ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
* ರಾಹುಲ್- ಪಂತ್ ಶತಕ, ಇಂಗ್ಲೆಂಡ್ ಗೆಲುವಿಗೆ 371 ರನ್ಗಳ ಟಾರ್ಗೆಟ್
* ರಾಹುಲ್ ದಾಖಲೆ ಮುರಿದ ರಾಹುಲ್
NAMMMUR EXPRESS SPORTS NEWS
ಇಂಗ್ಲೆಂಡ್: ಲೀಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 364 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್ ಗೆಲುವಿಗೆ 371 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ತಂಡದ ಪರ ಎರಡನೇ ಇನ್ನಿಂಗ್ಸ್ನಲ್ಲಿ ಆರಂಭಿಕ ಕೆಎಲ್ ರಾಹುಲ್ ಮತ್ತು ಉಪನಾಯಕ ರಿಷಭ್ ಪಂತ್ ಶತಕ ಬಾರಿಸುವ ಮೂಲಕ ತಂಡವನ್ನು 370 ರನ್ಗಳಿಗೆ ಕೊಂಡೊಯ್ದರು. ಭಾರತದ ಪರ ಎರಡನೇ ಇನ್ನಿಂಗ್ಸ್ನಲ್ಲಿ, ಪಂತ್ ಮತ್ತು ರಾಹುಲ್ ನಾಲ್ಕನೇ ವಿಕೆಟ್ಗೆ 195 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ಪಂತ್ ಮತ್ತು ರಾಹುಲ್ ವಿಕೆಟ್ ಒಪ್ಪಿಸಿದ ನಂತರ ಭಾರತದ ಇನ್ನಿಂಗ್ಸ್ ನಿಧಾನವಾಗಿ ಸಾಗಿದ್ದಲ್ಲದೆ, ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
* ರಾಹುಲ್- ಪಂತ್ ಶತಕ, ಬೃಹತ್ ಮೊತ್ತದ ಗುರಿ ನೀಡಿದ ಟೀಂ ಇಂಡಿಯಾ
90 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟವನ್ನು ಮುಗಿಸಿದ್ದ ಟೀಂ ಇಂಡಿಯಾ, ಇಲ್ಲಿಂದ ನಾಲ್ಕನೇ ದಿನದಾಟವನ್ನು ಮುಂದುವರೆಸಿತು. ಆದರೆ ತಂಡವು ನಾಯಕ ಶುಭಮನ್ ಗಿಲ್ ಬೇಗನೆ ವಿಕೆಟ್ ಕಳೆದುಕೊಂಡರು. ಇದರ ನಂತರ, ಪಂತ್ ಮತ್ತು ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ಬೌಲರ್ಗಳು ವಿಕೆಟ್ಗಾಗಿ ಕಾಯುವಂತೆ ಮಾಡಿದರು. ಟೀ ಬ್ರೇಕ್ಗೂ ಮೊದಲು 118 ರನ್ ಬಾರಿಸಿದ್ದ ಪಂತ್ ವಿಕೆಟ್ ಒಪ್ಪಿಸಿದರು. ಇದರ ನಂತರ, ರಾಹುಲ್ ಇನ್ನಿಂಗ್ಸ್ ನಿಭಾಯಿಸಿದರಾದರೂ ಅವರು ಕೂಡ 137 ರನ್ ಬಾರಿಸಿ ಔಟಾದರು. ರಾಹುಲ್ ಪೆವಿಲಿಯನ್ಗೆ ಹಿಂತಿರುಗಿದ ತಕ್ಷಣ, ಭಾರತೀಯ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಲು ಪ್ರಾರಂಭಿಸಿದರು.
ದಿನದ ಮೊದಲ ಎರಡು ಸೆಷನ್ಗಳಲ್ಲಿ ರಾಹುಲ್ ಮತ್ತು ಪಂತ್ ಜೋಡಿ ಇಂಗ್ಲೆಂಡ್ ಬೌಲರ್ಗಳ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಆದರೆ ಟೀ ಬ್ರೇಕ್ನ ನಂತರ, ರಾಹುಲ್ ಔಟಾದ ತಕ್ಷಣ ಭಾರತದ ಇನ್ನಿಂಗ್ಸ್ ಕುಸಿಯಿತು. 84 ನೇ ಓವರ್ನಲ್ಲಿ ಬ್ರೈಡನ್ ಕಾರ್ಸೆ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದರು. ಆಗ ಟೀಂ ಇಂಡಿಯಾದ ಸ್ಕೋರ್ 333 ರನ್ಗಳಾಗಿತ್ತು. ಇದರ ನಂತರ, ತಂಡದ ಸ್ಕೋರ್ಗೆ ಕೇವಲ 2 ರನ್ಗಳನ್ನು ಸೇರಿಸುವುದರೊಳಗೆ ಕರುಣ್ ನಾಯರ್ ಕೂಡ ಔಟಾದರು. ನಂತರ ಶಾರ್ದೂಲ್ ಠಾಕೂರ್ ಕೂಡ 349 ರನ್ಗಳಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಅದೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಔಟಾದರು. ಅಂತಿಮವಾಗಿ ಟೀಂ ಇಂಡಿಯಾ 364 ರನ್ಗಳಿಗೆ ಆಲೌಟ್ ಆಯಿತು. ಅಂದರೆ, ಭಾರತ ಕೇವಲ 31 ರನ್ಗಳಿಗೆ ತನ್ನ ಕೊನೆಯ 6 ವಿಕೆಟ್ಗಳನ್ನು ಕಳೆದುಕೊಂಡಿತು.
* ರಾಹುಲ್ ದಾಖಲೆ ಮುರಿದ ರಾಹುಲ್
ತಾಳ್ಮೆಯುತ ಬ್ಯಾಟಿಂಗ್ನೊಂದಿಗೆ 202 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್ ವಿಶೇಷ ದಾಖಲೆ ಬರೆದರು. ಅದು ಕೂಡ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಅಂದರೆ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದು 2 ಶತಕ ಬಾರಿಸಿದ ಏಷ್ಯನ್ ಬ್ಯಾಟರ್ ಎಂಬ ದಾಖಲೆಯೊಂದು ರಾಹುಲ್ ದ್ರಾವಿಡ್ ಹೆಸರಿನಲ್ಲಿತ್ತು. ಈ ದಾಖಲೆಯನ್ನು ಇದೀಗ ಕೆ.ಎಲ್ ರಾಹುಲ್ ಮುರಿದಿದ್ದಾರೆ.ಕೆಎಲ್ ರಾಹುಲ್ ಆಂಗ್ಲರ ನಾಡಿನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಈವರೆಗೆ 3 ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಏಷ್ಯನ್ ಓಪನರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 247 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 18 ಫೋರ್ಗಳೊಂದಿಗೆ 137 ರನ್ ಬಾರಿಸಿದರು.








