ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದ್ರಾಬಾದ್ಗೆ ಮಳೆರಾಯ ಶಾಕ್
* ಪ್ಲೇ ಆಫ್ನಿಂದ ಹೊರಬಿದ್ದ 3 ನೇ ತಂಡ ಸನ್ ರೈಸರ್ಸ್ ಹೈದ್ರಾಬಾದ್
NAMMMUR EXPRESS SPORTS NEWS
ಹೈದ್ರಾಬಾದ್: ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದ್ದು, ಇದರೊಂದಿಗೆ ಹೈದ್ರಾಬಾದ್ ತಂಡವು ಅಧಿಕೃತವಾಗಿ ಐಪಿಎಲ್ 18ನೇ ಆವೃತ್ತಿಯಿಂದ ಹೊರಬಿದ್ದಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖಾತೆಗೆ ಒಂದು ಅಂಕ ಸೇರ್ಪಡೆಯಾಗಿದ್ದು, 11 ಪಂದ್ಯಗಳ ನಂತರ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಂದ್ಯ ರದ್ದಾಗಿದ್ದು ಡೆಲ್ಲಿ ತಂಡಕ್ಕೆ ತುಸು ನಿಟ್ಟುಸಿರು ಬಿಡುವಂತಾಗಿದೆ. ಸೋಲುವ ಹಂತದಲ್ಲಿದ್ದ ಪಂದ್ಯ ರದ್ದಾಗಿದ್ದು ತಂಡಕ್ಕೆ ತುಸು ಲಾಭವಾಗಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ 7 ವಿಕೆಟ್ ಕಳೆದುಕೊಂಡು ಕೇವಲ 133 ರನ್ ಮಾತ್ರ ಗಳಿಸಲು ಶಕ್ತವಾಯ್ತು. ಅಲ್ಪ ಮೊತ್ತವನ್ನು ಸುಲಭವಾಗಿ ಚೇಸಿಂಗ್ ಮಾಡುವ ಲೆಕ್ಕಾಚಾರ ಸನ್ರೈಸರ್ಸ್ ತಂಡದ್ದಾಗಿತ್ತು. ಆದರೆ, ಮೊದಲ ಇನ್ನಿಂಗ್ಸ್ ಮುಕ್ತಾಯವಾದ ನಂತರ ಹೈದರಾಬಾದ್ನಲ್ಲಿ ಜೋರಾಗಿ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ಕೆಲಕಾಲ ಮುಂದೂಡಬೇಕಾಯ್ತು. ಕೊನೆಗೆ ಮಳೆ ನಿಂತರೂ, ಜೋರಾಗಿ ಸುರಿದ ಮಳೆಯಿಂದಾಗಿ ಮೈದಾನದೆಲ್ಲಡೆ ನೀರು ನಿಂತಿತ್ತು. ಸಕಾಲಕ್ಕೆ ಪಂದ್ಯ ಮರುಆರಂಭ ಮಾಡಲು ಸಾಧ್ಯವಾಗದ ಕಾರಣದಿಂದ ಪಂದ್ಯವನ್ನು ರದ್ದುಪಡಿಸಲಾಯ್ತು. ಚೇಸಿಂಗ್ನಲ್ಲಿ ಒಂದೂ ಓವರ್ ಎಸೆಯಲು ಸಾಧ್ಯವಾಗದ ಕಾರಣ, ಫಲಿತಾಂಶವಿಲ್ಲದೆ ಪಂದ್ಯ ರದ್ದು ಮಾಡಲಾಯ್ತು. ಹೀಗಾಗಿ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ಹಂಚಲಾಯ್ತು. ಸನ್ ರೈಸರ್ಸ್ ತಂಡದ ಖಾತೆಯಲ್ಲಿ ಒಟ್ಟು 7 ಅಂಕಗಳು ಮಾತ್ರವೇ ಬಿತ್ತು. ಇದರೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಉಳಿದ ತಂಡವು ಟೂರ್ನಿಯಿಂದ ಹೊರಬಿದ್ದಿದೆ.
* ಪ್ಯಾಟ್ ಕಮಿನ್ಸ್ ಮಾರಕ ದಾಳಿ
ಪಂದ್ಯದಲ್ಲಿ ಡೆಲ್ಲಿ ಇನ್ನಿಂಗ್ಸ್ ಸಂಪೂರ್ಣವಾಗಿ ನಡೆಯಿತು. ಇನ್ನಿಂಗ್ಸ್ ಆರಂಭದಲ್ಲಿಯೇ ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ಔಟಾದರು. ಕರುಣ್ ನಾಯರ್ ಗೋಲ್ಡನ್ ಡಕ್ಗೆ ಬಲಿಯಾದರೆ, ಫಾಫ್ ಡುಪ್ಲೆಸಿಸ್ 3 ರನ್ ಮಾತ್ರ ಗಳಿಸಿದರು. ಅಭಿಷೇಕ್ ಪೊರೆಲ್ ಕೂಡಾ 8 ರನ್ ಗಳಿಸಿ ನಿರ್ಗಮಿಸಿದರು. ವಿಶೇಷವೆಂದರೆ, ಈ ಮೂರೂ ವಿಕೆಟ್ ಪಡೆದಿದ್ದು ಸನ್ ರೈಸರ್ಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್. ಇಷ್ಟೇ ಅಲ್ಲ, ಎಲ್ಲಾ ಮೂರು ಕ್ಯಾಚ್ ಪಡೆದಿದ್ದು ವಿಕೆಟ್ ಕೀಪರ್ ಇಶಾನ್ ಕಿಶನ್.ಡೆಲ್ಲಿ ನಾಯಕ ಅಕ್ಷರ್ ಪಟೇಲ್ 6 ರನ್ ಗಳಿಸಿದರೆ, ಕೆಎಲ್ ರಾಹುಲ್ ಆಟ 10 ರನ್ಗೆ ಅಂತ್ಯವಾಯ್ತು. ಕೊನೆಯಲ್ಲಿ ಅಬ್ಬರಿಸಿದ ಅಶುತೋಷ್ ಶರ್ಮಾ 41 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ಟ್ರಿಸ್ಟಾನ್ ಸ್ಟಬ್ಸ್ ಅಜೇಯ 41 ರನ್ ಪೇರಿಸಿದರು.
ಡೆಲ್ಲಿ ಇನ್ನಿಂಗ್ಸ್ ಮುಕ್ತಾಯವಾದ ಇನ್ನಿಂಗ್ಸ್ ಬ್ರೇಕ್ ವೇಳೆ ಮಳೆ ಸುರಿಯಲು ಆರಂಭವಾಯ್ತು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯ್ತು. ಉಭಯ ತಂಡಗಳು ತಲಾ ಒಂದು ಅಂಕಗಳನ್ನು ಪಡೆದಿವೆ. ಪಂದ್ಯವನ್ನು ಡೆಲ್ಲಿ ತಂಡ ಸೋಲುವ ಭೀತಿಯಲ್ಲಿತ್ತು, ಹೀಗಾಗಿ ಸಿಕ್ಕ ಒಂದು ಅಂಕ ಅಕ್ಷರ್ ಪಟೇಲ್ ಪಡೆಗೆ ಲಾಭವಾಗಲಿದೆ.








