ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
ಐಪಿಎಲ್ 2025
* ಚೆನ್ನೈ ಮೇಲೆ ರಾಯಲ್ ಆಗಿ ಸವಾರಿ ಮಾಡಿದ ಆರ್ಸಿಬಿ
* 17 ವರ್ಷದ ಬಳಿಕ ಚೆನ್ನೈನಲ್ಲಿ ಸಿಎಸ್ಕೆ ವಿರುದ್ಧ ಜಯ
* ಕೊಹ್ಲಿಯಿಂದ ಮತ್ತೊಂದು ದಾಖಲೆ
NAMMUR EXPRESS SPORTS NEWS
ಚೆನ್ನೈ: ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಐಪಿಎಲ್ ಸೀಸನ್ 18 ರ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಗೆಲುವಿನ ನಗೆ ಬೀರಿದೆ. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ 50 ರನ್ ಗೆಲುವು ಸಾಧಿಸಿದೆ. ಇದರೊಂದಿಗೆ ಈ ಬಾರಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮಾತ್ರವಲ್ಲದೇ, ತನ್ನ ನೆಟ್ ರನ್ರೇಟ್ ಅನ್ನೂ ಕಾಪಾಡಿಕೊಂಡಿದೆ.
17 ವರ್ಷಗಳ ಬಳಿಕೆ ಚೆನ್ನೈನಲ್ಲಿ ಸಿಎಸ್ಕೆ ವಿರುದ್ಧ ಗೆದ್ದ ಆರ್ಸಿಬಿ !!
ಆರ್ಸಿಬಿ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್ಕೆ ವಿರುದ್ದ ಇದಕ್ಕೂ ಮುನ್ನ ಗೆದ್ದಿದ್ದು 2008ರಲ್ಲಿ. ಆ ಬಳಿಕ ಕೇವಲ ಸೋಲುಗಳನ್ನೇ ಕಂಡು ನಿರಾಸೆ ಅನುಭವಿಸಿದ್ದ ತಂಡವು ಈ ಬಾರಿ ಸಂಘಟಿತ ಪ್ರದರ್ಶನ ತೋರಿ ಜಯದ ನಗೆ ಬೀರಿದೆ.
ಚೆಪಾಕ್ ಪಿಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಬೇಕಾದ ಅನಿವಾರ್ಯತೆ ಸಿಲುಕಿದರೂ, ಅದನ್ನು ಚಾಲೆಂಜ್ ಆಗಿ ಸ್ವೀಕರಿಸಿದ ಆರ್ಸಿಬಿ, ಪಾಟೀದಾರ್, ಸಾಲ್ಟ್, ಡೇವಿಡ್, ಪಡಿಕ್ಕಲ್ ಹಾಗೂ ಜಿತೇಶ್ರ ಸ್ಪೋಟಕ ಆಟದ ನೆರವಿನಿಂದ 20 ಓವರಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
175 ರನ್ಗಿಂತ ಹೆಚ್ಚಿನ ಮೊತ್ತ ಈ ಪಿಚ್ನಲ್ಲಿ ಸುರಕ್ಷಿತ ಎಂದು ಪಿಚ್ ರಿಪೋರ್ಟ್ ವೇಳೆ ಹೇಳಲಾಗಿತ್ತು.
ಪವರ್-ಪ್ಲೇನಲ್ಲೇ ಜೋಶ್ ಹೇಜಲ್ವುಡ್ ಹಾಗೂ ಭುವನೇಶ್ವರ್ ಕುಮಾರ್, ಚೆನ್ನೈ ತಂಡದ ಬೆವರಿಳಿಸಿದರು. ಅಲ್ಲಿಂದಾಚೆಗೆ ಸಿಎಸ್ಕೆಗೆ ಚೇತರಿಸಿಕೊಳ್ಳಲು ಕಷ್ಟವಾಯಿತು.
ಯಶ್ ದಯಾಳ್ ಒಂದೇ ಓವರಲ್ಲಿ ಆತಿಥೇಯ ತಂಡಕ್ಕೆಡಬಲ್ ಆಘಾತ ನೀಡಿದರು. ತಂಡ ಸಂಕಷ್ಟದಲ್ಲಿದರೂ ಎಂ.ಎಸ್.ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕ್ರೀಸ್ಗೆ ಬಂದು ಅಚ್ಚರಿ ಮೂಡಿಸಿದರು. 16 ಎಸೆತದಲ್ಲಿ 30 ರನ್ ಸಿಡಿಸಿದ ಧೋನಿ ಗೆಲುವಿನ ಅಂತರ ಕಡಿಮೆ ಮಾಡುವಲ್ಲಿ ನೆರವಾದರು.
ಇದಕ್ಕೂಮುನ್ನ ಬ್ಯಾಟ್ ಮಾಡಿದ ಆರ್ಸಿಬಿಗೆ ಫಿಲ್ ಸಾಲ್ಟ್ ಉತ್ತಮ ಆರಂಭ ಒದಗಿಸಿದರು.16 ಎಸೆತದಲ್ಲಿ 32 ರನ್ ಬಾರಿಸಿ ಧೋನಿಯ ಮಾಂತ್ರಿಕ ಸ್ಟಂಪ್ಗೆ ಬಲಿಯಾದರು. ಕೊಹ್ಲಿ 31 ರನ್ 30 ಎಸೆತ, ಪಡಿಕ್ಕಲ್ 14 ಎಸೆತದಲ್ಲಿ 27, ರಜತ್ 32 ಎಸೆತದಲ್ಲಿ 51, ಜಿತೇಶ್ 6 ಎಸೆತದಲ್ಲಿ 12, ಡೇವಿಡ್ 8 ಎಸೆತದಲ್ಲಿ 22* ಸಿಡಿಸಿ ಆರ್ಸಿಬಿ ದೊಡ್ಡ ಮೊತ್ತ ದಾಖಲಿಸಲು ನೆರವಾದರು.
ಕೊಹ್ಲಿಯಿಂದ ಮತ್ತೊಂದು ದಾಖಲೆ !!
ರನ್ ಮಷಿನ್ ವಿರಾಟ್ ಕೊಹ್ಲಿ ಐಪಿಎಲ್ 2025ರಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗರಿಷ್ಠ ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ವಿರಾಟ್ ಐಪಿಎಲ್ನಲ್ಲಿ ಒಟ್ಟು 4 ತಂಡಗಳ ವಿರುದ್ಧ ತಲಾ 1000ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಮಾಡಿದ್ದಾರೆ, ಚೆನ್ನೈ ವಿರುದ್ಧ 1084 ರನ್ ಬಾರಿಸಿರುವ ಕೊಹ್ಲಿ, ಡೆಲ್ಲಿ ವಿರುದ್ಧ 1057, ಪಂಜಾಬ್ ವಿರುದ್ಧ 1030 ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 1021 ರನ್ ಬಾರಿಸಿದ್ದಾರೆ.
ಇಂದು ಮುಂಬೈ ಹಾಗೂ ಗುಜರಾತ್ ನಡುವೆ ಪಂದ್ಯ
ಇಂದು ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರಂಭಿಕ ಪಂದ್ಯದಲ್ಲಿ ಸೋತಿದ್ದು, ಜಯದ ಹಾದಿಗೆ ಮರಳಲು ಇಂದು ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಡಲಿವೆ.








