ಮಲೆನಾಡ ಯುವ ಸಾಧಕರು
ಭರತ ನಾಟ್ಯದಲ್ಲಿ ದಿತಿ ಎಚ್.ಎಸ್ ಸಾಧನೆ!
– ಕಲಾ ಪ್ರತಿಭೋತ್ಸವ’ ಕಾರ್ಯಕ್ರಮದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
– ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ
– ಅರ್ಚನಾ ಎ.ಆರ್ ಗೆ M.Scಯಲ್ಲಿ ಚಿನ್ನದ ಪದಕ
– ಮಾನವೀಯ ಕೆಲಸಕ್ಕೆ ಕೊಡುಗೆ: ಡಾ.ಅಭಿಜಿತ್ ಅವರಿಗೆ ಗೌರವ
– ಜೆ.ಎನ್.ಎನ್ ವಿದ್ಯಾರ್ಥಿನಿ ಪವಿತ್ರಾ ರಾಜ್ಯಕ್ಕೆ ಟಾಪರ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ವಿಭಾಗವು ಮಕ್ಕಳ ಮತ್ತು ಯುವಜನರ ಕಲಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತೇಜನ ನೀಡುವ ಹಾಗೂ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸಲು ಪ್ರೋತ್ಸಾಹಿಸುವ ಸಲುವಾಗಿ ದಿನಾಂಕ 22.12.2018 ಹಾಗೂ 23.12.2018 ರಂದು ಹಮ್ಮಿಕೊಂಡಿದ್ದ ವಲಯ ಮಟ್ಟದ ‘ಕಲಾ ಪ್ರತಿಭೋತ್ಸವ’ ಕಾರ್ಯಕ್ರಮದಲ್ಲಿ, ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದೃತಿ ಎಚ್.ಎಸ್. ಭಾಗವಹಿಸಿ ‘ಕಿಶೋರ ಪ್ರತಿಭೆ’ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವಕ್ಕೆ ಆಯ್ಕೆಯಾಗಿದ್ದಾಳೆ.
ಈ ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮವು ದಿನಾಂಕ 13.02.2026 ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ದಿತಿ ಆರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಸುರೇಶ್ ಹಾಗೂ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಅಕ್ಷತಾ ದಂಪತಿಗಳ ಪುತ್ರಿಯಾಗಿದ್ದಾಳೆ.
ಈ ವಿದ್ಯಾರ್ಥಿನಿಯು ರಾಜ್ಯ ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆದು ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತರಲಿ ಎಂದು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಶುಭ ಹಾರೈಸಿದ್ದಾರೆ.
ಅರ್ಚನಾ ಎ.ಆರ್ ಗೆ M.Scಯಲ್ಲಿ ಚಿನ್ನದ ಪದಕ
ತೀರ್ಥಹಳ್ಳಿ ತಾಲೂಕು ಆರಗ ಗೇಟ್ ರತ್ನಾಕರ H S ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿ ಅರ್ಚನಾ ಎ.ಆರ್ ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ M Sc ರಸಾಯನ ಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆಯುವುದರೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಈ ವಿದ್ಯಾರ್ಥಿನಿಯು ತನ್ನ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೆಗದ್ದೆ, ಪ್ರೌಢ ಶಿಕ್ಷಣವನ್ನು ಡಾ. ಯು ಆರ್ ಅನಂತಮೂರ್ತಿ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ ಮತ್ತು ಪದವಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ಹೀಗೆ ತನ್ನ ಎಲ್ಲಾ ಶಿಕ್ಷಣವನ್ನು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿಯೇ ಕಲಿತು ಅತ್ಯುತ್ತಮ ಸಾಧನೆ ಮಾಡಿರುವ ಈ ವಿದ್ಯಾರ್ಥಿನಿಗೆ ಶುಭವಾಗಲಿ ಎಂದು ಗ್ರಾಮಸ್ಥರು ಹಾರೈಸಿದ್ದಾರೆ.
ಮಾನವೀಯ ಕೆಲಸಕ್ಕೆ ಕೊಡುಗೆ: ಡಾ.ಅಭಿಜಿತ್ ಅವರಿಗೆ ಗೌರವ
ತೀರ್ಥಹಳ್ಳಿ: ಮಾನವೀಯತೆ ಸೇವೆ ಜತೆಗೆ ಅನೇಕರಿಗೆ ಉಚಿತ ಅರೋಗ್ಯ ಸೇವೆ ನೀಡಿದ ತೀರ್ಥಹಳ್ಳಿಯ ಪ್ರಸಿದ್ಧ ವೈದ್ಯ, ಅರಿವು ಕ್ಲಿನಿಕ್ ಡಾ.ಅಭಿಜಿತ್ ಅವರಿಗೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ಸನ್ಮಾನಿಸಲಾಯಿತು. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಅಮೆರಿಕಾದ ರೋಟಾಪ್ಲಾಸ್ಟ್ ಇಂಟರ್ ನ್ಯಾಷನಲ್ ಸಹಭಾಗಿತ್ವದೊಂದಿಗೆ ನಾಗಮಂಗಲದಲ್ಲಿ ನಡೆದ ಎಐಎಂಎಸ್ ಬೆಳ್ಳೂರು ರೋಟಾಪ್ಲಾಸ್ಟ್ ಇಂಟರ್ ನ್ಯಾಷನಲ್ ನಲ್ಲಿ ಯುಎಸ್ಎ ವೈದ್ಯಕೀಯ ಮಿಷನ್ ನಲ್ಲಿ ಗೃಹ ಶಸ್ತ್ರಚಿಕಿತ್ಸಕರ ತಂಡದ ನಾಯಕತ್ವವನ್ನು ವಹಿಸಿದ್ದರು.
ಸೀಳು ತುಟಿ, ಸೀಳು ಅಂಗುಳದಂತಹ ಜನ್ಮಜಾತವಾಗಿ ಬಂದ ಮುಖದ ವಿರೂಪಗಳನ್ನು ಸರಿಪಡಿಸುವುದು, ನಿರ್ಬಂಧಿತ ಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ಮರಳಿ ಚಲನಶೀಲತೆ ದೊರೆತು ತಮ್ಮ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವಂತೆ ಮಾಡಲು ವಿಶೇಷ ಶಸ್ತ್ರಚಿಕಿತ್ಸೆ ನಡೆಸುವುದು ರೋಟಾಪ್ಲಾಸ್ಟ್ ನ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಡೆಸಿದ ‘ಸಂಕಲ್ಪ2025’ ಹಲವಾರು ರೋಗಿಗಳಿಗೆ ಹೊಸ ಬದುಕನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಆಸ್ಪತ್ರೆಯ ಹಳೆಯ ವಿದ್ಯಾರ್ಥಿಯಾಗಿದ್ದು, ರೋಟಾಪ್ಲಾಸ್ಟ್ ಅಂತರ್ ರಾಷ್ಟ್ರೀಯ ಯುಎಸ್ಎ ವೈದ್ಯಕೀಯ ಮಿಷನ್ ತಂಡಕ್ಕೆ ಆಯ್ಕೆಯಾಗಿ ಉದಾತ್ತ ಸೇವೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಡಾ.ಅಭಿಜಿತ್ ಅವರನ್ನು ಅಭಿನಂದಿಸಲಾಯಿತು.
ಜೆ.ಎನ್.ಎನ್ ವಿದ್ಯಾರ್ಥಿನಿ ಪವಿತ್ರಾ ರಾಜ್ಯಕ್ಕೆ ಟಾಪರ್
ಶಿವಮೊಗ್ಗ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾದ ಪಾರ್ವತಿ ಸಾಲೇರ ಅವರು ಎಂಬಿಎ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಮೂಲಕ 4 ಚಿನ್ನದ ಪದಕಗಳಿಗೆ ತಮ್ಮ ಕೊರಳನ್ನು ಒಡ್ಡಿದ್ದಾರೆ. ಕಾಲೇಜಿನ ಸಂಜಯ್ ಎಂ.ವಿ ಅವರು ಗಣಕ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವತಿಯಿಂದ ಬೆಳಗಾವಿಯಲ್ಲಿ ನಡೆಸಲಾದ 25ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಸಿಂಗ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.
ಪಾರ್ವತಿ ಸಾಲೇರ ಅವರು ಜೆಎನ್ಎನ್ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡ ಸಂದರ್ಭದಲ್ಲಿಯೂ 6 ಚಿನ್ನದ ಪದಕಗಳನ್ನು ಗಳಿಸಿದ್ದರು ಎನ್ನಲಾಗಿದೆ. ಇದೀಗ ಎಂಬಿಎ ಸ್ನಾತಕೋತ್ತರ ಪದವಿಯ ವಿಚಾರದಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ಪಾರ್ವತಿ ಸಾಲೇರ ಅವರು ಭದ್ರಾವತಿಯ ಶಾಸಕರಾಗಿದ್ದ ಸಾಲೇರ ಸಿದ್ಧಪ್ಪ ಅವರ ಮೊಮ್ಮಗಳು. ಪಾರ್ವತಿ ಅವರ ತಾಯಿ ಐಶ್ವರ್ಯ ಸಾಲೇರ ಅವರು ಕೂಡ ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದು, ಅವರು ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಐದನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಎನ್ಇಎಸ್ ನ ಸಹಕಾರ್ಯದರ್ಶಿ ಡಾ.ಪಿ.ನಾರಾಯಣ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಕಾಂತ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಜಲೇಶ್ ಕುಮಾರ್, ಪಾರ್ವತಿ ಸಾಲೇರ ಅವರ ಪೋಷಕರಾದ ಜ್ಯೋತಿ ಸಾಲೇರ, ಐಶ್ವರ್ಯ ಸಾಲೇರ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಸಿ.ಎಂ.ನೃಪತುಂಗ, ಸುಭದ್ರ ಸಂತೋಷ್ ಶಾನುಭಾಗ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.








