ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಡೆಲ್ಲಿ ವಿರುದ್ಧ 10 ವಿಕೆಟ್ ಜಯ ಸಾಧಿಸಿದ ಗುಜರಾತ್, ರಾಹುಲ್,ಸುದರ್ಶನ್,ಗಿಲ್ ಆರ್ಭಟ
* ರಾಜಸ್ಥಾನ್ ವಿರುದ್ಧ ಪಂಜಾಬ್ಗೆ 10 ರನ್ ಗೆಲುವು
NAMMMUR EXPRESS SPORTS NEWS
ಗುಜರಾತ್: ಐಪಿಎಲ್ನ 60ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಗೆಲುವು ಸಾಧಿಸುತ್ತಿದ್ದಂತೆ 3 ತಂಡಗಳು ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿವೆ. ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಈ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಪಡೆ 10 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ.
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದಿದ್ದ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ನೀಡದ್ದ 199 ರನ್ಗಳ ಗರಿಯನ್ನು ಬೆನ್ನಟ್ಟಿದ ಗುಜರಾತ್ ಪರ ಆರಂಭಿಕ ಬ್ಯಾಟರ್, ಸಾಯಿ ಸುದರ್ಶನ್ ಮತ್ತು ನಾಯಕ ಶುಭ್ಮನ್ ಗಿಲ್ 201 ರನ್ಗಳ ಜೊತೆಯಾಟವಾಡಿ ಯಾವುದೇ ವಿಕೆಟ್ ನಷ್ಟವಿಲ್ಲದೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.ಸಾಯಿ ಸುದರ್ಶನ್ 61 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ ಅಜೇಯವಾಗಿ 108 ರನ್ ಬಾರಿಸಿದರೇ, ಶುಭ್ಮನ್ ಗಿಲ್ 53 ಎಸೆತಗಳಲ್ಲಿ ಅಜೇವಾಗಿ 3 ಬೌಂಡರಿ ಮತ್ತು 7 ಸಿಕ್ಸರ್ ಸಹಾಯದಿಂದ 93 ರನ್ ಬಾರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಕೆಎಲ್ ರಾಹುಲ್ ಕೂಡ ದಾಖಲೆಯ ಶತಕ ಬಾರಿಸಿದರು. 65 ಎಸೆತಗಳನ್ನು ಎದುರಿಸಿದ ರಾಹುಲ್ 14 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯವಾಗಿ 112 ರನ್ ಬಾರಿಸಿದರು. ಈ ಮೂಲಕ ಆಡಿದ ಮೂರು ತಂಡಗಳ ಪರ ಶತಕ ಸಿಡಿಸಿದ ಮೊದಲ ಆಟಗಾರ ಹಾಗೂ ಅತಿ ವೇಗವಾಗಿ 8000 ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದರು. ಉಳಿದಂತೆ ಅಭಿಷೇಕ್ ಪೋರೆಲ್ (30), ಅಕ್ಷರ್ ಪಟೇಲ್ (25), ಸ್ಟಬ್ಸ್ (21) ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ತಂಡ 3 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು.
* ರಾಜಸ್ಥಾನ್ ವಿರುದ್ಧ ಪಂಜಾಬ್ಗೆ 10 ರನ್ ಗೆಲುವು
ಜೈಪುರ: ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥನ್ ರಾಯಲ್ಸ್ ಮತ್ತದೇ ತನ್ನ ಕಳಪೆ ಆಟವನ್ನು ಮುಂದುವರಿಸಿದೆ.ಈ ಮೂಲಕ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ್ದು,ಪಂಜಾಬ್ ಈ ಪಂದ್ಯದಲ್ಲಿ 10 ರನ್ಗಳ ರೋಮಾಂಚಕ ಗೆಲುವು ದಾಖಲಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಪ್ರಿಯಾಂಶ್ ಆರ್ಯ 9, ಪ್ರಭ್ಸಿಮ್ರಾನ್ ಸಿಂಗ್ 21 ಹಾಗೂ ನಂತರ ಬಂದ ಮೈಕಲ್ ಓವನ್ ಶೂನ್ಯ ಸಂಪಾದಿಸಿ ಔಟಾದರು,ನಂತರ ಜೊತೆಯಾದ ನೇಹಾಲ್ ವಧೇರಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ಆಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.
