ಪಾಕ್ ತಂಡವನ್ನು ಬಗ್ಗುಬಡಿದ ಭಾರತ ಮಹಿಳಾ ಕ್ರಿಕೆಟ್ ತಂಡ
ಮಹಿಳಾ ಏಕದಿನ ವಿಶ್ವಕಪ್ -2025
* ಪಾಕ್ ವಿರುದ್ಧ ಏಕದಿನದಲ್ಲಿ ಭಾರತ ಸೋಲಿಲ್ಲದ ಸರದಾರ
* ಈ ಪಂದ್ಯದಲ್ಲೂ ‘ನೋ ಹ್ಯಾಂಡ್ ಶೇಕ್’, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತ
NAMMMUR EXPRESS SPORTS NEWS
ಕೊಲಂಬೋ: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ಮಹಿಳಾ ತಂಡ ಗೆಲುವು ಸಾಧಿಸಿದೆ. ಭಾರತ ನೀಡಿದ 248 ರನ್ ಟಾರ್ಗೆಟ್ ಚೇಸ್ ಮಾಡಲು ಎಡವಿದ ಪಾಕಿಸ್ತಾನ 159 ರನ್ಗೆ ಆಲೌಟ್ ಆಯಿತು. ಈ ಮೂಲಕ ಭಾರತ 88 ರನ್ ಗೆಲುವು ದಾಖಲಿಸಿದೆ. ಭಾರತ ಮಹಿಳಾ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಮುಗ್ಗರಿಸಿದ್ದು, ಈ ಮೂಲಕ ಏಕದಿನದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ದ ಸೋಲಿಲ್ಲದ ಸರದಾರನಾಗಿ ಮುಂದುವರೆದಿದೆ. ಭಾರತ ಮಹಿಳಾ ತಂಡ ಪುರುಷರ ತಂಡದ ರೀತಿಯಲ್ಲೇ ಪಾಕಿಸ್ತಾನ ಆಟಗಾರ್ತಿಯರಿಗೆ ಹ್ಯಾಂಡ್ ಶೇಕ್ ಮಾಡದೇ ತೆರಳಿದೆ. ಈ ಮೂಲಕ ಪಾಕಿಸ್ತಾನ ಮತ್ತೆ ತೀವ್ರ ಮುಖಭಂಗ ಅನುಭವಿಸಿದೆ. ಸೆಪ್ಟೆಂಬರ್ 28ರಂದು ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ತಂಡ ಹ್ಯಾಂಡ್ ಶೇಕ್ ಮಾತ್ರವಲ್ಲ, ಹಲವು ರೀತಿಯಲ್ಲಿ ಪಾಕಿಸ್ತಾನ ತಂಡವನ್ನು ರೋಸ್ಟ್ ಮಾಡಿತ್ತು.
* ಭಾರತದ ದಾಳಿಗೆ 43 ಓವರ್ನಲ್ಲಿ ಪಾಕ್ ಆಲೌಟ್
ಭಾರತ 248ರನ್ ಟಾರ್ಗೆಟ್ ನೀಡಿತ್ತು. ಪಾಕಿಸ್ತಾನದ ಸಾದಿರ್ ಅಮೀನ್ ದಿಟ್ಟ ಹೋರಾಟ ನೀಡಿ 81 ರನ್ ಸಿಡಿಸಿ ಅಬ್ಬರಿಸಿದ್ದರು. ಅಮೀನ್ ಅಬ್ಬರ ಭಾರತಕ್ಕೆ ತೆಲನೋವಾಗಿತ್ತು. ಆದರೆ ಸಾದಿರ್ ಅಮೀನ್ ವಿಕೆಟ್ ಪತನದ ಬೆನ್ನಲ್ಲೇ ಪಾಕಿಸ್ತಾನ ದಿಢೀರ್ ಕುಸಿತ ಕಂಡಿತ್ತು. ನತಾಲಿಯಾ ಪರ್ವೇಜ್ ಹಾಗೂ ಸಾದಿರ್ ಅಮಿನ್ ಜೊತೆಯಾಟ ಪಾಕಿಸ್ತಾನ ತಂಡಕ್ಕೆ ನೆರವಾಗಿತ್ತು. ಆದರೆ ಪರ್ವೇಜ್ 33 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಸಾದಿರ್ ಅಮಿನ್ ಏಕಾಂಗಿಯಾಗಿ ಹೋರಾಟ ನೀಡಿದರು. ಯಾರಿಂದರೂ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ 43 ಓವರ್ಗಳಲ್ಲಿ ಪಾಕಿಸ್ತಾನ ಆಲೌಟ್ ಆಗಿತ್ತು. 159 ರನ್ ಸಿಡಿಸಿ ಪಾಕಿಸ್ತಾನ ಸೋಲೊಪ್ಪಿಕೊಂಡಿತು.
* ಪಾಕ್ ಏಕದಿನದಲ್ಲಿ ಭಾರತ ಸೋಲಿಲ್ಲದ ಸರದಾರ
ಪಾಕಿಸ್ತಾನ ವಿರುದ್ದ ಭಾರತ ಮಹಿಳಾ ತಂಡ ಏಕದಿನ ಮಾದರಿಯಲ್ಲಿ ಇದುವರೆಗೂ ಯಾವುದೇ ಪಂದ್ಯ ಸೋಲು ಕಂಡಿಲ್ಲ. 12 ಏಕದಿನ ಪಂದ್ಯ ಆಡಿದ್ದು, 12ರಲ್ಲೂ ಪಾಕಿಸ್ತಾನ ವಿರುದ್ದ ಭಾರತ ಗೆಲುವು ದಾಖಲಿಸಿದೆ.
* ಅಂಕಪಟ್ಟಿಯಲ್ಲಿ ಮೊದಲ ಸ್ಥಾನ
ಮಹಿಳಾ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಭಾರತ ಮಹಿಳಾ ತಂಡ ಮೊದಲ ಸ್ಥಾನದಲ್ಲಿದೆ. ಆಡಿದ 2 ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಒಟ್ಟು ನಾಲ್ಕು ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಇತ್ತ ಪಾಕಿಸ್ತಾನ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 2 ಪಂದ್ಯದಲ್ಲಿ ಮುಗ್ಗರಿಸಿದೆ. ಹೀಗಾಗಿ 6ನೇ ಸ್ಥಾನದಲ್ಲಿದೆ. ಒಟ್ಟು 8 ತಂಡಗಳ ಪೈಕಿ ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ 7 ಮತ್ತು 8ನೇ ಸ್ಥಾನದಲ್ಲಿದೆ. 2ರಲ್ಲಿ ಒಂದು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ನಂತರದ ಸ್ಥಾನದಲ್ಲಿದೆ.








