ರಾಜ್ಯದ 3 ಪ್ರಮುಖ ನ್ಯೂಸ್: ನಿಮಗೆ ಬೇಕಾದ ಸುದ್ದಿ!
ರಾಜ್ಯದಲ್ಲಿ ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ!
ಪೆಟ್ರೋಲ್ ದರದಲ್ಲಿ ಏರಿಕೆ: ಹೋರಾಟ ಶುರು
ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ: ಮಾ.31 ಕೊನೆ ದಿನ
ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಸಚಿವರು, ಸಾರಿಗೆ ನಿಗಮಗಳು ಡೀಸೆಲ್ ಅನ್ನು ಬಲ್ಕ್ನಲ್ಲಿ ಖರೀದಿ ಮಾಡುತ್ತಿವೆ. ಇತ್ತೀಚೆಗೆ ಇಸ್ರೇಲ್-ಇರಾನ್ ಸಂಘರ್ಷ ಪರಿಣಾಮದಿಂದ ಡೀಸೆಲ್ ದರ ಏರಿಕೆಯಾದರೂ, ಪ್ರಯಾಣಿಕರ ಮೇಲಿನ ಭಾರವನ್ನು ಹೆಚ್ಚಿಸುವ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ. ಡೀಸೆಲ್ ದರ ಏರಿಕೆಯಾಗಿದ್ದರೂ ಅದೇ ರೀತಿಯಲ್ಲಿ ಖರೀದಿ ಮುಂದುವರೆಯಲಿದೆ. ಆದರೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದರು.
ಪೆಟ್ರೋಲ್ ದರ ಏರಿಕೆ: ಹೋರಾಟ ಶುರು
ಬೆಂಗಳೂರು: ಇನ್ನೊಂದೆಡೆ, ದೇಶಾದ್ಯಂತ ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಏರಿಕೆ ಕಂಡುಬಂದಿದ್ದು, ಪ್ರತಿ ಲೀಟರ್ಗೆ ಸುಮಾರು 2.30 ರೂ. ಹೆಚ್ಚಳವಾಗಿದೆ. ಸರ್ಕಾರದ ಈ ಕ್ರಮ ಖಂಡಿಸಿ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹೆದ್ದಾರಿ ತಡೆಗೆ ಹೋರಾಟಗಾರ ವಾಟಾಳ್ ನಾಗರಾಜ್ ಭಾರೀ ಹೋರಾಟ ಮಾಡಿದ್ದು, ಅವರನ್ನು ಬಂಧಿಸಲಾಗಿದೆ.ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಹಾಗೂ ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳ ಉಳಿವಿಗೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಲ್ಲಿ ಪ್ರತಿಭಟನೆ ನಡೆಯಿತು.
ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ಹೊಸೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಇರಾನ್-ಇಸ್ರೇಲ್-ಅಮೆರಿಕ ನಡುವಿನ ಸಂಘರ್ಷದಿಂದ ಅಡುಗೆ ಅನಿಲ ಸಿಲಿಂಡರ್ ಕೊರತೆ ಉಂಟಾಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಅಭಾವದಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರಗಳು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದ ಅವರು, ಇದೇ ಸ್ಥಿತಿ ಮುಂದುವರೆದರೆ ಕರ್ನಾಟಕ ಬಂದ್ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.
ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ: ಮಾ.31 ಕೊನೆ ದಿನ
ಬೆಂಗಳೂರು: ರಾಜ್ಯದ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಯ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿದೆ. ತಿದ್ದುಪಡಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ಇದೇ ತಿಂಗಳ 31ರ ಒಳಗೆ ಅರ್ಜಿಯನ್ನು ಸಲ್ಲಿಸಿ ತಿದ್ದುಪಡಿ ಮಾಡಿಸಬಹುದು ಎನ್ನುವ ಮಾಹಿತಿಯನ್ನು ಪ್ರಕಟಿಸಲಾಗಿದೆ. ಗ್ರಾಮ ಒನ್ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಹಲವಾರು ವರ್ಷಗಳಿಂದ ಹೊಸ ಅರ್ಜಿಗಳಿಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಅನುಸರಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಅರ್ಹರು ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸುವಂತೆ ಕೋರಿದ್ದಾರೆ.
ಪಡಿತರ ಚೀಟಿಯ ತಿದ್ದುಪಡಿ ಅತ್ಯಂತ ಮುಖ್ಯವಾಗಿದ್ದು, ಇದು ಕೇವಲ ಧಾನ್ಯ ಪಡೆಯುವ ದಾಖಲೆ ಮಾತ್ರವಾಗಿ ಉಳಿಯದೆ ಅನೇಕ ಯೋಜನೆಗಳು, ಸಬ್ಸಿಡಿಗಳು ಮತ್ತು ಆರ್ಥಿಕ ನೆರವನ್ನು ಪಡೆಯಲು ಕೂಡ ಪ್ರಮುಖ ದಾಖಲೆಯಾಗಿದೆ. ಕುಟುಂಬದ ವಿವರಗಳು ತಪ್ಪಾಗಿದ್ದರೆ ಅಥವಾ ಹಳೆಯದಾಗಿದ್ದರೆ ಅನೇಕ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಕೂಡ ಇದರಿಂದ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ತಿದ್ದುಪಡಿ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಲೇ ಸಮೀಪದ ಕೇಂದ್ರಗಳಿಗೆ ಭೇಟಿ ನೀಡಿ ರೇಷನ್ ಕಾರ್ಡ್ ಅನ್ನು ನವೀಕರಣಗೊಳಿಸಿಕೊಳ್ಳಿ. ಒಮ್ಮೆ ತಪ್ಪಿದರೆ ಮತ್ತೆ ಈ ಅವಕಾಶ ಯಾವಾಗ ಲಭ್ಯವಾಗುತ್ತದೆಯೋ ಹೇಳಲಾಗುವುದಿಲ್ಲ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ತಕ್ಷಣವೇ ಕ್ರಮವನ್ನು ಕೈಗೊಳ್ಳಿ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.








