆಚ್ಚಿವೆ. ಆದ್ರೆ ಪಾರ್ಕಿಂಗ್ ಜಾಗ ಮಾತ್ರ ಆಡಳಿತ ಮಾಡುವಲ್ಲಿ ವಿಫಲ ಆಗಿದೆ. ಇದು ಮುಂದಾದ್ರು ಸಮಸ್ಯೆ ಕಟ್ಟಿಟ್ಟ ಬುತ್ತಿ.