ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
* ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡಕ್ಕೆ ಭರ್ಜರಿ ಸ್ವಾಗತ
* ರಾಜ್ಯಸರ್ಕಾರದಿಂದ ಗೌರವ,ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲುವಿನ ಸಂಭ್ರಮಾಚರಣೆ
NAMMMUR EXPRESS SPORTS NEWS
ಬೆಂಗಳೂರು: ಸತತ 18 ವರ್ಷಗಳ ಪ್ರಯತ್ನದ ನಂತರ ಐಪಿಎಲ್ ಕಪ್ ಜಯಿಸಿ ತವರಿಗೆ ಮರಳಿದ ಆರ್ಸಿಬಿ ಕ್ರಿಕೆಟ್ ತಂಡಕ್ಕೆ ಬೆಂಗಳೂರಿನಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆತಿದೆ. ಗುಜರಾತ್ನ ಅಹ್ಮದಾಬಾದ್ನಿಂದ ಬೆಂಗಳೂರಿನ ಹೆಚ್ಎಎಲ್ಗೆ ಬಂದಿಳಿದ ಆರ್ಸಿಬಿ ಆಟಗಾರರನ್ನು ಸರ್ಕಾರದ ಪರವಾಗಿ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಆರ್ಸಿಬಿ ಆಟಗಾರರನ್ನು ವಿಶೇಷ ಬಸ್ಸುಗಳಲ್ಲಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಟಗಾರರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ನಂತರ ವಿಧಾನಸೌಧದಿಂದ ಆಟಗಾರರನ್ನು ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 6 ಗಂಟೆಗೆ ಸಂಭ್ರಮಾಚರಣೆ ನಡೆಯಿತು. ಆಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಧಾನಸೌಧದ ವರರೆಗೆ ಬಸ್ಸಿನಲ್ಲಿ ಬರುವಾಗಲಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನ ಅಭಿಮಾನಿಗಳು ನಿಂತು ಸ್ವಾಗತಿಸಿ,ಶುಭಕೋರಿದರು ಈ ಸಮಯದಲ್ಲಿ ಟ್ರೋಫಿ ಹಿಡಿದು ವಾಹನದ ಮುಂದೆಯೇ ಕುಳಿತ ವಿರಾಟ್ ಕೊಹ್ಲಿ ಅಭಿಮಾನಿಗಳತ್ತ ಟ್ರೋಫಿ ತೋರಿಸಿ ಗೆಲುವಿನ ಕ್ರೆಡಿಟ್ ತಿಳಿಸಿದರು.
* ಅನ್ನದಾನ- ಸಿಹಿ ಹಂಚಿಕೆ,ಹೋಮ-ಹವನ ವಿಶೇಷ ಪೂಜೆ
ಆರ್ಸಿಬಿ ಗೆಲ್ಲುತ್ತಿದ್ದಂತೆ ರಾಜ್ಯದ ಹಲವೆಡೆ ಹೊಟೆಲ್ಗಳು, ಪಬ್ಗಳಲ್ಲಿ ಉಚಿತವಾಗಿ ಆಹಾರ ಮತ್ತು ಪಾನೀಯಗಳನ್ನು ನೀಡಲಾಗುತ್ತಿದೆ. ಇನ್ನೂ ಕೆಲವೆಡೆ ಹೋಳಿಗೆ, ಲಾಡು ಕೂಡ ಹಂಚಲಾಯಿತು. ಇದಲ್ಲದೆ ಬೆಂಗಳೂರಿನ ರಾಜಾಜಿನಗರ, ಇಂದಿರಾನಗರ, ಬಸವೇಶ್ವರನಗರ, ನಾಗರಬಾವಿ, ರಾಜರಾಜೇಶ್ವರಿನಗರ, ಸದಾಶಿವನಗರ, ಕೋರಮಂಗಲ, ಎಚ್.ಎಸ್ಆರ್ ಲೇಔಟ್, ಹೆಬ್ಬಾಳ, ಕೆಆರ್ ಪುರಂ, ಮಹದೇವಪುರ ಸೇರಿದಂತೆ ನಗರದ ವಿವಿಧೆಡೆ ಬಿರಿಯಾನಿ ಕೂಡ ಉಚಿತವಾಗಿ ವಿತರಿಸಲಾಯಿತು.
ಆರ್ಸಿಬಿ ಗೆಲ್ಲುತ್ತಿದ್ದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಹರಕೆ ಕೂಡ ತೀರಿಸಿದ್ದಾರೆ. ತೆಂಗಿನಕಾಯಿ ಒಡೆದು ವಿಶೇಷ ಹೋಮ-ಹವನಗಳನ್ನು ಕೂಡ ಮಾಡಲಾಗಿದೆ.








