ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಸನ್ ರೈಸರ್ಸ್ಗೆ ಸೋಲಿನ ಶಾಕ್ ನೀಡಿದ ಕೆಕೆಆರ್
* ಅಂಕಪಟ್ಟಿಯಲ್ಲಿ ಕೆಕೆಆರ್ ಐದನೇ ಸ್ಥಾನಕ್ಕೆ
NAMMUR EXPRESS SPORTS NEWS
ಕೊಲ್ಕತ್ತಾ: ಈರ್ಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ 15ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ 80 ರನ್ಗಳಿಂದ ಸೋಲಿಸಿ ಬೃಹತ್ ಗೆಲುವು ದಾಖಲಿಸಿತು. ಇದರೊಂದಿಗೆ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಕೆಕೆಆರ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್, ಅಂಗ್ಕ್ರಿಶ್ ರಘುವಂಶಿ ಮತ್ತು ರಿಂಕು ಸಿಂಗ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 200 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡವನ್ನು ವೈಭವ್ ಅರೋರಾ, ವರುಣ್ ಚಕ್ರವರ್ತಿ ಮತ್ತು ಆಂಡ್ರೆ ರಸೆಲ್ ತಮ್ಮ ಬೌಲಿಂಗ್ನಿಂದ ಧೂಳಿಪಟ ಮಾಡಿದರು. ಪರಿಣಾಮ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಹೈದರಾಬಾದ್ ತಂಡವು ಕೇವಲ 16.4 ಓವರ್ಗಳಲ್ಲಿ 120 ರನ್ಗಳಿಗೆ ಆಲೌಟ್ ಆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇಬ್ಬರೂ ಆರಂಭಿಕ ಬ್ಯಾಟರ್ಗಳು 16 ರನ್ಗಳಿಗೆ ಔಟಾದರು. ಕ್ವಿಂಟನ್ ಡಿ ಕಾಕ್ (1) ಮತ್ತು ಸುನಿಲ್ ನರೈನ್ (7) ಉತ್ತಮ ಆರಂಭ ನೀಡಲಿಲ್ಲ. ಆದರೆ, ನಾಯಕ ಅಜಿಂಕ್ಯ ರಹಾನೆ (38) ಮತ್ತು ಅಂಗ್ಕ್ರಿಶ್ ರಘುವಂಶಿ (50) ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಇದಾದ ನಂತರ, ರಿಂಕು ಸಿಂಗ್ ಜೊತೆಗೂಡಿ ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೆಕೆಆರ್ ತಂಡದ ಸ್ಕೋರ್ ಅನ್ನು 200 ರನ್ಗಳಿಗೆ ಕೊಂಡೊಯ್ದರು. ಅಯ್ಯರ್ 29 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 60 ರನ್ ಗಳಿಸಿದರು. ರಿಂಕು ಸಿಂಗ್ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 32 ಬಾರಿಸಿದರು.
ಕೆಕೆಆರ್ ನೀಡಿದ 201 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಟಾಪ್ ಮತ್ತೆ ವೈಫಲ್ಯ ಕಂಡಿತು. ಟ್ರಾವಿಸ್ ಹೆಡ್ (4), ಅಭಿಷೇಕ್ ಶರ್ಮಾ (2) ಮತ್ತು ಇಶಾನ್ ಕಿಶನ್ (2) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬಳಿಕ ಬಂದ ಕಾಮಿಂಡು ಮೆಂಡಿಸ್ (27) ಮತ್ತು ಹೆನ್ರಿಕ್ ಕ್ಲಾಸೆನ್ (33) ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು.
ಸುನಿಲ್ ನರೈನ್ ಕ್ಲಾಸೆನ್ ಅವರನ್ನು ಔಟ್ ಮಾಡಿದರೆ, ಮೆಂಡಿಸ್ ಅವರ ವಿಕೆಟ್ ಅನ್ನು ವೈಭವ್ ಅರೋರಾ ಪಡೆಯುವ ಮೂಲಕ ಹೈದರಾಬಾದ್ ಗೆಲುವಿನ ಕನಸಿಗೆ ತಣ್ಣೀರು ಎರಚಿದರು. ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಕೆಕೆಆರ್ ಬೌಲರ್ಗಳು ಹೈದರಾಬಾದ್ ತಂಡವನ್ನು ಕೇವಲ 120 ರನ್ಗಳಿಗೆ ಆಲೌಟ್ ಮಾಡಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಆಂಡ್ರೆ ರಸೆಲ್ 2 ವಿಕೆಟ್ ಕಬಳಿಸಿದರು.
ಇಂದು ಲಖನೌ ಮತ್ತು ಮುಂಬೈ ನಡುವೆ ಪಂದ್ಯ
ಇಂದು ಲಖನೌದಲ್ಲಿ ನಡೆಯಲಿರುವ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ರನ್ ಗಳಿಸಲು ಪರದಾಡುತ್ತಿರುವ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ,ರಿಷಭ್ ಪಂತ್ ಮೇಲೆ ಎಲ್ಲರ ಕಣ್ಣಿದೆ.








