ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್-2025
* ಹೈದ್ರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಗುಜರಾತ್
* ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಗುಜರಾತ್
* ಇಂದು ಬೆಂಗಳೂರಲ್ಲಿ ಆರ್ಸಿಬಿ ಚೆನ್ನೈ ತಂಡಗಳ ನಡುವೆ ಪಂದ್ಯ
NAMMMUR EXPRESS NEWS
ಹೈದ್ರಾಬಾದ್: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ನ್ನು 38 ರನ್ಗಳಿಂದ ಸೋಲಿಸಿದೆ. ಗುಜರಾತ್ ಪರ ನಾಯಕ ಶುಭಮನ್ ಗಿಲ್ 76 ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, ಹೈದರಾಬಾದ್ಗೆ 225 ರನ್ಗಳ ದೊಡ್ಡ ಗುರಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗೆ 186 ರನ್ಗಳನಷ್ಟೇ ಗಳಿಸಲು ಸಾಧ್ಯವಾಯಿತು . ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಆರ್ಸಿಬಿಯನ್ನು ಹಿಂದಿಕ್ಕಿ ಎರಡನೇ ಸ್ಥಾನ ತಲುಪಿದೆ. ಗುಜರಾತ್ 10 ಪಂದ್ಯಗಳಲ್ಲಿ ಏಳು ಗೆಲುವುಗಳೊಂದಿಗೆ 14 ಅಂಕಗಳನ್ನು ಹೊಂದಿದೆ.
ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಆರಂಭಿಕವಾಗಿ ಕಣಕ್ಕಿಳಿಸಿದರು. ಸುದರ್ಶನ್ 48 ರನ್ ಮತ್ತು ಗಿಲ್ 76 ರನ್ ಗಳಿಸಿದರು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಜೋಸ್ ಬಟ್ಲರ್ ಎಂದಿನಂತೆ ವೇಗವಾಗಿ 37 ಎಸೆತಗಳಲ್ಲಿ 67 ರನ್ ಗಳಿಸಿ ಮಿಂಚಿದರು.
ವಾಷಿಂಗ್ಟನ್ ಸುಂದರ್ 21 ಮತ್ತು ಶಾರುಖ್ ಖಾನ್ 6 ರನ್ ಗಳಿಸಿದರು. ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಸನ್ರೈಸರ್ಸ್ ಹೈದರಾಬಾದ್ ಪರ ಜಯದೇವ್ ಉನಾದ್ಕಟ್ ಗರಿಷ್ಠ ಮೂರು ವಿಕೆಟ್ ಕಬಳಿಸಿದರು. ಅವರಲ್ಲದೆ, ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಜೀಶನ್ ಅನ್ಸಾರಿ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ಗೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಟ್ರಾವಿಸ್ ಹೆಡ್ 4.3 ಓವರ್ನಲ್ಲಿ ತಂಡದ ಮೊತ್ತ 49 ರನ್ ಆಗಿದ್ದಾಗ 20 ರನ್ ಗಳಿಸಿದ್ದ ಹೆಡ್ ಔಟಾಗುವ ಮೂಲಕ ತಂಡಕ್ಕೆ ಆರಂಭಿಕ ಹೊಡೆತ ಬಿತ್ತು. ಮತ್ತೊಂದೆಡೆ, ಅಭಿಷೇಕ್ ಶರ್ಮಾ 4 ಬೌಂಡರಿ ಮತ್ತು 6 ಅಮೋಘ ಸಿಕ್ಸರ್ಗಳು ಸಹಿತ 74 ರನ್ ಬಾರಿಸಿದರು. ಆದರೆ, ಅವರಿಗೆ ತಕ್ಕ ಸಾಥ್ ಸಿಗಲಿಲ್ಲ.
ಹೆಡ್ ವಿಕೆಟ್ ಪತನದ ಬಳಿಕ ಬಂದ ಇಶಾನ್ ಕಿಶನ್ 13, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ 23 ಮತ್ತು ತದನಂತರ ಅನಿಕೇತ್ ವರ್ಮಾ 3 ರನ್ ಮಾತ್ರ ಗಳಿಸಿದರು. ಈ ನಡುವೆ, ಕಮಿಂದು ಮೆಂಡಿಸ್ ಖಾತೆ ತೆರೆಯದೇ ಪೆವಿಲಿಯನ್ಗೆ ಮರಳಿದರು. ಕೊನೆಯಲ್ಲಿ ನಿತೀಶ್ ಕುಮಾರ್ ರೆಡ್ಡಿ 21 ರನ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ 19 ರನ್ ಬಾರಿಸಿ ಹೋರಾಟ ತೋರಿದರು. ಆದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುಲಾಗಲಿಲ್ಲ.
ನಿಗದಿತ 20 ಓವರ್ಗಳಲ್ಲಿ ಹೈದ್ರಾಬಾದ್ ಆರು ವಿಕೆಟ್ಗಳಿಗೆ 186 ರನ್ ಮಾತ್ರ ಗಳಿಸಿ 38 ರನ್ಗಳ ಸೋಲುಂಡಿತು. ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರೆ, ಕೋಟ್ಜೆ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
* ಇಂದು ಆರ್ಸಿಬಿ ಮತ್ತು ಚೆನ್ನೈ ಪಂದ್ಯ
ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಪಂದ್ಯ ನಡೆಯಲಿದೆ. ಈಗಾಗಲೇ ಪ್ಲೇ ಆಫ್ನಿಂದ ಹೊರಬಿದ್ದಿರುವ ಚೆನ್ನೈ ಕಡೆಯ ಪಂದ್ಯಗಳಲ್ಲಿ ಗೆಲ್ಲಲು ಹಾಗೂ ತವರಿನಲ್ಲಿ ಪಂದ್ಯ ಗೆದ್ದು ಪ್ಲೇ ಆಫ್ನಲ್ಲಿ ಸ್ಥಾನ ಖಚಿತ ಪಡಿಸುವ ತವಕದಲ್ಲಿರುವ ಆರ್ಸಿಬಿ ತಂಡಗಳು ಗೆಲುವಿಗಾಗಿ ರೋಚಕ ಕಾದಾಟದ ನಡೆಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ಭೀತಿ ಎದುರಾಗಿದೆ.








