114 ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ಬ್ಯಾನ್!
– ಮೊಬೈಲ್ ಇಂದ ಅನಾರೋಗ್ಯ, ಶಿಕ್ಷಣ ಹಿನ್ನಡೆ
– ಯುವ ಜನರ ಬದುಕು ಮೊಬೈಲ್ ಚಟಕ್ಕೆ ಬಲಿ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಇಂದಿನ ತಲೆಮಾರಿನ ಮಕ್ಕಳು ಮೊಬೈಲ್ ಚಟಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅದರಿಂದ ಮಕ್ಕಳನ್ನು ಹೊರತರುವ ನಿಟ್ಟಿನಲ್ಲಿ ಸುಮಾರು 114 ದೇಶಗಳು ಶಾಲಾ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸಿದೆ. ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗಿರುವ ಕಾರಣ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸೈಬರ್ ಬುಲ್ಲಿಂಗ್ ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುವಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಸೇರಿ ಈಗಾಗಲೇ ಜಗತ್ತಿನ ಶೇಕಡ 58 ರಷ್ಟು ದೇಶಗಳು ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸಿದೆ ಎಂದು ಯುನೆಸ್ಕೊದ ಜಾಗತಿಕ ಶಿಕ್ಷಣ ನಿಗಾ ಸಮಿತಿಯು ವರದಿಯನ್ನು ಪ್ರಕಟಿಸಿದೆ.
ಕರ್ನಾಟಕದಲ್ಲೂ 14 ವರ್ಷದ ಮಕ್ಕಳಿಗೆ ಮೊಬೈಲ್ ನಿಷೇಧ
ಕರ್ನಾಟಕ ಸರ್ಕಾರವು ಕೂಡ 14 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚರ್ಚೆ ನಡೆಸಿದ್ದು, ಬಜೆಟ್ ಸಂದರ್ಭದಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸಿದೆ. ಸಂಪೂರ್ಣವಾಗಿ ಮೊಬೈಲ್ ಬಳಕೆಯನ್ನು ನಿಷೇಧಿಸಲು ಕಷ್ಟಸಾಧ್ಯವಾಗುವುದರಿಂದ ಕೇವಲ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಲು ಘೋಷಿಸಿದೆ. ಇದರ ಪರಿಣಾಮವಾಗಿ ಇಂತಹ ನಿರ್ಣಯವನ್ನು ಕೈಗೊಂಡಿರುವ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕವು ಪಾತ್ರವಾಗಿದೆ. ಕರ್ನಾಟಕವನ್ನು ಮಾದರಿಯಾಗಿಸಿಕೊಂಡ ತೆಲಂಗಾಣ ಸರ್ಕಾರವೂ ಕೂಡ ಇಂತಹದೇ ಘೋಷಣೆಯನ್ನು ಹೊರಡಿಸಿದೆ ಎನ್ನುವ ಮಾಹಿತಿ ಲಭಿಸಿದೆ.
ಯುವ ಜನರ ಬದುಕು ಮೊಬೈಲ್ ಚಟಕ್ಕೆ ಬಲಿ!
ಯುವ ಜನತೆ ಕೂಡ ಮೊಬೈಲ್ ಚಟಕ್ಕೆ ಬಲಿ ಆಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆ ಬದುಕನ್ನು ಹಾಳು ಮಾಡುತ್ತಿದೆ. ಉದ್ಯೋಗ, ಶಿಕ್ಷಣ, ಕೌಶಲ್ಯ ಮರೆಯಾಗುತ್ತಿದೆ. ಮೊಬೈಲ್ ಗೀಳು ವಯುಕ್ತಿಕ ಜೀವನವನ್ನು ಹಾಳು ಮಾಡುತ್ತಿದೆ.








