ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
* ಪಿಂಕ್ ಸಿಟಿಯಲ್ಲಿ ಗ್ರೀನ್ ಜೆರ್ಸಿಯಲ್ಲಿ ಆರ್ಸಿಬಿ ಆರ್ಭಟಕ್ಕೆ ತತ್ತರಿಸಿದ ರಾಜಸ್ಥಾನ್
* ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಕ್ ಗೆಲುವಿನ ಹಾದಿಗೆ ಮರಳಿದ ಮುಂಬೈ
NAMMMUR EXPRESS SPORTS NEWS
* ಪಿಂಕ್ ಸಿಟಿಯಲ್ಲಿ ಗ್ರೀನ್ ಜೆರ್ಸಿಯಲ್ಲಿ ಆರ್ಸಿಬಿ ಆರ್ಭಟಕ್ಕೆ ತತ್ತರಿಸಿದ ರಾಜಸ್ಥಾನ್
ರಾಜಸ್ಥಾನ್: ಐಪಿಎಲ್ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗ್ರೀನ್ ಜೆರ್ಸಿ ತೊಟ್ಟು ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ರಾಜಸ್ಥಾನ ರಾಯಲ್ಸ್ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡ ಮೊದಲ ಓವರ್ನಿಂದಲೇ ರಾಜಸ್ಥಾನ ವಿರುದ್ಧ ಪ್ರತಿದಾಳಿ ನಡೆಸಿತು. ಒಂದು ಕಡೆ ಸಾಲ್ಟ್ ಇನ್ನೊಂದು ಕಡೆಯಿಂದ ಕೊಹ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಮೂಲಕ ರನ್ ಮಳೆ ಹರಿಸಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ನಿಂದ ತಂಡ 9 ವಿಕೆಟ್ಗಳ ಜಯ ಸಾಧಿಸಿತು.
ಐಪಿಎಲ್ನ 28ನೇ ಪಂದ್ಯದಲ್ಲಿ
ಸಾಲ್ಟ್ ತಮ್ಮ ಅದ್ಭುತ ಬ್ಯಾಟಿಂಗ್ನಿಂದ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 65ರನ್ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಸಾಲ್ಟ್ ನಿರ್ಗಮನದ ಬಳಿಕ ಪಡಿಕ್ಕಲ್ನೊಂದಿಗೆ ತಮ್ಮ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ ರಾಜಸ್ಥಾನ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಕೊಹ್ಲಿ 45 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯವಾಗಿ 62 ರನ್ ಬಾರಿಸಿದರು. ಕೊಹ್ಲಿ ಜೊತೆ ಸೇರಿ ಪಡಿಕ್ಕಲ್ 40 ರನ್ ಕಲೆಹಾಕಿದರು. ಈ ಇಬ್ಬರ ಬ್ಯಾಟಿಂಗ್ ಬಲದಿಂದಾಗಿ ಬೆಂಗಳೂರು ತಂಡ ಕೇವಲ 17.3 ಓವರ್ಗಳಲ್ಲಿ 174 ರನ್ಗಳ ಗುರಿಯನ್ನು ತಲುಪಿತು. ರಾಜಸ್ಥಾನದ ಬೌಲರ್ಗಳಲ್ಲಿ ಕಾರ್ತಿಕೇಯ ಒಂದು ವಿಕೆಟ್ ಪಡೆದರು. ಫಿಲಿಪ್ ಸಾಲ್ಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ (75) ಅರ್ಧಶತಕ ಸಿಡಿಸಿದರು. ಕೊನೆಯಲ್ಲಿ ಧ್ರುವ್ ಜುರೆಲ್ (35*) ಭರ್ಜರಿ ಬ್ಯಾಟ್ ಬೀಸಿದರು. ಉಳಿದಂತೆ ನಾಯಕ ಸಂಜು ಸ್ಯಾಮ್ಸನ್ (15) ಮತ್ತು ರಿಯಾನ್ ಪರಾಗ್ 30 ರನ್ ಗಳಿಸಿದರು. ಬೆಂಗಳೂರು ತಂಡದ ಬೌಲರ್ಗಳಲ್ಲಿ ಯಶ್ ದಯಾಲ್, ಹೇಜಲ್ವುಡ್, ಕೃನಾಲ್ ಮತ್ತು ಭುವಿ ತಲಾ ಒಂದು ವಿಕೆಟ್ ಪಡೆದರು.
100 ಅರ್ಧ ಶತಕ ಗಳಿಸಿದ ವಿರಾಟ್ – ಟಿ20 ಯಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲಿಗ
ಕಿಂಗ್,ರನ್ ಮೆಷಿನ್ ಎಂದೆಲ್ಲಾ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 100 ಬಾರಿ ಅರ್ಧಶತಕ ಬಾರಿಸಿದ ವಿಶ್ವದ 2ನೇ, ಏಷ್ಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾನುವಾರ ರಾಜಸ್ತಾನ ವಿರುದ್ಧ ಪಂದ್ಯ ದಲ್ಲಿ ಅವರು 62 ರನ್ ಸಿಡಿಸಿದರು. ಇದು ಟಿ20ಯಲ್ಲಿ ಅವರ 100ನೇ ಅರ್ಧಶತಕ. ಒಟ್ಟು 405 ಪಂದ್ಯಗಳನ್ನಾಡಿರುವ ಕೊಹ್ಲಿ, 388 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು 9 ಶತಕಗಳನ್ನೂ ಬಾರಿಸಿದ್ದು, ಒಟ್ಟಾರೆ 13134 ರನ್ ಕಲೆಹಾಕಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಕೊಹ್ಲಿಗಿಂತ ಹೆಚ್ಚು ಅರ್ಧಶತಕ ಬಾರಿಸಿದ್ದು ಆಸ್ಟ್ರೇಲಿಯಾ ಡೇವಿಡ್ ವಾರ್ನರ್, ಅವರು 108 ಬಾರಿ ಈ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 90, ವೆಸ್ ಇಂಡೀಸ್ನ ಕ್ರಿಸ್ ಗೇಲ್ 88, ಇಂಗ್ಲೆಂಡ್ ಜೋಸ್ ಬಟ್ಲರ್ 86 ಅರ್ಧಶತಕ ಗಳಿಸಿದ್ದಾರೆ.
* ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಕ್ ಗೆಲುವಿನ ಹಾದಿಗೆ ಮರಳಿದ ಮುಂಬೈ
ಡೆಲ್ಲಿ: ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಿದೆ. ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ ಮುಂಬೈ ತಂಡ ಡೆಲ್ಲಿ ಕ್ಯಾಪಿಟಲ್ಸ್ನ ತವರು ಮೈದಾನದಲ್ಲಿ ಮುಂಬೈ ಗೆಲುವಿನ ನಗೆ ಬೀರಿದೆ. ಡೆಲ್ಲಿ ಬ್ಯಾಟರ್ಸ್ ತಂಡಕ್ಕೆ ಗೆಲುವು ತಂದು ಕೊಡುವುದರಲ್ಲಿ ಎಡವಿದ್ದಾರೆ, ಪರಿಣಾಮ ಮುಂಬೈ ತಂಡವು ಒಂದು ಓವರ್ ಬಾಕಿ ಇರುವಾಗಲೇ ಡೆಲ್ಲಿ ತಂಡವನ್ನು ಆಲೌಟ್ ಮಾಡಿ 12 ರನ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಮುಂಬೈ ಇಂಡಿಯನ್ಸ್ ನೀಡಿದ 206 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಗೆಲುವಿನ ಹೊಸ್ತಿಲಲ್ಲಿತ್ತು. ಡೆಲ್ಲಿ ಪರ ಅಬ್ಬರಿಸಿದ ಕನ್ನಡಿಗ ಕರುಣ್ ನಾಯರ್ 89 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಆದರೆ ದುರದೃಷ್ಟವಶಾತ್ ನಾಯರ್ ವಿಕೆಟ್ ಕಳೆದುಕೊಂಡಿತು ಬಳಿಕ ಬಂದ ಕೆಎಲ್ ರಾಹುಲ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಅಗ್ರ ಕ್ರಮಾಂಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ರಯಾನ್ ರಿಕಲ್ಟನ್ 41, ಸೂರ್ಯಕುಮಾರ್ ಯಾದವ್ 40, ತಿಲಕ್ ವರ್ಮಾ 59 ರನ್ ಗಳಿಸಿದರೆ, ನಮನ್ ಧೀರ್ ಕೂಡ 38 ರನ್ ಕಲೆ ಹಾಕದರು. ಈ ಅದ್ಭುತ ಇನ್ನಿಂಗ್ಸ್ಗಳ ಆಧಾರದ ಮೇಲೆ ಮುಂಬೈ ತಂಡವು 205 ರನ್ಗಳನ್ನು ಗಳಿಸಿತು.
ಮುಂಬೈ ತಂಡದಿಂದ 206 ರನ್ಗಳ ಗೆಲುವಿನ ಗುರಿ ಪಡೆದ ಡೆಲ್ಲಿ ತಂಡವು ಉತ್ತಮ ಆರಂಭವನ್ನು ಪಡೆಯಿತು. ಕರುಣ್ ನಾಯರ್ ಕೇವಲ 40 ಎಸೆತಗಳಲ್ಲಿ 89 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆ.ಎಲ್ ರಾಹುಲ್ ಅವರ ಮೇಲೆ ಭಾರೀ ನಿರೀಕ್ಷೆಯಿತ್ತು, ಮೊನ್ನೆ ಬೆಂಗಳೂರು ತಂಡದ ವಿರುದ್ಧ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಡೆಲ್ಲಿ ತಂಡಕ್ಕೆ ಆಸರೆಯಾದ ರಾಹುಲ್ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಮುಂಬೈ ವಿರುದ್ಧವೂ ಗೆಲುವಿನ ಉಡುಗೊರೆ ನೀಡುವ ರಾಹುಲ್ ಯೋಜನೆ ವಿಫಲವಾಯಿತು.
ರಾಹುಲ್ 13 ಎಸೆತಗಳಲ್ಲಿ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ರಾಹುಲ್ ವಿಕೆಟ್ ಕಳೆದುಕೊಳ್ಳುತ್ತಿದಂತೆ ಡೆಲ್ಲಿ ಚೇಸಿಂಗ್ ಹಳಿ ತಪ್ಪಿತು. 27 ಎಸೆತಗಳಲ್ಲಿ ಕೇವಲ 46 ರನ್ ಗಳಿಸುವ ಅಗತ್ಯವಿತ್ತು. ಇಂತಹ ಸಂದರ್ಭದಲ್ಲಿ ಡೆಲ್ಲಿ ಕೇವಲ 33 ರನ್ಗಳನ್ನು ಮಾತ್ರ ಗಳಿಸಿ,18 ಎಸೆತಗಳ ಅಂತರದಲ್ಲಿ ಉಳಿದ ಐದು ವಿಕೆಟ್ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.








