ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಗೆಲುವಿನೊಂದಿಗೆ ತನ್ನ ಐಪಿಎಲ್ ಅಭಿಯಾನ ಮುಗಿಸಿದ ಚೆನ್ನೈ
* ಹೈದ್ರಾಬಾದ್ನ ರನ್ ಸುನಾಮಿಯಲ್ಲಿ ಕೊಚ್ಚಿ ಹೋದ ಕೋಲ್ಕತ್ತಾ
NAMMMUR EXPRESS SPORTS NEWS
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 18ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಅತ್ತ, ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸತತ ಎರಡು ಸೋಲು ಕಂಡಿರುವ ಗುಜರಾತ್ ಟೈಟಾನ್ಸ್ ತಂಡವು, ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಆದರೆ, ಲೀಗ್ ಹಂತದ ಮುಗಿಯುವ ವೇಳೆಗೆ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವ ಸಾಧ್ಯತೆ ಕಡಿಮೆಯಾಗಿದೆ. ಗುಜರಾತ್ ತಂಡದ ಸೋಲಿನೊಂದಿಗೆ ಆರ್ಸಿಬಿ ತಂಡ ಹಾಗೂ ಅಭಿಮಾನಿಗಳಿಗೆ ಖುಷಿಯಾಗಿದ್ದು,ಆರ್ಸಿಬಿ ಅಗ್ರ ಎರಡು ಸ್ಥಾನಗಳಲ್ಲಿ ಲೀಗ್ ಹಂತವನ್ನು ಮುಗಿಸುವ ಅವಕಾಶ ಹೆಚ್ಚಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್ಕೆ, ಈ ಸೀಸನ್ನಲ್ಲಿ ತನ್ನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಸ್ಫೋಟಕ ಪ್ರದರ್ಶನದೊಂದಿಗೆ 5 ವಿಕೆಟ್ ಕಳೆದುಕೊಂಡು 230 ರನ್ ಕಲೆ ಹಾಕಿತು. ಚೇಸಿಂಗ್ ನಡೆಸಿದ ಟೈಟಾನ್ಸ್, ಬ್ಯಾಟಿಂಗ್ನಲ್ಲಿ ಭಾರಿ ಕುಸಿತ ಕಂಡು 18.3 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 83 ರನ್ಗಳಿಂದ ಗೆದ್ದು ಬೀಗಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಎಂದಿನಂತೆ ಅಬ್ಬರಿಸಿದ ಆಯುಷ್ ಮ್ಹಾತ್ರೆ 200ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 17 ಎಸೆತಗಳಲ್ಲಿ 34 ರನ್ ಗಳಿಸಿದರು. ಈ ವೇಳೆ ಕಾನ್ವೆ ಹಾಗೂ ಊರ್ವಿಲ್ ಪಟೇಲ್ ಅರ್ಧಶತಕದ ಜೊತೆಯಾಟವಾಡಿದರು. 37 ರನ್ ಗಳಿಸಿ ಊರ್ವಿಲ್ ಪಟೇಲ್ ಔಟಾದರೆ, ಅವರ ಬೆನ್ನಲ್ಲೇ ಶಿವಂ ದುಬೆ ಕೂಡಾ 17 ರನ್ ಗಳಿಸಿ ನಿರ್ಗಮಿಸಿದರು. ಜವಾಬ್ದಾರಿಯುತ ಆಟವಾಡಿದ ಕಾನ್ವೆ 52 ರನ್ ಸಿಡಿಸಿ ಔಟಾದರು.ಕೊನೆಯಲ್ಲಿ ಡೆವಾಲ್ಡ್ ಬ್ರೆವಿಸ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಜಡೇಜಾ ಜೊತೆಗೂಡಿ ತಾವೊಬ್ಬರೇ 23 ಎಸೆತಗಳಲ್ಲಿ 5 ಸ್ಫೋಟಕ ಸಿಕ್ಸರ್ ಸಹಿತ 57 ರನ್ ಬಾರಿಸಿದರು. ಹೀಗಾಗಿ ತಂಡದ ಮೊತ್ತವು 230ಕ್ಕೇರಿತು.
ಬೃಹತ್ ಮೊತ್ತದ ಚೇಸ್ ಆರಂಭಿಸಿದ ಗುಜರಾತ್, ಈ ಬಾರಿ ಅಂದುಕೊಂಡಂತೆ ಆಡಲು ಸಾಧ್ಯವಾಗಲಿಲ್ಲ. ತಂಡದ ಸ್ಟಾರ್ ಆರಂಭಿಕರಾದ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟ್ನಿಂದ ಈ ಬಾರಿ ಜವಾಬ್ದಾರಿಯುತ ಆಟ ಬರಲಿಲ್ಲ. ಬೇಗನೆ ದೊಡ್ಡ ಹೊಡೆತಕ್ಕೆ ಮುಂದಾದ ಶುಭ್ಮನ್ ಗಿಲ್ 13 ರನ್ ಗಳಿಸಿ ಔಟಾದರು. ಅವರ ಬೆನ್ನಲ್ಲೇ ಬಟ್ಲರ್ 5 ಹಾಗೂ ರುದರ್ಫೋರ್ಡ್ 0ಗೆ ಔಟಾದರು. ಶಾರುಖ್ ಖಾನ್ ಕೂಡಾ 19 ರನ್ಗೆ ಆಟ ಮುಗಿಸಿದರು. ಟೂರ್ನಿಯಲ್ಲಿ ಹೆಚ್ಚು ರನ್ಗಳೊಂದಿಗೆ ಆರೇಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸುದರ್ಶನ್ 28 ಎಸೆತಗಳಲ್ಲಿ 41 ರನ್ ಗಳಿಸಿದರು.ಕೊನೆಯಲ್ಲಿ ರಾಹುಲ್ ತೆವಾಟಿಯಾ 14, ರಶೀದ್ ಖಾನ್ 12 ಹಾಗೂ ಅರ್ಷದ್ ಖಾನ್ 20 ರನ್ ಗಳಸಿದರು. ಸಿಎಸ್ಕೆ ಪರ 3 ವಿಕೆಟ್ ಪಡೆದ ನೂರ್ ಅಹ್ಮದ್ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು.
ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಅಂತಿಮವಾಗಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಯಾವುವು ಎಂಬ ಕುತೂಹಲ ಇನ್ನಷ್ಟು ಮುಂದುವರೆದಿದೆ. ಎಲ್ಲಾ ನಾಲ್ಕು ತಂಡಗಳಿಗೆ ಮೊದಲ ಎರಡು ಸ್ಥಾನ ಪಡೆಯುವ ಅವಕಾಶಗಳಿವೆ. ಆದರೆ, ತನ್ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಗೆದ್ದರೆ ಮಾತ್ರ ಇದು ಸಾಧ್ಯವಾಗಲಿದೆ.
* ಹೈದ್ರಾಬಾದ್ನ ರನ್ ಸುನಾಮಿಯಲ್ಲಿ ಕೊಚ್ಚಿ ಹೋದ ಕೋಲ್ಕತ್ತಾ
ಹೆನ್ರಿಕ್ ಕ್ಲಾಸೆನ್ ಅವರ ಬಿರುಗಾಳಿ ಶತಕ ಮತ್ತು ಜಯದೇವ್ ಉನಾದ್ಕಟ್ ನೇತೃತ್ವದ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 110 ರನ್ಗಳಿಂದ ಸೋಲಿಸುವ ಮೂಲಕ ತನ್ನ ಐಪಿಎಲ್ ಅಭಿಯಾನವನ್ನು ಕೊನೆಗೊಳಿಸಿತು. ಈಗಾಗಲೇ ಪ್ಲೇಆಫ್ ರೇಸ್ನಿಂದ ಈ ಎರಡೂ ತಂಡಗಳು ಹೊರಬಿದ್ದಿದ್ದು, ಸನ್ರೈಸರ್ಸ್ ತಂಡವು 14 ಪಂದ್ಯಗಳಲ್ಲಿ 13 ಅಂಕಗಳೊಂದಿಗೆ ಆರನೇ ಸ್ಥಾನವನ್ನು ತಲುಪಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ 8 ನೇ ಸ್ಥಾನದಲ್ಲಿದೆ. ಈ ಪಂದ್ಯದ ಸೋಲಿನ ನಂತರ, ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಅಜಿಂಕ್ಯ ರಹಾನೆ ತಮ್ಮ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕಳಪೆಯಾಗಿತ್ತು ಎಂದು ಹೇಳಿದರು. ‘ಅವರು ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು, ಬೌಲಿಂಗ್ ಮಾಡುವಾಗ ನಾವು ಕೆಲವು ತಪ್ಪುಗಳನ್ನು ಮಾಡಿದೆವು’ ಎಂದು ರಹಾನೆ ಒಪ್ಪಿಕೊಂಡರು. ಅವರು ಬ್ಯಾಟಿಂಗ್ ಮಾಡಿದ ರೀತಿ, ನಾವು ಎಸೆದ ಎಲ್ಲ ಸುಲಭ ಚೆಂಡುಗಳ ಲಾಭವನ್ನು ಪಡೆದುಕೊಂಡರು ಮತ್ತು ಉತ್ತಮ ಚೆಂಡುಗಳನ್ನು ಸಹ ಹೊಡೆದರು. ಇದರ ಶ್ರೇಯಸ್ಸು ಹೈದರಾಬಾದ್ ಬ್ಯಾಟ್ಸ್ಮನ್ಗಳಿಗೆ ಸಲ್ಲಬೇಕು, ಅವರ ಉದ್ದೇಶ ನಿಜಕ್ಕೂ ಅದ್ಭುತವಾಗಿತ್ತು ಎಂದಿದ್ದಾರೆ.
* ಅದ್ಭುತ ಇನ್ನಿಂಗ್ಸ್ ಆಡಿದ ಕ್ಲಾನೆಸ್
ಕ್ಲಾಸೆನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ನಲ್ಲಿ 39 ಎಸೆತಗಳಲ್ಲಿ ಒಂಬತ್ತು ಸಿಕ್ಸರ್ಗಳು ಮತ್ತು ಏಳು ಬೌಂಡರಿಗಳೊಂದಿಗೆ ಅಜೇಯ 105 ರನ್ ಗಳಿಸಿದರು, ಜೊತೆಗೆ ಹೆಡ್ (76 ರನ್, 40 ಎಸೆತಗಳು, ಆರು ಸಿಕ್ಸರ್ಗಳು, ಆರು ಬೌಂಡರಿಗಳು) ಮತ್ತು ಇಶಾನ್ ಕಿಶನ್ (29) ಅವರೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ವಿಕೆಟ್ಗಳಿಗೆ 83 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು, ಸನ್ರೈಸರ್ಸ್ ಮೂರು ವಿಕೆಟ್ಗಳಿಗೆ 278 ರನ್ ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ಸ್ಕೋರ್ ಮತ್ತು ಪ್ರಸಕ್ತ ಋತುವಿನ ಎರಡನೇ ದೊಡ್ಡ ಸ್ಕೋರ್ ಆಗಿದೆ.








