ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಬದಲಾಗದ ಚೆನ್ನೈ ಹಣೆಬರಹ,ಹೈದ್ರಾಬಾದ್ ವಿರುದ್ಧ ಸೋಲು
* ಪ್ಲೇ ಆಫ್ ಹಾದಿಯಿಂದ ಬಹುತೇಕ ಔಟ್ !
NAMMMUR EXPRESS SPORTS NEWS
ಚೆನ್ನೈ: ನಾಯಕ ಬದಲಾದರೂ, ತಂಡದಲ್ಲಿ ಪದೇ ಪದೇ ಬದಲಾವಣೆ ಮಾಡುತ್ತಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ಹಣೆಬರಹ ಮಾತ್ರ ಬದಲಾಗಿಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧವೂ ಸೋಲುವ ಮೂಲಕ ಧೋನಿ ಬಳಗದ ಪ್ಲೇ ಆಫ್ ಕನಸು ಬಹುತೇಕ ಕಮರಿದೆ. ಆಡಿರುವ 9 ಪಂದ್ಯಗಳಲ್ಲಿ 7 ಸೋಲು ಕಂಡಿರುವ ಚೆನ್ನೈ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಇನ್ನುಳಿದ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್ ತಲುಪುವುದು ಅಸಾಧ್ಯ ಎಂಬ ಪರಿಸ್ಥಿತಿಗೆ ಬಂದಿದೆ. ಇದೇ ವೇಳೆ 9ನೇ ಸ್ಥಾನಿಯಾಗಿದ್ದ ಸನ್ ರೈಸರ್ಸ್ ತಂಡ ಈ ಗೆಲುವಿನೊಂದಿಗೆ 6 ಅಂಕಗಳನ್ನು ಕೂಡಿಸಿದಂತಾಗಿದ್ದು 8ನೇ ಸ್ಥಾನಕ್ಕೇರಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 155 ರನ್ಗಳ ಸುಲಭ ಗುರಿ ಪಡೆದ ಹೈದರಾಬಾದ್ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಂತೆ ಜಯಭೇರಿ ಬಾರಿಸಿತು. ಸನ್ ರೈಸರ್ಸ್ ಪರ ಇಶಾನ್ ಕಿಶನ್ 44, ಕಮಿಂಡು ಮೆಂಡಿಸ್ ಅಜೇಯ 32 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರು ಔಟಾಗದೆ 19 ರನ್ ಗಳಿಸಿದರು. ಇನ್ನು ಚೆನ್ನೈ ಬೌಲರ್ಗಳು 15 ರನ್ಗಳನ್ನು ಇತರೆ ರೂಪದಲ್ಲಿ ನೀಡಿದ್ದು ಹೈದರಾಬಾದ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಆ 15 ಇತರೆ ರನ್ಗಳಲ್ಲಿ 11 ವೈಡ್ ಗಳಿದ್ದವು. ಚೆನ್ನೈ ಪರ ನೂರ್ ಅಹ್ಮದ್ ಅವರು 42 ರನ್ ಗೆ 2 ವಿಕೆಟ್ ಗಳಿಸಿದರು.
* ಸೂಪರ್ ಕಿಂಗ್ಸ್ನ ಫ್ಲಾಪ್ ಶೋ
ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮೊಹಮ್ಮದ್ ಶಮಿ ಎಸೆದ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಶೇಖ್ ರಶೀದ್(0) ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಸ್ಯಾಮ್ ಕುರ್ರನ್(9) ಅವರು ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಹಂತದಲ್ಲಿ ಆಯುಷ್ ಮಾತ್ರೆ(30) ಮತ್ತು ರವೀಂದ್ರ ಜಡೇಜಾ(21) ಅವರು ಸ್ವಲ್ಪ ತಂಡದ ಚೇತರಿಕೆಗೆ ಸಹಕರಿಸಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಡಿವಾಲ್ಡ್ ಡೇವಿಸ್ (42) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ಗಳೂ ಉತ್ತಮ ಪ್ರದರ್ಶನ ನೀಡಲಿಲ್ಲ. ಶಿವಂ ದುಬೆ(12), ನಾಯಕ ಧೋನಿ(6) ತಂಡದ ಸ್ಕೋರ್ ಏರಿಸುವಲ್ಲಿ ಸಂಪೂರ್ಣ ವಿಫಲರಾದರು. ದೀಪಕ್ ಹೂಡಾ 22 ರನ್ ಹೊಡೆದರೂ ಅದಕ್ಕಾಗಿ ತೆಗೆದುಕೊಂಡ ಎಸೆತ 22. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಸಾಧಾರಣ ಮೊತ್ತಕ್ಕೆ ಕುಸಿಯಿತು. ಸನ್ ರೈಸರ್ಸ್ ಪರ ಹರ್ಷಲ್ ಪಟೇಲ್ 4 ಮತ್ತು ಪ್ಯಾಟ್ ಕಮಿನ್ಸ್ ಮತ್ತು ಉನದ್ಕತ್ ತಲಾ 2 ವಿಕೆಟ್ ಪಡೆದರು. ಹರ್ಷಲ್ ಪಟೇಲ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.








