ಟಾಪ್ ನ್ಯೂಸ್ ಚಿಕ್ಕಮಗಳೂರು
• ಚಿಕ್ಕಮಗಳೂರು: ಬಸ್ ಮೇಲೆ ದಾವೂದ್ ಇಬ್ರಾಹಿಂ ಚಿತ್ರ!
– ಬಸ್ ವಶಕ್ಕೆ ಪಡೆದ ಪೊಲೀಸರು: ಏನಿದು ಘಟನೆ?
• ತರೀಕೆರೆ: ಜನರ ಕಿರುಕುಳ: ಮನನೊಂದು ಮಹಿಳೆ ಆತ್ಮಹತ್ಯೆ
• ಚಿಕ್ಕಮಗಳೂರು: 2 ದಿನ ಮಾಂಸ ಮಾರಾಟ ನಿಷೇಧ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ತಮಿಳುನಾಡು ಮೂಲದಿಂದ ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ ಖಾಸಗಿ ಬಸ್ ಒಂದರ ಮೇಲೆ, ಮುಂಬೈ ಸರಣಿ ಸ್ಫೋಟದ ಸಂಚುಕೋರ, ಭೂಗತ ಲೋಕದ ಕುಖ್ಯಾತ ಅಪರಾಧಿಯಾಗಿರುವ ದಾವೂದ್ ಇಬ್ರಾಹಿಂನ ಚಿತ್ರ ಮತ್ತು ಆತನನ್ನು ಹೊಗಳುವಂತಹ ಬರವಣಿಗೆಯನ್ನು ಹಾಕಿರುವುದು ಕಂಡುಬಂದಿದ್ದು, ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಸ್ ಅನ್ನು ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಸ್ ನ ಸುತ್ತಲೂ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವಂತಹ ಮತ್ತು ಅಪರಾಧ ಲೋಕವನ್ನೇ ವೈಭವೀಕರಿಸುವಂತಹ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
ಇದರಿಂದ ಸ್ಥಳದಲ್ಲಿ ಕೆಲವು ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ತಕ್ಷಣ ಬಸವನಹಳ್ಳಿ ಪೊಲೀಸರು ವಾತಾವರಣವನ್ನು ತಿಳಿಗೊಳಿಸಲು ಈ ವಿವಾದಾತ್ಮಕವಾಗಿರುವಂತಹ ಖಾಸಗಿ ಬಸ್ ಅನ್ನು ವಶಪಡಿಸಿಕೊಂಡು, ಠಾಣೆಯ ಆವರಣಕ್ಕೆ ತೆಗೆದುಕೊಂಡು ಹೋಗಿ, ತನಿಖೆಯನ್ನು ಪ್ರಾರಂಭಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ದೇಶದ್ರೋಹಿ ಚಟುವಟಿಕೆಗಳನ್ನು ವೈಭವಿಕರಿಸುವುದರ ಹಿಂದೆ ಕಾರಣವೇನಿರಬಹುದು ಎನ್ನುವುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
ಜನರ ಕಿರುಕುಳ: ಮನನೊಂದು ಮಹಿಳೆ ಆತ್ಮಹತ್ಯೆ!
ತರೀಕೆರೆ: 201೦ರಿಂದ ಎಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಷಾ ಎನ್ನುವ ಮಹಿಳೆಯು ಗ್ರಾಮದ ಕೆಲವು ಜನರ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಘಕ್ಕೆ ಹೊಸದಾಗಿ ಸೇರಿಕೊಂಡ ಸದಸ್ಯರು ಲೆಕ್ಕಪತ್ರಗಳನ್ನು ಕೇಳಿದಾಗ ಉಷಾ ಅವರು ಅದನ್ನು ಒದಗಿಸಿದ್ದಾರೆ. ಆದರೂ ಇಲ್ಲಸಲ್ಲದ ಆರೋಪಗಳನ್ನು ಅವರ ಮೇಲೆ ಹೊರೆಸುವ ಪ್ರಯತ್ನ ಮಾಡಿದ್ದರಿಂದ, ಮಾನಸಿಕವಾಗಿ ನೊಂದು ಉಷಾ ಅವರು ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತಿಯಾದ ಎಚ್.ಎನ್. ರಮೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
•ಚಿಕ್ಕಮಗಳೂರು: 2 ದಿನ ಮಾಂಸ ಮಾರಾಟ ನಿಷೇಧ
ಚಿಕ್ಕಮಗಳೂರು: ಶ್ರೀರಾಮನವಮಿ ಹಾಗೂ ಮಹಾವೀರ ಜಯಂತಿಯ ಹಿನ್ನೆಲೆಯಲ್ಲಿ ಮಾರ್ಚ್ 27ರ ಶುಕ್ರವಾರ ಹಾಗೂ ಮಾರ್ಚ್ 31ರ ಮಂಗಳವಾರದಂದು ಎರಡು ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸುವ ಕುರಿತು ನಗರಸಭೆಯ ಪೌರಾಯುಕ್ತರಾದ ಬಿ.ಸಿ.ಬಸವರಾಜ್ ಅವರು ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರದ ಸುತ್ತೋಲೆಯ ಅಡಿಯಲ್ಲಿ ಕೋಳಿ, ಮೀನು, ಕುರಿ ಮಾರಾಟ ಮಾಡುವ ಮಳಿಗೆಗಳು ಮತ್ತು ಮಾಂಸಾಹಾರಿ ಹೊಟೇಲ್ ಗಳನ್ನು ಎರಡು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಒಂದು ವೇಳೆ ಕಾನೂನು ಕ್ರಮವನ್ನು ವಿರೋಧಿಸಿ ಮಾರಾಟ ಮಾಡಲು ಪ್ರಯತ್ನಿಸಿದ್ದಲ್ಲಿ, ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರು ಎಚ್ಚರಿಸಿದ್ದಾರೆ.








