ಮನುಕುಲಕ್ಕೆ ಮಾದರಿ ಶ್ರೀರಾಮ..!
– ಸಮಸ್ತ ಜನತೆಗೆ ರಾಮ ನವಮಿ ಶುಭಾಶಯಗಳು
ತ್ರೇತಾಯುಗದಲ್ಲಿ ಇಕ್ಷ್ವಾಕು ವಂಶದ ರಾಜ ದಶರಥನ ಪಟ್ಟದರಸಿ ಕೌಸಲ್ಯೆಯ ಗರ್ಭದಲ್ಲಿ ಜನಿಸಿದ ಶ್ರೀರಾಮನು ತನ್ನ ಸಾಮರ್ಥ್ಯ, ವ್ಯಕ್ತಿತ್ವ, ಉತ್ತಮ ಗುಣಗಳಿಂದಾಗಿ ‘ಪುರುಷೋತ್ತಮ’ ಎನಿಸಿಕೊಂಡು ಮನುಕುಲಕ್ಕೆ ಮಾದರಿಯಾದವನು. ರಾಜ ವೈಭೋಗವನ್ನು ತ್ಯಜಿಸಿ ತಂದೆಯ ಮಾತನ್ನು ನಡೆಸಿಕೊಡುವ ಸಲುವಾಗಿ ಪತ್ನಿ, ಸಹೋದರ ಸಹಿತನಾಗಿ ನಾರುಮಡಿಯುಟ್ಟು ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಅನುಭವಿಸಿ, ಮಗನೆಂದರೆ ಹೀಗಿರಬೇಕು ಎಂದು ಜಗತ್ತಿಗೆ ತೋರಿಸಿಕೊಟ್ಟ ‘ಪಿತೃ ವಾಕ್ಯ ಪರಿಪಾಲಕ‘.
ಹೆಣ್ಣು ಮಕ್ಕಳಿಗೆ “ನಿನ್ನ ಗಂಡನಾಗುವವನು ಹೇಗಿರಬೇಕು” ಎಂದು ಕೇಳಿದರೆ ಎಲ್ಲರಿಂದ ಬರುವ ಉತ್ತರ “ಶ್ರೀರಾಮನಚಂದ್ರನ ತರ ಇರಬೇಕು” ಎನ್ನುವುದೇ ಆಗಿದೆ.ಕಾರಣ ಸೀತೆಯನ್ನು ಹೊರತು ಪರಸ್ತ್ರೀಯರನ್ನು ತಾಯಿಯಂತೆ, ಸಹೋದರಿಯರಂತೆ ಕಂಡು ‘ಏಕಪತ್ನಿವೃತಸ್ತ‘ ಎನ್ನುವ ಹೆಸರನ್ನು ಗಳಿಸಿದ ಆದರ್ಶ ಪತಿ ಶ್ರೀರಾಮ.
ಪತ್ನಿ ಸೀತೆಯ ಮೇಲೆ ಸಂಪೂರ್ಣ ನಂಬಿಕೆಯಿದ್ದರೂ ಕೂಡ ಓರ್ವ ರಾಜನಾಗಿ ಯೋಚಿಸಿ, ರಾಜ್ಯದ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದ ಅಗಸನ ಮಾತಿಗೆ ಬೆಲೆ ಕೊಟ್ಟು ವೈದೇಹಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ, ತನ್ನ ಪತ್ನಿ ಎಂದಿಗೂ ಪತಿವೃತೆಯೇ, ಭೂಮಿತೂಕದ ಅವಳು ಯಾವಾಗಲೂ ಪವಿತ್ರಳಾಗಿಯೇ ಇರುತ್ತಾಳೆ ಎನ್ನುವ ಅಂಶವನ್ನು ಪ್ರತ್ಯಕ್ಷವಾಗಿ ಬಿಂಬಿಸಿದ್ದಷ್ಟೇ ಅಲ್ಲದೆ, ರಾಜ್ಯವನ್ನು ಆಳುವವರು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಸಂದೇಶವನ್ನು ಲೋಕಕ್ಕೆ ನೀಡಿದನು.
ಸ್ರ್ತೀಲೋಲುಪನಾದ ರಾವಣನಂತಹ ದುಷ್ಟರನ್ನು ಸಂಹರಿಸಿದ ಪರಾಕ್ರಮಿ. ಹನುಮಂತನಂತಹ ಭಕ್ತನ ಪ್ರೀತಿಗೆ ಸೋತು ಶರಣಾದ ಭಕ್ತಪ್ರಿಯ. ಶಬರಿಗೆ ಕೊನೆಗಾಲದಲ್ಲಿ ತನ್ನ ದರ್ಶನ ಭಾಗ್ಯ ಕರುಣಿಸಿ, ಸಂತೃಪ್ತ ಮರಣ ಲಭಿಸುವಂತೆ ಮಾಡುವ ಮೂಲಕ, ಮುಕ್ತಿ ನೀಡಿದವನು. ಯಾವುದೇ ತಪ್ಪು ಮಾಡದೆ ಪತಿಯ ಕೋಪಕ್ಕೆ ತುತ್ತಾಗಿ, ಶಾಪಗ್ರಸ್ತಳಾಗಿ ಕಲ್ಲಾಗಿದ್ದ ಅಹಲ್ಯೆಗೆ ಕೇವಲ ಪಾದಸ್ಪರ್ಶದಿಂದ ಶಾಪವಿಮೋಚನೆ ಮಾಡಿ, ಪತಿ ಗೌತಮ ಋಷಿಯೊಂದಿಗೆ ದಾಂಪತ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟವನು.
ಶ್ರೀರಾಮನನ್ನು ನೋಡಲು ಸರಳ ಮತ್ತು ಸುಂದರ. ಆದರೆ ಆತನ ಮಹಿಮೆ ಅಪಾರ. ಎಲ್ಲಾ ವಿಚಾರಗಳಲ್ಲೂ ಮನುಕುಲಕ್ಕೆ ಮಾದರಿಯಾಗಿರುವ ಶ್ರೀರಾಮನ ಜನ್ಮ ದಿನವಾದ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಿ, ಅವನ ಆದರ್ಶ ಗುಣಗಳನ್ನು ತಕ್ಕಮಟ್ಟಿಗೆ ಅಳವಡಿಸಿಕೊಂಡು, ನಾವು ಮುಂದಿನ ಪೀಳಿಗೆಗೆ ಮಾದರಿ ವ್ಯಕ್ತಿಗಳಾಗಿ ರೂಪುಗೊಂಡು ಸಾರ್ಥಕ ಜೀವನ ನಡೆಸೋಣ.








