ಟಾಪ್ ನ್ಯೂಸ್ ಮಲೆನಾಡು
ಹಳ್ಳಿಯಲ್ಲಿ ಹಾರುತ್ತಿದ್ದ ವಿಮಾನ: ಜನರಿಗೆ ಭಯ!
– ಕಳಸ, ಎನ್. ಆರ್. ಪುರ ತಾಲೂಕಲ್ಲಿ ಹಾರಾಟ: ಅಚ್ಚರಿ
– ಯಾರಿಗೂ ಮಾಹಿತಿ ಇಲ್ಲ: ಭದ್ರತಾ ವೈಫಲ್ಯ..?!
ತೀರ್ಥಹಳ್ಳಿ: ಕಾರನ್ನೇ ಪುಡಿ ಪುಡಿ ಮಾಡಿದ ಕಾಡು ಕೋಣ!
ಶೃಂಗೇರಿ: ಡಾಕ್ಟರ್ ವಿರುದ್ದ ಮಹಿಳಾ ಆಯೋಗಕ್ಕೆ ಕೇಸ್
ಚಿಕ್ಕಮಗಳೂರು: ಮುಳ್ಳಯ್ಯನಗಿರಿಯಲ್ಲಿ ಅನೇಕ ಮಾರ್ಗ ಬಂದ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಬಾಳೆಹೊನ್ನೂರು, ಬಾಳೆಹೊಳೆ, ಖಾಂಡ್ಯ ಸುತ್ತಮುತ್ತ ವಿಮಾನ ಹಾರಾಟ ಇದೀಗ ಜನರಲ್ಲಿ ಆತಂಕ ಸೃಷ್ಟಿಮಾಡಿದೆ. ಆದರೆ ಇದು ಯಾಕಾಗಿ ಹಾರಾಟ ನಡೆಸಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.ಕಣ್ಣಿಗೆ ಕಾಣುವ ಮಟ್ಟಿಗೆ ಮನೆ ಮೇಲಗಡೆ ಹಾರಾಟ ನಡೆಸಿದೆ.
ವನ್ಯಜೀವಿ ಅರಣ್ಯ ಪ್ರದೇಶಗಳ ವ್ಯಾಪ್ತಿಯೊಳಗೆ ಸೊಮವಾರ ಮಧ್ಯಾಹ್ನ ಸಾಮಾನ್ಯ ಗಾತ್ರದ ವಿಮಾನವೊಂದು ಹತ್ತಿರದ ಅಂತರದಲ್ಲಿ ಹಾರಾಟ ನಡೆಸುತ್ತಿರುವುದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಬೆಳಗ್ಗೆ ಕಳಸ ತಾಲೂಕು ಬಾಳೆಹೊಳೆ, ತಲಗೋಡು, ತಂಬಿಕೊಡಿಗೆ, ಮುನ್ಸೂರ್ಪಾಲ್ ಮುಂತಾದ ಕಡೆಗಳಲ್ಲಿ ವಿಮಾನ ಕಾಣಿಸಿಕೊಂಡಿದೆ. ಮಧ್ಯಾಹ್ನ ಹೋಗಿದ್ದು, ಖಾಂಡ್ಯ ಹೋಬಳಿಯ ವನ್ಯಜೀವಿ ಅರಣ್ಯ ಪ್ರದೇಶದ ವ್ಯಾಪ್ತಿಯೊಳಗೆ ಸುತ್ತುವರೆದು ಭದ್ರಾ ನದಿ ಪಾತ್ರದ ಮಾರ್ಗದಲ್ಲೇ ಹಾದು ಹೋಗಿದೆ.
ವನ್ಯಜೀವಿ ಪ್ರದೇಶದ ಮೇಲೆ ಯಾವುದೇ ವಿಮಾನ, ಹೆಲಿಕಾಪ್ಟರ್ ಹಾರಾಟ ಮಾಡುವುದು ನಿಷಿದ್ದವಾಗಿದ್ದು, ರಹಸ್ಯ ಸರ್ವೆ ಕಾರ್ಯ ನಡೆಯುತ್ತಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಅರಣ್ಯ ಇಲಾಖೆ, ಜಿಲ್ಲಾಡಳಿತವನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವುದು ವಿಪರ್ಯಾಸ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ರಾಜೇಗೌಡ ಅವರ ಬಳಿ ವಿಚಾರಿಸಿದಾಗ ಈ ಕುರಿತು ಯಾವ ಮಾಹಿತಿಯೂ ಇಲ್ಲ.
ಯಾರಿಗೂ ಮಾಹಿತಿ ಇಲ್ಲ: ಭದ್ರತಾ ವೈಫಲ್ಯ..?!
ಫೆ.9ರಂದು ಬಾಳೆಹೊನ್ನೂರು, ಖಾಂಡ್ಯ, ಬಾಳೆಹೊಳೆ ಸುತ್ತಮುತ್ತ ಅತ್ಯಂತ ಕೆಳ ಮಟ್ಟದಲ್ಲಿ ವಿಮಾನ ಸಂಚರಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ವಿಮಾನ ಹಾರಾಟದ ಹಿಂದಿನ ರಹಸ್ಯ ಇನ್ನು ಬಯಲಾಗಿಲ್ಲ. L ವಿಮಾನ ಯಾರದ್ದು? ಹಾರಾಡುತ್ತಿರುವುದೇಕೆ? ಅನುಮತಿ ಇದೆಯಾ? ಅನುಮತಿ ಕೊಟ್ಟವರ್ಯಾರು? ಸ್ಥಳಿಯ ಇಲಾಖೆಗಳಿಗೆ ಅಥವಾ ಅಧಿಕಾರಸ್ತ ಜನಪ್ರತಿನಿಧಿಗಳಿಗೆ ಮಾಹಿತಿ ಏಕೆ ಕೊಟ್ಟಿಲ್ಲ?. ಒತ್ತುವರಿ ಜಮೀನುಗಳ ತೆರವು ಕಾರ್ಯಾಚರಣೆಗೆ ಪೂರಕ ಮಾಹಿತಿ ಸಂಗ್ರಹಿಸಲಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ.
ತೀರ್ಥಹಳ್ಳಿ: ಕಾರನ್ನೇ ಪುಡಿ ಪುಡಿ ಮಾಡಿದ ಕಾಡು ಕೋಣ!
ಇತ್ತೀಚಿಗೆ ಮಲೆನಾಡು ಭಾಗದಲ್ಲಿ ಕಾಡು ಕೋಣಗಳು ವಿಪರೀತವಾಗಿವೆ. ಎಲ್ಲಿ ನೋಡಿದರೂ ಊರಿಗೆ ನುಗ್ಗುತ್ತಿವೆ. ಈ ನಡುವೆ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಬಳಿ ಕಾರನ್ನೇ ಪುಡಿ ಪುಡಿ ಮಾಡಿದ ಕಾಡು ಕೋಣ ಪರಾರಿಯಾದ ಘಟನೆ ನಡೆದಿದೆ. ಕಾರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗ ಎಂಬಲ್ಲಿ ಫೆ.10ರ ಸಂಜೆ ಕಾಡುಕೋಣ ಮುಖ್ಯ ರಸ್ತೆಗೆ ಹಾರಿದ ಪರಿಣಾಮ ಶಿಫ್ಟ್ ಕಾರೊಂದು ಸಂಪೂರ್ಣ ಪುಡಿ ಆಗಿದೆ .
ಈಗ ವಿವಾದದತ್ತ ಶೃಂಗೇರಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ!?
ಶೃಂಗೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಡಿ ಗ್ರೂಪ್ ಮಹಿಳಾ ನೌಕರರೊಬ್ಬರು ಆಡಳಿತ ವೈದ್ಯಾಧಿಕಾರಿಗಳಳಿಂದ ಮಾನಸಿಕ ಕಿರುಕುಳ ಉಂಟಾಗುತ್ತಿರುವುದಲ್ಲದೇ, ಅರ್ಜಿದಾರರುಗಳೊಂದಿಗೆ ಆಶ್ಲೀಲವಾಗಿ ಏಕವಚನದಲ್ಲಿ ನಿಂದಿಸುತ್ತಿದ್ದಾರೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
ರಾಜ್ಯ ಆಯೋಗ ಈ ಸಂಬಂಧ ತನಿಖೆ ನಡೆಸಿ ಕ್ರಮ ವಹಿಸುವಂತೆ ಜಿಲ್ಲಾ ಅಂತರಿಕ ಸಮಿತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಅಂತರಿಕ ಸಮಿತಿ `ಚಿಕ್ಕಮಗಳೂರು ತಂಡದಿಂದ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಸಮಿತಿಯ ಜಂಟಿ ಅಧ್ಯಕ್ಷರಾಗಿ ಡಾ.ಸೀಮಾ.ಎಸ್. ಹಾಗೂ ಡಾ. ಚೇತನಾ.ಎನ್.ಆರ್ ಇವರ ತಂಡ ಭೇಟಿ ನೀಡಿ ತನಿಖೆನಡೆಸಿದೆ. ಇದು ಸುಳ್ಳು ಪ್ರಕರಣವೋ ಸತ್ಯವೋ ಎಂಬ ಬಗ್ಗೆ ವರದಿ ನೀಡಬೇಕಿದೆ.
ಮುಳ್ಳಯ್ಯನಗಿರಿ ಪ್ರವಾಸ: ಅನೇಕ ಮಾರ್ಗಬಂದ್!
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ ನಡೆಯುತ್ತಿರುವುದರಿಂದ, ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ಪ್ರವಾಸಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ದೇವಸ್ಥಾನದ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಭಾರಿ ವಾಹನಗಳ ಮೂಲಕ ಸಾಗಿಸುತ್ತಿರುವುದರಿಂದ ಮತ್ತು ಈ ರಸ್ತೆ ಕಿರಿದಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಫೆ.7 ರಿಂದ ಮಾರ್ಚ್ 5, 2026ರ ವರೆಗೆ ಪ್ರವಾಸಿ ಜೀಪ್ಗಳು ಹಾಗೂ ಸಾರ್ವಜನಿಕ ವಾಹನಗಳ ಓಡಾಟವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಿಷೇಧಿಸಿದೆ. ಆದ್ದರಿಂದ, ಪ್ರವಾಸಿಗರು ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ನಡೆದುಕೊಂಡು ಹೋಗುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.








