ತೀರ್ಥಹಳ್ಳಿ, ಕೊಪ್ಪದಲ್ಲಿ ಗುಡುಗು, ಸಿಡಿಲು, ಗಾಳಿ, ಮಳೆ!
– ಭಾರೀ ಮಳೆಗೆ ವಿದ್ಯುತ್, ನೆಟ್ವರ್ಕ್ ಇಲ್ಲ.. ಭಾರೀ ಅನಾಹುತ
– ಮಲೆನಾಡಲ್ಲಿ ಮಹಾ ಮಳೆಗೆ ಬೆಚ್ಚಿ ಬಿದ್ದ ಜನ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ/ ಕೊಪ್ಪ: ಮಲೆನಾಡಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಅನೇಕ ಹಳ್ಳಿಗಳು ಕತ್ತಲೆಯಲ್ಲಿ ಮುಳುಗಿವೆ. ವಿದ್ಯುತ್, ನೆಟ್ವರ್ಕ್ ಇಲ್ಲದಾಗಿದೆ. ಅಕಾಲಿಕ ಮಳೆಗೆ ಇಡೀ ಜನ ಜೀವನ ತೊಂದರೆ ಆಗಿದೆ. ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಕೊಪ್ಪ, ಶೃಂಗೇರಿ ಭಾಗದಲ್ಲಿ ಅತೀ ಹೆಚ್ಚು ಮಳೆ ಆಗಿದೆ.
ಗುಡುಗು, ಸಿಡಿಲು, ಗಾಳಿ, ಮಳೆ!
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ ಸೇರಿ ಹಲವಾರು ಭಾಗಗಳಲ್ಲಿ ಸೋಮವಾರ ರಾತ್ರಿ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಅನೇಕ ಕಡೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಕಟ್ಟಡದ ಮೇಲೆ ಬಿದ್ದ ಜಾಹೀರಾತು ನಾಮ ಫಲಕ!
ತೀರ್ಥಹಳ್ಳಿಯಲ್ಲಿ ಸತತ ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಮಾತೃಶ್ರೀ ಎಲೆಕ್ಟ್ರಾನಿಕ್ಸ್ ಪಕ್ಕದ ಕಟ್ಟಡದ ಮೇಲ್ಭಾಗದಲ್ಲಿ ಹಾಕಲಾಗಿದ್ದ ಕಬ್ಬಿಣದ ಜಾಹೀರಾತು ನಾಮಫಲಕ ತುಂಡಾಗಿ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಘಟನೆ ನಡೆದಿದೆ. ಕಟ್ಟಡದ ಮೇಲೆ ವಾಲಿಕೊಂಡು ಬಿದ್ದಿರುವುದರಿಂದ ಯಾವುದೇ ರೀತಿಯ ದುರಂತ ಸಂಭವಿಸಿಲ್ಲ ಎನ್ನಲಾಗಿದೆ. ಒಂದು ವೇಳೆ ಅದು ರಸ್ತೆಯ ಭಾಗದಲ್ಲಿ ಬಿದ್ದಿದ್ದರೆ ಜನರಿಗೆ ಅಪಾಯವಾಗುವ ಸಾಧ್ಯತೆ ಇತ್ತು.
ಇನ್ನು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಶಬರೀಶನಗರದ ನಿವಾಸಿಯಾದ ಗಂಗಾಧರ್ ಅಲಿಯಾಸ್ ಗುಂಡಣ್ಣ ಎನ್ನುವವರಿಗೆ ಸೇರಿದ್ದ ಟಾಟಾ ಏಸ್ ಲಗೇಜ್ ವಾಹನದ ಮೇಲೆ ತೆಂಗಿನ ಮರ ಉರುಳಿ ಬಿದ್ದ ಘಟನೆ ಕೂಡ ನಡೆದಿದೆ. ಇಲ್ಲಿಯೂ ಕೂಡ ಅದೃಷ್ಟವಶಾತ್ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಮರ ಬಿದ್ದ ಪರಿಣಾಮವಾಗಿ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ವಾಹನದ ಮೇಲ್ಭಾಗ ಸಂಪೂರ್ಣ ಹಾನಿಗೊಳಗಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
ತೀರ್ಥಹಳ್ಳಿ ಪಟ್ಟಣದಲ್ಲಿ ವಿದ್ಯುತ್ ಇಲ್ಲ.. ನೀರಿಲ್ಲ..!
ತೀರ್ಥಹಳ್ಳಿಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ, ಭಾರಿ ಪ್ರಮಾಣದ ಗಾಳಿಯಿಂದಾಗಿ ಪಟ್ಟಣದ ಹಲವು ಭಾಗಗಳಲ್ಲಿ ಮರಗಳು ಮುರಿದು ಬಿದ್ದಿವೆ. ಎಲೆಕ್ಟ್ರಿಕ್ ಲೈನ್ಗಳು, ಕಂಬಗಳು ತುಂಡಾಗಿವೆ. ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಇದರ ಪರಿಣಾಮ ನೀರು ಸರಬರಾಜು ವ್ಯತ್ಯಾಸವಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮುಖ್ಯ ಅಧಿಕಾರಿ ನಾಗರಾಜ್ ಹಾಗೂ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿ ರಾತ್ರಿಯಿಂದಲೇ ಮರಗಳ ತೆರವು ಹಾಗೂ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದಾರೆ.
ತೀರ್ಥಹಳ್ಳಿ ಸಿದ್ದೇಶ್ವರ ಗುಡ್ಡದಲ್ಲಿ ಬಿದ್ದ ವಿದ್ಯುತ್ ಕಂಬ!
ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಅನಾಹುತ ಸೃಷ್ಟಿ ಆಗಿದೆ. ಸೋಮವಾರ ರಾತ್ರಿ ಸುರಿದ ಗಾಳಿ ಮಳೆಯ ಅನಾಹುತದಿಂದ ಪಟ್ಟಣದ ಹಲವೆಡೆ ವಿದ್ಯುತ್ ಕಂಬಗಳು, ತಂತಿಗಳು ಮುರಿದು ಬಿದ್ದಿವೆ. ಅದೇ ರೀತಿ ಸಿದ್ದೇಶ್ವರ ಗುಡ್ಡದ ಮೇಲಿನ ಗುಡಿಯ ಎದುರಿನ ವಿದ್ಯುತ್ ಕಂಬದ ತಂತಿಯೂ ಸಹ ತುಂಡಾಗಿ ನೆಲದ ಮೇಲೆ ಬಿದ್ದಿದೆ. ಇದನ್ನು ಸರಿಪಡಿಸದೇ ಸಿದ್ದೇಶ್ವರ ಗುಡ್ಡದ ವಿದ್ಯುತ್ ಕಂಬಗಳಿಗೆ ವಿದ್ಯುತ್ ಹರಿಸಿದ್ದೇ ಆದಲ್ಲಿ ಅವಘಡ ಸಂಭವಿಸಬಹುದಾಗಿದ್ದು ಮೆಸ್ಕಾಂ ಇದನ್ನೂ ಗಮನಿಸಿ ಸರಿಪಡಿಸಬೇಕಾಗಿದೆ.