ಈ ಹಂತದಲ್ಲಿ 30 ರನ್ ಗಳಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ಔಟ್ ಆಗಿ ಹೊರನಡೆದರು. ನಂತರ ಶಶಾಂಕ್ ಸಿಂಗ್ ಜೊತೆಯಾದ ವಧೇರಾ ರಾಜಸ್ಥಾನ ಬೌಲರ್ಗಳ ಬೆವರಿಳಿಸಿದರು. ಶಶಾಂಕ್ ಸಿಂಗ್ 30 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 59 ರನ್ ಸಿಡಿಸಿದರು. ನೇಹಾಲ್ ವಧೇರಾ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 70 ರನ್ ಸಿಡಿಸಿ ಮಿಂಚಿದರು. ಅಂತಿಮವಾಗಿ ಒಮರ್ಜೈ ಸ್ಫೋಟಕ 21 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 219 ರನ್ ಗಳಿಸಿದರು.ರಾಜಸ್ಥಾನ ರಾಯಲ್ಸ್ ಪರ ತುಷಾರ್ ದೇಶಪಾಂಡೆ 2, ಮಫಾಕ, ರಿಯಾನ್ ಪರಾಗ್ ಹಾಗೂ ಆಕಾಶ್ ಮಧ್ವಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಬೃಹತ್ ಮೊತ್ತ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಪರ ಮೊದಲ ವಿಕೆಟ್ಗೆ ಕೇವಲ 4.5 ಓವರ್ಗಳಲ್ಲಿ 79 ರನ್ಗಳ ಜೊತೆಯಾಟ ಆಡುವ ಮೂಲಕ ಉತ್ತಮ ಆರಂಭ ಒದಗಿಸುವಲ್ಲಿ ಯಂಗ್ ಬ್ಯಾಟರ್ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಯಶಸ್ವಿಯಾದರು. ಜೈಸ್ವಾಲ್ 50 ರನ್ 25 ಎಸೆತ ಹಾಗೂ ವೈಭವ್ ಸೂರ್ವಂಶಿ 40 ರನ್ 15 ಎಸೆತ ಸ್ಫೋಟಕ ಆರಂಭ ಒದಗಿಸಿದರು.
ಆದರೆ, ನಂತರ ಬಂದ ಯಾವುದೇ ಆಟಗಾರರು ಕೂಡ ವೇಗವಾಗಿ ಬ್ಯಾಟ್ ಮಾಡಲು ಮುಂದಾಗಲಿಲ್ಲ. ನಾಯಕ ಸಂಜು ಸ್ಯಾಮ್ಸನ್ 20, ರಿಯಾನ್ ಪರಾಗ್ 13 ಹಾಗೂ ಹೆಟ್ಮೆಯರ್ 11 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಧ್ರುವ್ ಜುರೆಲ್ 31 ಎಸೆತದಲ್ಲಿ 53 ರನ್ ಸಿಡಿಸಿ ಅಬ್ಬರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.
ಪಂಜಾಬ್ ಕಿಂಗ್ಸ್ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಹರ್ಪ್ರಿತ್ ಬ್ರಾರ್ 3, ಮಾರ್ಕೋ ಜಾನ್ಸನ್ 2 ಹಾಗೂ ಅಜ್ಮತುಲ್ಲಾ ಒಮರ್ಜೈ 2 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 10 ರನ್ಗಳ ಅಂತರದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಮಾತ್ರವಲ್ಲ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿತು.
* 3 ತಂಡಗಳು ಪ್ಲೇ ಆಫ್ಗೆ, 4 ನೇ ಸ್ಥಾನಕ್ಕಾಗಿ 3 ತಂಡಗಳ ಭಾರೀ ಫೈಪೋಟಿ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲ್ಲುತ್ತಿದ್ದಂತೆ 18 ಅಂಕಗಳನ್ನು ಪಡೆದು ಪ್ಲೇಆಫ್ಗೆ ಪ್ರವೇಶ ಪಡೆದುಕೊಂಡಿತು. ಇದರೊಂದಿಗೆ ಎರಡು ತಂಡಗಳು ಪ್ಲೇಆಫ್ಗೆ ಬಡ್ತಿ ಪಡೆದವು. ಹೌದು, ಎರಡನೇ ಸ್ಥಾನದಲ್ಲಿರುವ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಎಂಟ್ರಿಯಾಗಿವೆ.
ಇದೀಗ 4ನೇ ಸ್ಥಾನಕ್ಕಾಗಿ 3 ತಂಡಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ. ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೇ 18 ಅಂಕದೊಂದಿಗೆ ಪ್ಲೇಆಫ್ ಖಚಿತ ಪಡಿಸಿಕೊಳ್ಳಲಿದೆ.
ಒಂದು ವೇಳೆ ಒಂದು ಪಂದ್ಯ ಗೆದ್ದು ಒಂದು ಸೋತರೇ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ತಂಡಗಳ ಪ್ಲೇಆಫ್ ಕನಸು ಜೀವಂತವಾಗಿರಲಿದೆ. ಡೆಲ್ಲಿ ಉಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಲೇ ಬೇಕಾಗದೆ. ಲಕ್ನೋ ಕೂಡ 3 ಪಂದ್ಯಗಳನ್ನು ಗೆದ್ದರೇ ಮಾತ್ರ ಮುಂದಿನ ದಾರಿ ಇರಲಿದೆ.








