ಕರಾವಳಿ ಟಾಪ್ ನ್ಯೂಸ್
* ಉಡುಪಿ: ಬೆಂಕಿ ಅವಘಡ; ವಿದ್ಯುತ್ ವ್ಯತ್ಯಯ
* ಕಡಬ: ಬೆಂಗಳೂರಿನಲ್ಲಿ ಯುವಕನ ಆತ್ಮಹತ್ಯೆ
* ಕಾರ್ಕಳ: ಸ್ಕೂಟರ್ ಗೆ ಗುದ್ದಿದ ಬಸ್; ಸವಾರನ ಸಾವು
* ಬೆಳ್ತಂಗಡಿ: ಹಲವು ಪ್ರಕರಣಗಳ ಅಪರಾಧಿ ಕೊನೆಗೂ ಸೆರೆ
* ಬಂಟ್ವಾಳ: ಗಾಂಜಾ ಮಾರಾಟ; ಯುವಕನ ಬಂಧನ
* ಬ್ರಹ್ಮಾವರ: ಬಾವಿಗೆ ಬಿದ್ದು ವ್ಯಕ್ತಿ ಸಾವು
* ಶಿರಸಿ: ನೋಟಿಸ್ ವಿರುದ್ಧ ಪ್ರತಿಭಟನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಉಡುಪಿ: ಬೆಂಕಿ ಅವಘಡ; ವಿದ್ಯುತ್ ವ್ಯತ್ಯಯ
ಉಡುಪಿ: ಹಿರಿಯಡ್ಕದ ವಿದ್ಯುತ್ ಸ್ಥಾವರದಲ್ಲಿ ತಾಂತ್ರಿಕ ದೋಷಗಳಿಂದ ಯಂತ್ರೋಪಕರಣಗಳಿಗೆ ಬೆಂಕಿ ತಗುಲಿದ ಘಟನೆ, ಕಳೆದೆರಡು ದಿನಗಳ ಹಿಂದೆ ನಡೆದಿದೆ. ಪರಿಣಾಮವಾಗಿ ಪೆರ್ಡೂರು, ಪೆರ್ಣಂಕಿಲ, ಗುಡ್ಡೆಯಂಗಡಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ, ರಾತ್ರಿಯ ಸಮಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಯಿತು. ಬೆಂಕಿ ಅವಘಡ ದೊಡ್ಡ ಪ್ರಮಾಣದಲ್ಲಿ ಸಂಭವಿಸಿರುವುದರಿಂದ, ಆಹುತಿಯಾಗಿರುವ ಉಪಕರಣಗಳನ್ನು ತೆರುವುಗೊಳಿಸಿ, ಬೇರೆ ಕಡೆಯಿಂದ ಹೊಸ ಉಪಕರಣಗಳನ್ನು ತಂದು ಮತ್ತೆ ಅಳವಡಿಸುವ ಕಾರ್ಯ ನಡೆಸಲಾಯಿತು ಎನ್ನುವ ಸಂಗತಿ ತಿಳಿದುಬಂದಿದೆ.
* ಕಡಬ: ಬೆಂಗಳೂರಿನಲ್ಲಿ ಯುವಕನ ಆತ್ಮಹತ್ಯೆ
ಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಜುಬೀನ್ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ವಿದೇಶಕ್ಕೆ ತೆರಳಲು ತಯಾರಿ ನಡೆಸಿದ್ದ. ಈ ಸಂದರ್ಭದಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ಏನೆಂಬುದರ ಕುರಿತು ಮಾಹಿತಿ ಲಭಿಸಿಲ್ಲ. ಪೊಲೀಸರ ತನಿಖೆಯ ನಂತರ ಇನ್ನಷ್ಟೇ ತಿಳಿಯಬೇಕಾಗಿದೆ.
