ಕ್ರಿಕೆಟ್ ಬಾಲ ಸಾಧಕ ಜ್ಞಾನ ಪ್ರಭು
– 72 ಎಸೆತದಲ್ಲಿ ಶತಕ ಹೊಡೆದು ದಾಖಲೆ
– ತೀರ್ಥಹಳ್ಳಿ ಸಿಟಿ ಕ್ರಿಕೆಟ್ ಕ್ಲಬ್ ಪರವಾಗಿ ಆಟ
ತೀರ್ಥಹಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ತೀರ್ಥಹಳ್ಳಿಯ ಶಾಂತವೇರಿ ನಿತಿನ್ ಆಯ್ಕೆಗೊಂಡು ಸಾಧನೆ ಮಾಡಿದ್ದು, ಇದೀಗ ಮತ್ತೊಬ್ಬ ಯುವ ಪ್ರತಿಭೆ ಜ್ಞಾನಪ್ರಭು ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಕೆಎಸ್ಸಿಎ ನೇತೃತ್ವದಲ್ಲಿ ನಡೆಯುತ್ತಿರುವ 16 ವರ್ಷಕ್ಕಿಂತ ಕಡಿಮೆ ವಯೋಮಾನದ ಕ್ರಿಕೆಟ್ ಪಂದ್ಯಾವಳಿಯಲ್ಲಿ, ತೀರ್ಥಹಳ್ಳಿಯ ಸಿಟಿ ಕ್ರಿಕೆಟ್ ಕ್ಲಬ್ ಪರವಾಗಿ ಆಡುತ್ತಿರುವ ಜ್ಞಾನಪ್ರಭು ತಮ್ಮ ಅದ್ಭುತ ಆಟದಿಂದ ಗಮನ ಸೆಳೆದಿದ್ದಾರೆ.
ಸಾಗರ ತಂಡದ ವಿರುದ್ಧ 164 ರನ್ ಗುರಿ ಬೆನ್ನತ್ತಿದ ತೀರ್ಥಹಳ್ಳಿ ತಂಡದ ಪರವಾಗಿ ಜ್ಞಾನಪ್ರಭು 72 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ ಶತಕ (100 ರನ್) ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಜ್ಞಾನಪ್ರಭು ಪ್ರಸ್ತುತ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬೆಂಗಳೂರಿನಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದು, ಪ್ರಥಮ ಪಿಯುಸಿ ಓದುತ್ತಿದ್ದಾರೆ. ತೀರ್ಥಹಳ್ಳಿಯ ಬೊಮ್ಮಸಯ್ಯನ ಅಗ್ರಹಾರದ ನಿವಾಸಿಯಾಗಿರುವ ಅವರು, ಶಿವಮೊಗ್ಗ ಜಿಲ್ಲಾ ಧಾರ್ಮಿಕ ದತ್ತಿ ಸದಸ್ಯೆ ವರಲಕ್ಷ್ಮಿ ಹಾಗೂ ಪ್ರಕಾಶ್ ದಂಪತಿಗಳ ಪುತ್ರ.
ಕ್ರಿಕೆಟ್ನಲ್ಲಿ ಕರ್ನಾಟಕ ತಂಡದ ಪರವಾಗಿ, ಮುಂದಿನ ದಿನಗಳಲ್ಲಿ ಐಪಿಎಲ್ ಹಾಗೂ ಭಾರತ ತಂಡಕ್ಕೂ ಪ್ರತಿನಿಧಿಸುವ ಸಾಮರ್ಥ್ಯ ಇದೆ ಎಂದು ಸ್ಥಳೀಯ ಕ್ರೀಡಾಭಿಮಾನಿಗಳು ಹೇಳಿದ್ದಾರೆ.








