ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಸಿಸಿಟಿವಿ ಕಣ್ಣು!
– 20 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಕೆ
– ಅಕ್ರಮ ತಡೆಗಟ್ಟಲು ಕ್ರಮ: ಏನಿದು ಹೊಸ ಆದೇಶ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ಇನ್ನೂ ಹೆಚ್ಚಾಗಿ ಪಾರದರ್ಶಕಗೊಳಿಸುವ ಮತ್ತು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಆಹಾರ ಮತ್ತು ಕೈಗಾರಿಕಾ ಸರಬರಾಜು ಇಲಾಖೆಯು ಕೆಲವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸುಮಾರು 20 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕ್ರಮವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಅಂಗಡಿಗಳಲ್ಲಿ ನಡೆಯುವ ಎಲ್ಲಾ ವಿತರಣಾ ಪ್ರಕ್ರಿಯೆಯು ಸಂಪೂರ್ಣವಾಗಿ ದಾಖಲಾಗುವುದರಿಂದ ಯಾವುದೇ ರೀತಿಯ ಅಕ್ರಮ, ಅವ್ಯವಸ್ಥೆ ಪತ್ತೆಯಾದಲ್ಲಿ ತಕ್ಷಣ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ ಸಚಿವರಾದ ಕೆ.ಎಚ್.ಮುನಿಯಪ್ಪ.
ಗ್ರಾಹಕರಿಗೆ ನ್ಯಾಯಯುತ ಸೇವೆ ದೊರಕಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಆಹಾರ ಧಾನ್ಯಗಳನ್ನು ಸಾಗಣೆ ಮಾಡುವ ಎಲ್ಲಾ ವಾಹನಗಳಿಗೂ ಕೂಡ ಜಿಪಿಎಸ್ ಅಳವಡಿಸುವ ಯೋಜನೆಗೂ ಚಾಲನೆ ನೀಡಲಾಗಿದ್ದು, ಇದರಿಂದ ಧಾನ್ಯಗಳ ಸಾಗಣೆ ಪ್ರಕ್ರಿಯೆಯನ್ನು ಕೂಡ ಟ್ರ್ಯಾಕ್ ಮಾಡಲು ನೆರವಾಗುತ್ತದೆ. ಇದರಲ್ಲಿಯೂ ಕೂಡ ಯಾವುದೇ ರೀತಿಯ ಅಕ್ರಮ, ದಾರಿ ಮರುಗು ಅಥವಾ ವಿಳಂಬ ಕಂಡುಬಂದಲ್ಲಿ ಸಂಬಂಧಿತ ಅಧಿಕಾರಿಗಳು ಕೂಡಲೇ ಗಮನಹರಿಸಲು ಸಹಕಾರಿಯಾಗಿದೆ. ಯೋಜನೆಗಳನ್ನು ಜಾರಿಗೆ ತರಲು ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಕೂಡ ಪ್ರಾರಂಭಿಸಲಾಗಿದ್ದು, ತಾಂತ್ರಿಕವಾಗಿ ಶಕ್ತಿಶಾಲಿಯಾಗಿರುವ ಕಂಪನಿಗಳನ್ನು ಆಯ್ಕೆ ಮಾಡುವುದರ ಮೂಲಕ ಶೀಘ್ರದಲ್ಲೇ ಕಾರ್ಯರಂಭ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.








