ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ
ಐಷಾರಾಮಿ ಕಾರು ವೇಗಕ್ಕೆ ಮಹಿಳೆ ಬಲಿ!
– ಮೇಗರವಳ್ಳಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ ಕಾರು
– ಸಾಗರ: ಕಾಗೋಡು ತಿಮ್ಮಪ್ಪ ಕುಸಿದು ಬಿದ್ದು ಅಸ್ವಸ್ಥ: ಚೇತರಿಕೆ
– ತೀರ್ಥಹಳ್ಳಿ: ಅನಾಥಾಶ್ರಮದ ಹೆಸರಿನಲ್ಲಿ ಕಳ್ಳತನ..!?
– ಭದ್ರಾವತಿ: ತಹಶೀಲ್ದಾರ್ ವಿರುದ್ಧ ಡೇಟ್ ನೋಟ್ ಬರೆದು ನದಿಗೆ ಹಾರಿದ ಸಿಬ್ಬಂದಿ!?
– ಶಿವಮೊಗ್ಗ: ಜ್ಯೋತಿಷಿ ಜತೆ ಲವ್: ಓರ್ವನ ಕೊಲೆ ಮಾಡಿದ ಜೋಡಿ ಹಕ್ಕಿ!?
ತೀರ್ಥಹಳ್ಳಿ: ಆಗುಂಬೆಯಿಂದ ಶಿವಮೊಗ್ಗ ರಸ್ತೆ ಇದೀಗ ಸಾವಿನ ರಸ್ತೆಯಾಗಿ ಪರಿಣಮಿಸುತ್ತಿದೆ. ಈಗಾಗಲೇ ಒಂದು ತಿಂಗಳಲ್ಲಿ 5ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಇದೀಗ ರಸ್ತೆ ಬದಿ ನಿಂತಿದ್ದ ಕಾರಿಗೆ ಬಿಎಂಡಬ್ಲ್ಯೂಕಾರು ಡಿಕ್ಕಿಯಾದ ಪರಿಣಾಮ ಕಾರಿನೊಳಗಿದ್ದ ಮಹಿಳೆ ಮೃತಪಟ್ಟ ಘಟನೆ ಮೇಗರವಳ್ಳಿಯಲ್ಲಿ ನಡೆದಿದೆ. ಮೇಗರವಳ್ಳಿಯ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಅರ್ಚಕರಾದ ಅಶೋಕ ಜೋಗಿ ಮತ್ತು ಅವರ ಪತ್ನಿ ಮಲ್ಲಿಕಾ ಅಶೋಕ್ ಜೋಗಿ ಮಂಗಳವಾರ ಬೆಳಿಗ್ಗೆ ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತಿ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ತೀವ್ರವಾಗಿ ತಲೆಗೆ ಗಾಯಗೊಂಡಿದ್ದ ಪತ್ನಿ ಮಲ್ಲಿಕಾ ಜೋಗಿ (42) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ: ಕಾಗೋಡು ತಿಮ್ಮಪ್ಪ ಕುಸಿದು ಬಿದ್ದು ಅಸ್ವಸ್ಥ: ಚೇತರಿಕೆ
ಸಾಗರ: ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಮತ್ತು ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಶ್ರೀಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದ ಸಂದರ್ಭದಲ್ಲಿ, ಹಠಾತ್ತಾನೆ ಕುಸಿದು ಬಿದ್ದು ಅಸ್ವಸ್ಥರಾದ ಘಟನೆ ನಡೆದಿದೆ. ತಕ್ಷಣ ಅವರನ್ನು ಆಟೋ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಇದೀಗ ಚೇತರಿಕೆಯಲ್ಲಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಅನಾಥಾಶ್ರಮದ ಹೆಸರಿನಲ್ಲಿ ಕಳ್ಳತನ..!
ತೀರ್ಥಹಳ್ಳಿ: ಅನಾಥಾಶ್ರಮ ನಡೆಸುತ್ತಿರುವುದಾಗಿ ನಂಬಿಸಿ, ಕೆಲವು ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆದಿರುವ ಕುರಿತು ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣಸವಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭದ್ರಾವತಿ: ತಹಶೀಲ್ದಾರ್ ವಿರುದ್ಧ ಡೇಟ್ ನೋಟ್ ಬರೆದು ನದಿಗೆ ಹಾರಿದ ಸಿಬ್ಬಂದಿ!?
ಭದ್ರಾವತಿ:ಭದ್ರಾವತಿ ತಾಲ್ಲೂಕು ಕಚೇರಿಯ ತಹಶೀಲ್ದಾರ್ ಪರಸಪ್ಪ ವಿರುದ್ಧ ಮಾನಸಿಕ ಕಿರುಕುಳ ಆರೋಪಿಸಿ, ಡೆತ್ ನೋಟ್ ಬರೆದಿಟ್ಟು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ನದಿಗೆ ಹಾರಿದ್ದ ಘಟನೆ ಭದ್ರಾವತಿ ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್, ಸ್ಥಳೀಯ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಆ ವ್ಯಕ್ತಿಯ ಜೀವ ಉಳಿಯಿತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ನಿವಾಸಿ ಆರ್.ಜಿ. ಅಭಿಷೇಕ್ (ಪುತ್ರ: ಆರ್.ಎಂ. ಗಂಗಾಧರಪ್ಪ) ಭದ್ರಾವತಿ ತಹಶೀಲ್ದಾರ್ ಅವರಿಂದ ನಿರಂತರ ಮಾನಸಿಕ ಒತ್ತಡ ಹಾಗೂ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಹೇಳಿಕೊಂಡು, ಡೆತ್ ನೋಟ್ ಬರೆದು ವಾಟ್ಸಪ್ನಲ್ಲಿ ಸಂದೇಶ ಕಳುಹಿಸಿದ್ದಾಗಿ ತಿಳಿದುಬಂದಿದೆ. ಚನ್ನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಶಿವಮೊಗ್ಗ: ಜ್ಯೋತಿಷಿ ಜತೆ ಲವ್: ಓರ್ವನ ಕೊಲೆ ಮಾಡಿದ ಜೋಡಿ ಹಕ್ಕಿ!?
ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಚಾಕು ಇರಿತ ಹಾಗೂ ಕೊಲೆ ಪ್ರಕರಣದ ಹಿನ್ನೆಲೆ ಇದೀಗ ಬಹಿರಂಗವಾಗಿದ್ದು, ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ವಿವಾಹಿತ ಮಹಿಳೆ ಸುಚಿತ್ರಾ ನಡುವಿನ ಅನೈತಿಕ ಸಂಬಂಧದ ಆರೋಪ ಈ ಹಲ್ಲೆಗೆ ಕಾರಣ ಎನ್ನಲಾಗಿದೆ.
ಸಿದ್ದಾಪುರದ ಮಹೇಶ್ ನಾಯ್ ಅವರ ಪತ್ನಿ ಸುಚಿತ್ರಾ ಸುಮಾರು ಆರು ತಿಂಗಳ ಹಿಂದೆ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆ ಬಿಟ್ಟು ತೆರಳಿದ್ದು, ನಂತರ ಶಿವಮೊಗ್ಗದಲ್ಲಿ ಕಮಲಾಕರ ಭಟ್ ಅವರೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯವನ್ನು ಸುಚಿತ್ರಾಳ ಮಗಳು ರಹಸ್ಯವಾಗಿ ತಂದೆಗೆ ಮೊಬೈಲ್ ಸಂದೇಶದ ಮೂಲಕ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.
ಮಗಳು ಕಳುಹಿಸಿದ್ದ ಸಂದೇಶದಲ್ಲಿ ತಾಯಿಯಿಂದ ಹಿಂಸೆ ನಡೆಯುತ್ತಿದೆ ಹಾಗೂ ಅಲ್ಲಿನ ಪರಿಸ್ಥಿತಿ ಅಸುರಕ್ಷಿತವಾಗಿದೆ ಎಂದು ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ಈ ಬೆಳವಣಿಗೆಯ ನಂತರ ಮಗಳು ತಂದೆಯ ಮನೆಗೆ ಮರಳಿದ್ದಾಳೆ. ಈ ವಿಚಾರದಿಂದ ಆಕ್ರೋಶಗೊಂಡ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಹಾಗೂ ಇನ್ನಿತರ ಆರೋಪಿಗಳು ಸೇರಿ ರಾತ್ರಿ ವೇಳೆ ಮಹೇಶ್ ನಾಯ್ಕ ನಿವಾಸಕ್ಕೆ ನುಗ್ಗಿ ಚಾಕು ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಲ್ಲಿ ಮಹೇಶ್ ನಾಯ್ಕ್ ಗುರಿಯಾಗಿದ್ದು, ಅವರನ್ನು ರಕ್ಷಿಸಲು ಮುಂದಾದ ಅವರ ಸಹೋದರ ವಸಂತ್ ನಾಯ್ಕ ಮೇಲೆ ಬರ್ಬರವಾಗಿ ಇರಿತ ನಡೆದಿದ್ದು, ವಸಂತ್ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ನೆರೆಯ ಕುಮಾರ್ ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು, ಮಹಿಳೆ ಸುಚಿತ್ರಾ, ಆಕೆಯ ತಂದೆ ಲೋಕನಾಥ್, ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.








