ಆರೋಗ್ಯ ಎಕ್ಸ್ ಪ್ರೆಸ್!
ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಿದ್ದರೆ ಈ ಕಾರಣಗಳು ಇರಬಹುದು!
* ದಿನಾ ಬೆಳಗ್ಗೆ ಬರುವ ತಲೆನೋವಿಗೆ ಚಿಕಿತ್ಸೆ ಹೇಗೆ?
NAMMUR EXPRESS NEWS
ತುಂಬಾ ಜನರಿಗೆ ತಲೆ ನೋವು ಒಂದು ಬಿಟ್ಟೂ ಬಿಡದ ಸಮಸ್ಯೆಯಾಗಿ ಧೀರ್ಘಕಾಲ ಕಾಡುತ್ತದೆ. ತಲೆನೋವಿನ ಕಾರಣದಿಂದ ಕೆಲವರು ಸುಸೈಡ್ ಕೂಡ ಮಾಡಿಕೊಂಡಿದ್ದಾರೆ. ಅಂದರೆ ಅಷ್ಟು ಗಂಭೀರ ಪ್ರಮಾಣದಲ್ಲಿ ತಲೆ ನೋವು ಅವರಿಗಿರುತ್ತದೆ. ತಲೆ ನೋವಿನ ಕಾರಣಗಳನ್ನು ಅವಲೋಕಿಸಿ ನೋಡಿದರೆ ಅದರಲ್ಲಿ ಜೀವನ ಶೈಲಿಯಲ್ಲಿನ ಲೋಪ ದೋಷಗಳೇ ಹೆಚ್ಚಾಗಿರುತ್ತವೆ. ಅಂದರೆ ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡದೇ ಇರುವುದು, ಪ್ರತಿದಿನ ಮಲಗುವ ಮುಂಚೆ ಕಾಫಿ ಅಥವಾ ಆಲ್ಕೋಹಾಲ್ ಕುಡಿಯುವುದು ಈ ರೀತಿ. ಇದರ ಜೊತೆಗೆ ಅನುವಂಶೀಯ ಕಾರಣಗಳು ಮತ್ತು ಇನ್ನು ಹಲವು ತೊಂದರೆಗಳಿಂದ ತಲೆನೋವು ಬರುವ ಸಾಧ್ಯತೆ ಇರುತ್ತದೆ. ಪ್ರಸ್ತುತ ಈ ಲೇಖನದಲ್ಲಿ ದಿನಾ ಬೆಳಗ್ಗೆ ತಲೆನೋವು ಏಕೆ ಬರುತ್ತದೆ ಮತ್ತು ಅದರ ನಿರ್ವಹಣೆಯ ಕ್ರಮಗಳು ಹೇಗೆ ಎಂಬುದರ ಬಗ್ಗೆ ತಿಳಿಸಿಕೊಡಲಾಗಿದೆ.
* ಸರಿಯಾಗಿ ನಿದ್ರೆ ಆಗದಿರುವುದು
ಬೆಳ್ಳಂ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಬಂದರೆ ಅದಕ್ಕೆ ನಿದ್ರಾಹೀನತೆ ಸಮಸ್ಯೆ ಕಾರಣವಾಗಿರಬಹುದು ಅಥವಾ ನಿದ್ರೆಯಲ್ಲಿ ಆಗಾಗ ಎಚ್ಚರಗೊಳ್ಳುವುದು ಕೂಡ ಒಂದು ಕಾರಣ ಎನ್ನಬಹುದು. ಕೆಲವರಿಗೆ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಅಭ್ಯಾಸವಾಗಿರುತ್ತದೆ. ಅಪ್ಪಿ ತಪ್ಪಿ ಈ ಸಮಯ ಬದಲಾದರೆ ಅದರಿಂದ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಕಾಣಿಸುತ್ತದೆ. ಹಲವರಲ್ಲಿ ನೀವು ಗಮನಿಸಿರಬಹುದು, ಮಲಗಿರುವ ಸಂದರ್ಭದಲ್ಲಿ ಉಸಿರಾಟ ಕೆಲವು ಸೆಕೆಂಡುಗಳ ಕಾಲ ನಿಂತು ಹೋಗಿ ಮತ್ತೆ ಪ್ರಾರಂಭವಾಗುತ್ತದೆ. ಇದು ಸಹಜವಾಗಿ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟು ಮಾಡುತ್ತದೆ ಮತ್ತು ಇದು ಬೆಳಗ್ಗೆ ಎದ್ದ ತಕ್ಷಣ ಮೈಗ್ರೇನ್ ತಲೆ ನೋವು ಕಂಡು ಬರುವಂತೆ ಮಾಡುತ್ತದೆ.
ನಿರ್ಜಲೀಕರಣ
ನಮ್ಮ ದೇಹದಲ್ಲಿ ನೀರಿನ ಅಂಶದ ಕೊರತೆ ಉಂಟಾದಾಗ ಸಹಜವಾಗಿ ಬೆಳಗಿನ ಸಮಯದಲ್ಲಿ ತಲೆನೋವು ಕಂಡು ಬರುತ್ತದೆ. ರಾತ್ರಿ ಮಲಗಿರುವ ಸಂದರ್ಭದಲ್ಲಿ ನಮ್ಮ ದೇಹ ಬೆವರಿನ ರೂಪದಲ್ಲಿ ದೇಹದಿಂದ ನೀರಿನ ಅಂಶವನ್ನು ಕಳೆದುಕೊಳ್ಳುತ್ತದೆ. ಇದು ಬೆಳಗಿನ ಸಮಯದಲ್ಲಿ ನಿರ್ಜಲೀಕರಣ ಆಗುವಂತೆ ಮಾಡುತ್ತದೆ. ದೇಹದಲ್ಲಿ ಸರಿಯಾದ ಮತ್ತು ಸಮರ್ಪಕವಾದ ನೀರಿನ ಅಂಶ ಇಲ್ಲದಿದ್ದರೆ, ಅದು ಬೆಳಗಿನ ಸಮಯದಲ್ಲಿ ತಲೆನೋವು ಕಂಡುಬರುವಂತೆ ಮಾಡುತ್ತದೆ. ಹೀಗಾಗಿ ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ನೀರು ಕುಡಿದು ಮಲಗುವುದು ಒಳ್ಳೆಯದು. ಇದು ಬೆಳಗಿನ ಸಮಯದಲ್ಲಿ ತಲೆನೋವು ಕಂಡು ಬರದಂತೆ ಮಾಡುತ್ತದೆ.
ಆಹಾರ ಪದ್ಧತಿಯಲ್ಲಿ ಬದಲಾವಣೆ
ಸಂಸ್ಕರಿಸಿದ ಮಾಂಸಹಾರಗಳು, ಆಲ್ಕೋಹಾಲ್, ಚೀಸ್, ಕೃತಕ ಸಿಹಿ ಅಂಶಗಳು, ಹಲವರಲ್ಲಿ ಮೈಗ್ರೇನ್ ಕಂಡುಬರುವಂತೆ ಮಾಡುತ್ತದೆ. ಈ ರೀತಿ ಒಂದು ವೇಳೆ ಪದೇ ಪದೇ ತಲೆ ನೋವು ಕಾಣಿಸುತ್ತಿದ್ದರೆ, ಮೊದಲು ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡು ತಲೆನೋವು ನಿವಾರಣೆ ಮಾಡಿಕೊಳ್ಳಿ.
ವಾತಾವರಣದ ಬದಲಾವಣೆಗಳು
ಕೆಲವು ಬಾರಿ ಬಿಸಿಲು ಮತ್ತು ಇನ್ನು ಕೆಲವು ಬಾರಿ ಮಳೆ, ಚಳಿ ಕಂಡುಬರುತ್ತದೆ. ಈ ರೀತಿಯ ಪರಿಸರದಲ್ಲಿ ವಾತಾವರಣ ಬದಲಾವಣೆ ಮೈಗ್ರೇನ್ ತಲೆನೋವು ಬರುವಂತೆ ಮಾಡಬಹುದು. ತುಂಬಾ ಸೆನ್ಸಿಟಿವ್ ಇರುವ ಜನರಿಗೆ ಈ ತರಹ ಆಗುವುದು ಸಹಜ.
* ದಿನಾ ಬೆಳಗ್ಗೆ ಬರುವ ತಲೆನೋವಿಗೆ ಚಿಕಿತ್ಸೆ ಹೇಗೆ?
ಹೆಚ್ಚಾಗಿ ನೀರು ಕುಡಿಯುವುದು: ನಿಮಗೆ ಆಗಾಗ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತಿದ್ದರೆ, ಆಗಾಗ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ಮೈಗ್ರೇನ್ ತಲೆನೋವಿನ ಪರಿಹಾರಕ್ಕೆ ಸಹಾಯ ಮಾಡುತ್ತದೆ.
ನೋವು ನಿವಾರಕ ಔಷಧಿಗಳು: ಮೆಡಿಕಲ್ ಶಾಪ್ ಗಳಲ್ಲಿ ಸಿಗುವಂತಹ ತಲೆ ನೋವು ನಿವಾರಣ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಮತ್ತು ವೈದ್ಯರ ಬಳಿ ತಲೆ ನೋವಿಗೆ ಸಂಬಂಧಪಟ್ಟಂತೆ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳುವುದರಿಂದ ತಲೆನೋವು ನಿವಾರಣೆ ಮಾಡಿಕೊಳ್ಳಬಹುದು.
ವಿಶ್ರಾಂತಿ ಅಗತ್ಯ: ದೀರ್ಘ ಉಸಿರಾಟದ ವ್ಯಾಯಾಮಗಳು, ಯೋಗ, ಧ್ಯಾನ ಇವುಗಳನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ದೇಹಕ್ಕೆ ಹಾಗೂ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ಇದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತಲೆನೋವಿನ ನಿವಾರಣೆಯಲ್ಲಿ ಇದು ಪ್ರಮುಖವಾಗಿ ಕೆಲಸ ಮಾಡುತ್ತದೆ.








