ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
* ಇಂಗ್ಲೆಂಡ್ ಟೆಸ್ಟ್ ಸರಣಿ ಉತ್ತಮ ಪ್ರದರ್ಶನದತ್ತ ಭಾರತ
* ಸರಣಿಯಲ್ಲಿ ಮೂವರು ಕನ್ನಡಿಗರು, ಮರುಕಳಿಸಿದ ಇತಿಹಾಸ
NAMMMUR EXPRESS SPORTS NEWS
ಲೀಡ್ಸ್: ಲೀಡ್ಸ್ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಹೆಡಿಂಗ್ಲೆಯಲ್ಲಿ ಆರಂಭಗೊಂಡಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ. ದಿನದಾಟದಂತ್ಯಕ್ಕೆ ಟೀಂ ಇಂಡಿಯಾ ಮೂರು ವಿಕೆಟ್ಗಳನ್ನು ಕಳೆದುಕೊಂಡು 359 ರನ್ ಕಲೆಹಾಕಿದೆ. ಶತಕ ಸಿಡಿಸಿರುವ ನಾಯಕ ಶುಭ್ಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್ ಅಜೇಯರಾಗಿ ಉಳಿದಿದ್ದು, ಎರಡನೇ ದಿನಕ್ಕೆ ತಮ್ಮ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಪರ 2 ಶತಕಗಳು ದಾಖಲಾಗಿದ್ದು, ನಾಯಕ ಗಿಲ್ ಅಜೇಯ ಶತಕ ಸಿಡಿಸಿದರೆ, ಆರಂಬಿಕ ಯಶಸ್ವಿ ಜೈಸ್ವಾಲ್ ಕೂಡ 101 ರನ್ಗಳ ಇನ್ನಿಂಗ್ಸ್ ಆಡಿದರು. ಕನ್ನಡಿಗ ಕೆಎಲ್ ರಾಹುಲ್ ಕೂಡ 42 ರನ್ಗಳ ಅಮೂಲ್ಯ ಕಾಣಿಕೆ ನೀಡಿದರು.
* ಯಂಗ್ ಇಂಡಿಯಾ ಆಟಕ್ಕೆ ಹೈರಾಣಾದ ಆಂಗ್ಲರು
ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭ್ಮನ್ ಗಿಲ್ ಮೂರನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ಆಡಿ ತಂಡದ ಮೊತ್ತವನ್ನು 200 ರನ್ಗಳ ಗಡಿ ದಾಟಿಸಿದರು. ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿಜೀವನದ 5ನೇ ಶತಕವನ್ನು ಪೂರ್ಣಗೊಳಿಸಿದರು. ಜೈಸ್ವಾಲ್ ತಮ್ಮ ಇನ್ನಿಂಗ್ಸ್ನಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ನಾಯಕನ ಜವಾಬ್ದಾರಿಯುವ ಆಟವನ್ನು ಮುಂದುವರೆಸಿದ ಗಿಲ್, ಉಪನಾಯಕ ರಿಷಭ್ ಪಂತ್ ಜೊತೆಗೂಡಿ ಆಂಗ್ಲ ಬೌಲರ್ಗಳನ್ನು ಹೈರಾಣಾಗಿಸಿದರು.
ಪಂತ್ – ಗಿಲ್ ಇವರಿಬ್ಬರು ಮೊದಲ ದಿನದಾಟ ಮುಗಿಯುವ ವೇಳೆಗೆ ಅಜೇಯರಾಗಿ ಉಳಿದಿದಲ್ಲದೆ ತಂಡವನ್ನು 359 ರನ್ಗಳಿಗೆ ಕೊಂಡೊಯ್ದಿದ್ದಾರೆ. ಈ ಸಮಯದಲ್ಲಿ ನಾಯಕ ಗಿಲ್, 140 ಎಸೆತಗಳಲ್ಲಿ 14 ಬೌಂಡರಿ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಶತಕವನ್ನು ಪೂರೈಸಿದರೆ, ಇತ್ತ ಉಪನಾಯಕ ರಿಷಭ್ ಪಂತ್ ಕೂಡ ಅಜೇಯ ಅರ್ಧಶತಕ ದಾಖಲಿಸಿದರು. ಈ ಮೂಲಕ ಪಂತ್ ಟೆಸ್ಟ್ನಲ್ಲಿ 3000 ರನ್ಗಳನ್ನು ಸಹ ಪೂರ್ಣಗೊಳಿಸಿದರು. ಈ ಜೋಡಿ 4ನೇ ವಿಕೆಟ್ಗೆ ಅಜೇಯ 138 ರನ್ಗಳ ಜೊತೆಯಾಟವನ್ನಾಡಿದ್ದು, ನಾಯಕ ಗಿಲ್ 127 ರನ್ ಹಾಗೂ ಉಪನಾಯಕ ರಿಷಬ್ ಪಂತ್ 65 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
* ಸರಣಿಯಲ್ಲಿ ಮೂವರು ಕನ್ನಡಿಗರು ಮರುಕಳಿಸಿದ 23 ವರ್ಷದ ಇತಿಹಾಸ
ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಕಣಕ್ಕಿಳಿದಿದ್ದಾರೆ. ಇದರೊಂದಿಗೆ 23 ವರ್ಷಗಳ ಹಳೆಯ ಇತಿಹಾಸವೊಂದು ಪುನರಾವರ್ತನೆಯಾದಂತಾಗಿದೆ.
ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಬರೋಬ್ಬರಿ 23 ವರ್ಷಗಳ ಬಳಿಕ ಮೂವರು ಕನ್ನಡಿಗರು ಜೊತೆಯಾಗಿ ಕಣಕ್ಕಿಳಿದಿದ್ದಾರೆ. ಲೀಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದು, ಈ ಮೂಲಕ 2 ದಶಕಗಳ ಬಳಿಕ ಕರುನಾಡ ತ್ರಿಮೂರ್ತಿಗಳು ಟೀಮ್ ಇಂಡಿಯಾ ಪರ ಜೊತೆಯಾಗಿ ಕಣಕ್ಕಿಳಿದಂತಾಗಿದೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಜೊತೆಯಾಗಿ ಕಣಕ್ಕಿಳಿದದ್ದು 2002ರಲ್ಲಿ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಜೊತೆಯಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕರ್ನಾಟಕದ ಮೂವರು ಆಟಗಾರರು ಭಾರತದ ಪರ ಒಟ್ಟಿಗೆ ಟೆಸ್ಟ್ ಪಂದ್ಯವಾಡಿರಲಿಲ್ಲ.
ಇದೀಗ ಬರೋಬ್ಬರಿ 23 ವರ್ಷಗಳ ಬಳಿಕ ಕರ್ನಾಟಕದ ಮೂವರು ಆಟಗಾರರು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಟೆಸ್ಟ್ ತಂಡದಲ್ಲಿ ಕರುನಾಡ ಕಲಿಗಳು ಮತ್ತೆ ಛಾಪು ಮೂಡಿಸಲು ಹೊರಟಿದ್ದಾರೆ.








