ನನ್ನ ಗೆಲುವಿಗೆ ಮಹಿಳೆಯರೇ ಕಾರಣ!
– ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ವರಮಹಾಲಕ್ಷ್ಮಿ ಆಚರಣೆ
– ಸುಮಾರು 5 ಸಾವಿರ ಮಹಿಳೆಯರ ಆಗಮನ
– ಕಳೆದ ಬಾರಿಯ ಟೀಕೆಗೆ ಈ ಬಾರಿ ಉತ್ತರ ಸಿಕ್ಕಿದೆ : ಆರಗ ಜ್ಞಾನೇಂದ್ರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೆ.8 ರ ಶುಕ್ರವಾರ 11ನೇ ವರ್ಷದ ವರಮಹಾಲಕ್ಷ್ಮಿ ಹಬ್ಬವನ್ನು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಸಲಾಯಿತು. ಶ್ರಾವಣ ಮಾಸದಲ್ಲಿ ಬರುವ ವಿಶೇಷ ಹಬ್ಬಕ್ಕೆ ಪ್ರತಿ ವರ್ಷವೂ ಬಿಜೆಪಿ ಮಹಿಳಾ ಮೋರ್ಚಾದಿಂದ ಲಕ್ಷ್ಮಿ ಪೂಜೆ ಮಾಡಿ ಮುತ್ತೈದೆಯರಿಗೆ ಬಾಗಿನ ಅರ್ಪಿಸುತ್ತಿದ್ದರು. ಕಳೆದ ಬಾರಿ ಬೆಳ್ಳಿ ಕಾಯಿನ್ ವಿತರಣೆ ಮಾಡಲಾಗಿತ್ತು, ಈ ಬಾರಿ ಮುತ್ತೈದೆಯರಿಗೆ ಸೀರೆ ನೀಡಿ ಬಾಗಿನ ಅರ್ಪಿಸಿದರು. ತಾಲೂಕಿನ ಸುಮಾರು 5000 ಮಹಿಳೆಯರು ಆಗಮಿಸಿ ಬಾಗಿನ ಸ್ವೀಕರಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಕಳೆದ ಬಾರಿ ವರಮಹಾಲಕ್ಷ್ಮಿ ಹಬ್ಬ ಮಾಡಿದಾಗ ವಿರೋಧ ಪಕ್ಷದವರು ಟೀಕೆ ಮಾಡಿದ್ದರು. ಚುನಾವಣೆಗಾಗಿ ಗಿಮಿಕ್ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ನಾನು ಹೇಳುತ್ತೀನಿ ಟೀಕೆ ಬಿಡಿ ನೀವು ಇಂತಹ ಕೆಲಸ ಮಾಡಿ. ಎಷ್ಟೋ ಬಡವರಿಗೆ ಹಬ್ಬವನ್ನು ಆಚರಿಸಲು ಆಗುವುದಿಲ್ಲ ಅಂತವರಿಗಾಗಿ ಸಾಮೂಹಿಕವಾಗಿ ಇಂತಹ ಕೆಲಸ ಮಾಡಿದರೆ ಎಷ್ಟೋ ತಾಯಂದಿರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶುಕ್ರವಾರ ನೆಡೆದ ವರಮಹಾಲಕ್ಷ್ಮಿ ವ್ರತದ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ವರ್ಷವೂ ಕೂಡ ನಮ್ಮ ನಿರೀಕ್ಷೆ ಮೀರಿ ಸೇರಿದ್ದಾರೆ. ಇದ್ದನ್ನು ನೋಡಿದರೆ ಕಳೆದ ಬಾರಿಯ ಟೀಕೆಗೆ ಉತ್ತರ ಸಿಕ್ಕಂತೆ ಇದೆ. ನಮ್ಮಲ್ಲಿ ಕಾರ್ಯಕ್ರಮ ಮಾಡಲು ಸಭಾಂಗಣ ಇಲ್ಲ ಎಂದಾಗ ಯಡಿಯೂರಪ್ಪನವರು ಈ ಸಭಾಂಗಣ ಮಾಡಲು ಸಹಾಯ ಮಾಡಿದ್ದರು ನಮ್ಮ ಬಡ ಆತಿಥ್ಯವನ್ನು ಸ್ವೀಕರಿಸಿ ನನಗೆ ರಾಘಣ್ಣನಿಗೆ ಆಶೀರ್ವಾದ ಮಾಡಿ ಎಂದರು.
ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೆ ನಮ್ಮ ತಾಲೂಕಿಗೆ 64 ಸಮುದಾಯ ಭವನ, ಅರಸಾಳಿನಲ್ಲಿ ರೈಲ್ವೆ ನಿಲ್ಲಲು ಅವಕಾಶ,, ತೀರ್ಥಹಳ್ಳಿಗೆ ಹೊಸ ಸೇತುವೆ, ಸಂಘ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಬಿ ವೈ ರಾಘವೇಂದ್ರ ಕೆಲಸ ಮಾಡಿದ್ದಾರೆ. ಅವರ ಸಹಾಯ ಮರೆಯುವುದಿಲ್ಲ ಎಂದರು.
ನನ್ನ ಗೆಲುವಿಗೆ ಕ್ಷೇತ್ರದ ಮಹಿಳೆಯರೇ ಕಾರಣ. ನನ್ನ ತಾಯಿ ಈಗಿಲ್ಲ ಆದರೆ ನಿಮಲ್ಲಿ ನನ್ನ ತಾಯಿ ಕಾಣುತ್ತಿದ್ದೇನೆ, ಬಾಳೆಬೈಲಿನಲ್ಲಿ ಕಾಲೇಜು ತರಲು ಹೆಣ್ಣು ಮಕ್ಕಳೇ ಕಾರಣ, ಕಾಲೇಜು ತರದಿದ್ದರೆ ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಇರುತ್ತಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಭಾರತೀಪುರದ ತಿರುವಿನಲ್ಲಿ ಅಪಘಾತದಲ್ಲಿ ನನ್ನ ಮಗಳು ಹಾಗೂ ಅತ್ತೆ ತೀರಿಕೊಂಡರು ಆ ರೀತಿ ಬೇರೆ ಯಾರಿಗೂ ಆಗಬಾರದು ಎಂದು ಫೈಓವರ್ ನಿರ್ಮಾಣದ ಕೆಲಸ ಆಗುತ್ತಿದೆ. ಕುಡಿಯುವ ನೀರಿಗಾಗಿ ಜಲಜೀವನ್ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ತಂದಿದ್ದೇವೆ ಎಂದರು.