* ಕಾರ್ಕಳ: ಸ್ಕೂಟರ್ ಗೆ ಗುದ್ದಿದ ಬಸ್; ಸವಾರನ ಸಾವು
ಕಾರ್ಕಳ: ಶಿರ್ವ ಕಡೆಯಿಂದ ಬೆಳ್ಮಣ್ ಕಡೆಗೆ ತೆರಳುತ್ತಿದ್ದ ಸ್ಕೂಟರ್ ಗೆ, ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ, ಬೆಳ್ಮಣ್ ಕಡೆಯಿಂದ ಶಿರ್ವ ಕಡೆಗೆ ತೆರಳುತ್ತಿದ್ದ ಬಸ್ ವೊಂದು ಢಿಕ್ಕಿ ಹೊಡೆದ ಘಟನೆ, ಕಳೆದೆರಡು ದಿನಗಳ ಹಿಂದೆ ಜಂತ್ರ ಎನ್ನುವ ಪ್ರದೇಶದಲ್ಲಿ ನಡೆದಿದೆ. ಪರಿಣಾಮವಾಗಿ ಸ್ಕೂಟರ್ ಚಲಾಯಿಸುತ್ತಿದ್ದ ಕಾರ್ಕಳದ ಕುಂಟಲ್ಪಾಡಿಯ ನಿವಾಸಿ ರಾಬರ್ಟ್ ಜೋಸೆಫ್ ಟೆಲ್ಲಿಸ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮರುದಿನ ನಸುಕಿನ ಜಾಗ ಸಾವನ್ನಪ್ಪಿದರು ಎನ್ನುವ ಮಾಹಿತಿ ಲಭಿಸಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೆಳ್ತಂಗಡಿ: ಹಲವು ಪ್ರಕರಣಗಳ ಆರೋಪಿ ಕೊನೆಗೂ ಸೆರೆ
ಬೆಳ್ತಂಗಡಿ: ಕುಖ್ಯಾತ ಆರೋಪಿಯೊಬ್ಬ, ಮನೆಗೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ, ಜನರ ಕೈಗೆ ಸಿಕ್ಕಿ ಪೊಲೀಸರ ಅತಿಥಿಯಾದ ಘಟನೆ, ಮಾಲಾಡಿ ಎಂಬ ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಮಾಲಾಡಿ ಗ್ರಾಮದಲ್ಲಿ ಪ್ರೇಮ ಎನ್ನುವವರಿಗೆ ಸೇರಿದ ಮನೆಯಿದ್ದು, ಪ್ರಸ್ತುತ ಅವರು ವಿದೇಶದಲ್ಲಿ ವಾಸವಾಗಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದಿರುವುದನ್ನು, ಸಿಸಿಟಿವಿ ಮೂಲಕ ಗಮನಿಸಿದ ಪ್ರೇಮ ಅವರ ಮಗಳು, ತಕ್ಷಣ ಪಕ್ಕದ ಮನೆಯವರಾದ ಪ್ರಕಾಶ್ ಶೆಟ್ಟಿ ಎನ್ನುವವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಪ್ರಕಾಶ್ ಅವರು ಪ್ರೇಮ ಅವರ ಮನೆಯ ಬಳಿಗೆ ಬಂದು ನೋಡಿದಾಗ, ವ್ಯಕ್ತಿಯೊಬ್ಬ ಮನೆಯ ಮೇಲ್ಛಾವಣಿಯ ರಾಡ್ ಹಿಡಿದು ನಿಂತಿರುವುದು ಕಂಡುಬಂದಿದೆ. ಪ್ರಕಾಶ್ ಅವರು ಮುಂದೆ ಹೋಗಿ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಆರೋಪಿಯು