ತಿಥಿ ಸಿನಿಮಾ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ನಿಧನ
* ಅಸ್ತಮಾ,ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ
* ತಿಥಿ ಸಿನಿಮಾ ನಟನೆಗೆ ಅಂತರರಾಷ್ಟ್ರೀಯ ಪ್ರಶಸ್ತಿ
NAMMMUR EXPRESS NEWS
ಮಂಡ್ಯ : ತಿಥಿ ಸಿನಿಮಾ ಮೂಲಕ ಗಡ್ಡಪ್ಪ ಎಂದೇ ಹೆಸರುವಾಸಿಯಾದ ಮಂಡ್ಯದ ಚನ್ನೇಗೌಡ (89) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ತಾಲೂಕಿನ ನೊದೆ ಕೊಪ್ಪಲು ಗ್ರಾಮದಲ್ಲಿ ನಿಧನ ಹೊಂದಿದ ಚನ್ನೇಗೌಡ ಅವರು ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು, ತಿಂಗಳ ಹಿಂದೆ ಬಿದ್ದು ಸೊಂಟ ಪೆಟ್ಟಾಗಿ, ಆಪರೇಷನ್ ಕೂಡ ಆಗಿತ್ತು.ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಂಜೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಪುತ್ರಿ ಶೋಭಾ ಮಾಹಿತಿ ನೀಡಿದ್ದಾರೆ.
ಗಡ್ಡಪ್ಪ ಎಂದು ಖ್ಯಾತಿ ಪಡೆದಿರುವ ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದ ಗಡ್ಡಪ್ಪ ಮೂಲ ಹೆಸರು ಚನ್ನೇಗೌಡ ಆದ್ರೂ ಗಡ್ಡಪ್ಪ ಅಂತಲೇ ಕರೆಸಿಕೊಳ್ಳುತ್ತಿದ್ದರು. ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
* ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಗಡ್ಡಪ್ಪ
2016ರಲ್ಲಿ ರಾಮ್ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ತಿಥಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಂಡ್ಯದ ಸಾಮಾನ್ಯ ವ್ಯಕ್ತಿ ಚನ್ನೇಗೌಡರು ಬಳಿಕ ಗಡ್ಡಪ್ಪ ಎಂದೇ ಪ್ರಸಿದ್ಧರಾದರು. ಮೇಕಪ್ ಇಲ್ಲದೇ, ಸಾಮಾನ್ಯವಾಗಿ ನಟಿಸಿದ್ದ ಅವರ ನಟನೆ ಜನರಿಗೆ ಬಹಳ ಇಷ್ಟವಾಗಿತ್ತು. ಈ ಸಿನಿಮಾಗೆ ಅಂತರರಾಷ್ಟ್ರೀಯ ಪ್ರಶಸ್ತಿ ಕೂಡಾ ಬಂದಿತ್ತು.







