ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಮನೆಮಗನ ಆಟಕ್ಕೆ ಮನೆಯಂಗಳದಲ್ಲೇ ಮಣಿದ ಆರ್ಸಿಬಿ
* ರಾಹುಲ್ ಜವಾಬ್ದಾರಿಯುತ ಆಟ,93* ನಾಟೌಟ್
NAMMMUR EXPRESS SPORTS NEWS
ಬೆಂಗಳೂರು: ಐಪಿಎಲ್ -18 ನೇ ಆವೃತ್ತಿಯಲ್ಲಿ ಆರ್ಸಿಬಿ ತವರಲ್ಲಿ ಗೆಲ್ಲುವ ಕನಸಿಗೆ ಡೆಲ್ಲಿ ಕ್ಯಾಪಿಟಲ್ಸ್ ತಣ್ಣೀರೆರಚಿದೆ. ನಿನ್ನೆ ಆರ್ಸಿಬಿ ವಿರುದ್ಧ ತವರು ನೆಲ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಜಯ ದಾಖಲಿಸಿದೆ.
ಕನ್ನಡಿಗ ಕೆ.ಎಲ್ ರಾಹುಲ್ರ ಜವಾಬ್ದಾರಿಯುತ ಅಜೇಯ 93 ರನ್ ಆಟದ ನೆರವಿನಿಂದ ಡೆಲ್ಲಿ ತಂಡ ಆರ್ಸಿಬಿ ನೀಡಿದ 163 ರನ್ನ್ನು ಚೇಸ್ ಮಾಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಸ್ಪೋಟಕ ಆರಂಭ ಪಡೆದರೂ, ಡೆಲ್ಲಿಯ ಅದ್ಭುತ ಬೌಲಿಂಗ್, ಫೀಲ್ಡಿಂಗ್ ಎದುರು 20 ಓವರ್ಲ್ಲಿ 7 ವಿಕೆಟ್ಗೆ 163 ರನ್ ಗಳಿಸಲಷ್ಟೇ ಸಾಧ್ಯವಾಯಿತು, ಸುಲಭಗುರಿಯಂತೆ ಕಂಡರೂ, ಡೆಲ್ಲಿಯ ಅಗ್ರ ಕ್ರಮಾಂಕದ ಬ್ಯಾಟರ್ಗಳು ದೊಡ್ಡ ಹೊಡೆತಗಳಿಗೆ ಕೈಹಾಕಿದಾಗಲೆಲ್ಲಾ, ಅವು ವಿಕೆಟ್ಗಳಾಗಿ ಪರಿವರ್ತನೆಗೊಂಡವು. 58 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ, ಕನ್ನಡಿಗ ರಾಹುಲ್ ಆಸರೆಯಾದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಿ ಬೆಳೆದಿರುವ ರಾಹುಲ್, ಮೈದಾನದ ಮೂಲೆ ಮೂಲೆಗೆ ಬಾಲ್ ಬಾರಿಸಿ ಕೇವಲ 53 ಬಾಲ್ಗಳಲ್ಲಿ 93 ರನ್ ಬಾರಿಸಿ ಆರ್ಸಿಬಿಗೆ ಬೆಂಡೆತ್ತಿದರು. ಬೆಂಗಳೂರು ತಂಡ ಸೋತಿದ್ದ ಅಭಿಮಾನಿಗಳಿಗೆ ನಿರಾಸೆ ತಂದರೂ, ಬೆಂಗಳೂರು ಹುಡುಗ ಮಿಂಚಿದ್ದು ಅಭಿಮಾನಿಗಳಿಗೆ ಖುಷಿ ನೀಡಿತು.
* 5 ಓವರ್ನಲ್ಲಿ 89 ರನ್, ಉಳಿದ 15 ಓವರ್ನಲ್ಲಿ 74 ರನ್!
ಆರ್ಸಿಬಿ 1ರಿಂದ 3, 19-20ನೇ ಓವರ್ ಸೇರಿ ಒಟ್ಟು 5 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 89 ರನ್ ಗಳಿಸಿದರೆ, ಇನ್ನುಳಿದ 15 ಓವರಲ್ಲಿ 7 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 71 ರನ್. ಮೊದಲ 3 ಓವರಲ್ಲಿ ಫಿಲ್ಸಾಲ್ಟ್ ಹಾಗೂ ಕೊನೆ 2 ಓವರಲ್ಲಿ ಟೀಮ್ ಡೇವಿಡ್ ಅಬ್ಬರದ ಆಟವಾಡಿದರು. ಆದರೆ ಇತರ ಬ್ಯಾಟರ್ಗಳು ಕೈಕೊಟ್ಟರು. ಇನ್ನಿಂಗ್ಸ್ನಲ್ಲಿ ಆರ್ಸಿಬಿ ಬ್ಯಾಟರ್ಗಳು ಬರೊಬ್ಬರಿ 9 ಓವರ್ಗಳಲ್ಲಿ ರನ್ ಗಳಿಸಲೇ ಇಲ್ಲ.( ಇನ್ನಿಂಗ್ಸ್ನಲ್ಲಿ 55 ಡಾಟ್ ಬಾಲ್ಗಳಿದ್ದವು)
* 1000 ಬೌಂಡರಿ ಕೊಹ್ಲಿ ದಾಖಲೆ!
ಐಪಿಎಲ್ನಲ್ಲಿ 1000 ಬೌಂಡರಿ (ಫೋರ್, ಸಿಕ್ಸರ್) ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 1 ಫೋರ್. 2 ಸಿಕ್ಸರ್ ಸಿಡಿಸಿದ ಕೊಹ್ಲಿ, ಐಪಿಎಲ್ನ ಬೌಂಡರಿ ಸಂಖ್ಯೆ ಯನ್ನು 1001ಕ್ಕೆ ಹೆಚ್ಚಿಸಿದರು. ಒಟ್ಟು 280 ಸಿಕ್ಸರ್, 721 ಬೌಂಡರಿ ಸಿಡಿಸಿದ್ದಾರೆ.