ಪ್ರಕಾಶ್ ಅವರಿಗೆ ರಾಡ್ ನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ನಂತರ ಪ್ರಕಾಶ್ ಅವರು ಅಕ್ಕಪಕ್ಕದ ಮನೆಯವರನ್ನು ಕೂಗಿ ಕರೆದು, ಅವರ ಸಹಾಯದಿಂದ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಕೇರಳ ಮೂಲದ ತಲಪಾಡಿ ನಿವಾಸಿ ಕಿರಣ್ ಎಂದು ಗುರುತಿಸಲಾಗಿದೆ. ಬಳಿಕ ಆರೋಪಿಯನ್ನು ಪುಂಜಾಲುಕಟ್ಟೆಯ ಪೊಲೀಸರ ವಶಕ್ಕೆ ನೀಡಲಾಯಿತು. ಪೊಲೀಸರು ಬಂಧಿತ ಆರೋಪಿಯ ವಿಚಾರಣೆಯನ್ನು ನಡೆಸಿದಾಗ, ಆತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ, ಮಂಗಳೂರು ವ್ಯಾಪ್ತಿಯಲ್ಲಿ ಮತ್ತು ಕೇರಳ ವ್ಯಾಪ್ತಿಯಲ್ಲಿ ಸುಮಾರು 13 ಪ್ರಕರಣಗಳು ದಾಖಲಾಗಿವೆ ಎನ್ನುವ ಸಂಗತಿ ತಿಳಿದುಬಂದಿದೆ. ಪ್ರೇಮ ಅವರ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕಳ್ಳನನ್ನು ಪತ್ತೆ ಹಚ್ಚಿ, ಬಂಧಿಸುವಲ್ಲಿ ಸಹಕಾರಿಯಾಗಿದೆ ಎಂದು ಪೊಲೀಸರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
* ಬಂಟ್ವಾಳ: ಗಾಂಜಾ ಮಾರಾಟ; ಯುವಕನ ಬಂಧನ
ಬಂಟ್ವಾಳ: ಕೊಡಿಯಾಲಬೈಲಿನ ಪಿವಿಎಸ್ ಜಂಕ್ಷನ್ ನ, ಕೆ.ಎಸ್.ರಾವ್ ರಸ್ತೆಯನ್ನು ಸಂಪರ್ಕಿಸುವ ಕಚ್ಚಾ ರಸ್ತೆಯ ಪಕ್ಕದಲ್ಲಿ, ಯುವಕನೊಬ್ಬ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಆರೋಪಿಯನ್ನು ಬಂಟ್ವಾಳದ ಬಿಳಿಯೂರು ಕರುವೇಲ್ ನ ಕ್ವಾಟ್ರಸ್ ಹೌಸ್ ನ ನಿವಾಸಿಯಾದ ಸಮೀರ್ ಎಂದು ಗುರುತಿಸಲಾಗಿದೆ. ಪೊಲೀಸರನ್ನು ಕಂಡ ತಕ್ಷಣ ಆರೋಪಿ ಪರಾರಿಯಾಗಲು ಪ್ರಯತ್ನಿಸಿದ್ದು, ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆತನ ಬಳಿ ಇದ್ದ 56.700 ರೂಪಾಯಿಯಷ್ಟು ಬೆಲೆಬಾಳುವ ಗಾಂಜಾ, ಐಫೋನ್ ಮತ್ತು ಡಿಜಿಟಲ್ ಆಗಿರುವ ತೂಕದ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ.
* ಬ್ರಹ್ಮಾವರ: ಬಾವಿಗೆ ಬಿದ್ದು ವ್ಯಕ್ತಿ ಸಾವು
ಬ್ರಹ್ಮಾವರ: ಪೇಟೆಗೆ ಸಾಮಾನು ತರಲೆಂದು ಹೋದ ಪುಟ್ಟ ಎಂಬ ಹೆಸರಿನ ವ್ಯಕ್ತಿಯು, ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಹೊಸೂರು ಗ್ರಾಮದ ಕರ್ಜೆ ಎನ್ನುವಲ್ಲಿ ನಡೆದಿದೆ. ಪುಟ್ಟ ಅವರು ಮನೆಗೆ ಬಾರದಿರುವುದನ್ನು ಕಂಡು, ಅವರ ಮನೆಯವರು ಹುಡುಕಾಟ ನಡೆಸಿದಾಗ, ಮನೆಗೆ ಬರುವ ಕಾಲುದಾರಿಯಲ್ಲಿರುವ ಗೇರುಬೀಜದ ಕಾರ್ಖಾನೆಯ ಬಳಿ ಇರುವ, ಆವರಣವಿಲ್ಲದ ಬಾವಿಯೊಳಗೆ ಬಿದ್ದು, ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಶಿರಸಿ: ನೋಟಿಸ್ ವಿರುದ್ಧ ಪ್ರತಿಭಟನೆ
ಶಿರಸಿ: ರಾಮಕೃಷ್ಣ ಹೆಗಡೆ ವೃತ್ತದಲ್ಲಿ, ಅರಣ್ಯವನ್ನು ಅತಿಕ್ರಮಿಸಿರುವವರನ್ನು ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸುವ ವಿಚಾರವಾಗಿ ನೀಡಲಾದ ನೋಟಿಸ್ ವಿರುದ್ಧ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರಾದ ರವೀಂದ್ರನಾಥ ನಾಯ್ಕ ಅವರ ನೇತೃತ್ವದಲ್ಲಿ, ಎರಡು ಸಾವಿರಕ್ಕೂ ಹೆಚ್ಚು ಜನರು ಮಂಗಳವಾರದಂದು ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ರವೀಂದ್ರನಾಥ ಅವರು “ಇತ್ತೀಚೆಗೆ ಕೆಲವು ದಿನಗಳಿಂದ ಕರ್ನಾಟಕ ಅರಣ್ಯ ಕಾಯ್ದೆಯ ಅಡಿಯಲ್ಲಿ ಅನಧಿಕೃತ ಅರಣ್ಯವಾಸಿಗಳು ಮತ್ತು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿರುವವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ತೀವ್ರ ರೀತಿಯಲ್ಲಿ ನಡೆಸಲಾಗುತ್ತಿದ್ದು, 3500 ಕ್ಕಿಂತ ಹೆಚ್ಚು ಒಕ್ಕಲೆಬ್ಬಿಸುವ ಕುರಿತು ನೋಟಿಸ್, ಎಸಿಎಫ್ ಮತ್ತು ಸಿಸಿಎಫ್ ಗಳು ನ್ಯಾಯಾಲಯದಿಂದ ಅರಣ್ಯವಾಸಿಗಳಿಗೆ ಜಾರಿಯಾಗುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಆದರೂ ಅರಣ್ಯಾಧಿಕಾರಿಗಳು ನೋಟಿಸ್ ಕೊಡಿಸಿದ್ದಾರೆ. ನ್ಯಾಯಾಲಯ ಕೂಡ ಈ ಕುರಿತು ಯಾವುದೇ ಮಾಹಿತಿ ಕೂಡ ನೀಡಿಲ್ಲ. ಹೀಗಿರುವಾಗ ಒಕ್ಕಲೆಬ್ಬಿಸಲು ನೋಟಿಸ್ ನೀಡಲು ಹೇಳಿದವರು ಯಾರು? ಬಡವರಿಗೆ ನ್ಯಾಯ ದೊರಕಬೇಕಿದೆ. ಅರಣ್ಯವಾಸಿಗಳು ಅರಣ್ಯ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಅದು ಪರಿಶೀಲನಾ ಹಂತದಲ್ಲಿರುವಾಗಲೇ ಅರಣ್ಯ ಇಲಾಖೆಯ ಒಕ್ಕಲೆಬ್ಬಿಸುವ ಪ್ರಾಧಿಕಾರದಿಂದ ಈಗಾಗಲೇ ಆದೇಶವಾಗುತ್ತಿರುವುದು ಮತ್ತು ಸರ್ಕಾರದ ನಿರ್ದೇಶನಗಳನ್ನು ಸಹ ಉಲ್ಲಂಘಿಸಿ, ಆದೇಶ ಜಾರಿಯಾಗುತ್ತಿರುವುದು ಅರಣ್ಯ ವಾಸಿಗಳಿಗೆ ಸಮಸ್ಯೆಯನ್ನುಂಟು ಮಾಡಿದೆ” ಎಂದು ತಿಳಿಸಿದರು.







