ಬಾರಲ್ಲಿ ಮಕ್ಕಳಿಗೆ ಮದ್ಯ ಕೊಟ್ರೆ ಮಾಲೀಕರು ಅರೆಸ್ಟ್!
– ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್..!
– ವಯಸ್ಸಿನ ಪರೀಕ್ಷೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಯಾರಿಗೆ ಶಿಕ್ಷೆ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಪಬ್, ವೈನ್ ಶಾಪ್, ಬಾರ್ ಮತ್ತು ಬ್ರೇವರಿಜ್ ಗಳಲ್ಲಿ ಅಪ್ರಾಪ್ತರು ಮದ್ಯಪಾನ ಮಾಡುವ ಪ್ರವೃತ್ತಿಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಡಿವಾಣ ಹಾಕಿದೆ. ಅಪ್ರಾಪ್ತರನ್ನು ಮದ್ಯಪಾನದ ವ್ಯಸನದಿಂದ ರಕ್ಷಿಸುವುದು ಆಡಳಿತ ಮಂಡಳಿಯ ನೈತಿಕ ಮತ್ತು ಶಾಸನಾತ್ಮಕ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಅಲ್ಲಿ ಗ್ರಾಹಕರು ಪ್ರವೇಶಿಸುವಾಗಲೇ ಅವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಮದ್ಯ ಸರಬರಾಜು ಮಾಡುವ ಸಂದರ್ಭದಲ್ಲೂ ಸಿಬ್ಬಂದಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ.
ಎಚ್ಚರಿಕೆ ಬೋರ್ಡ್ ಕಡ್ಡಾಯ: ಮದ್ಯ ಕೊಟ್ರೆ ಕೇಸ್
“ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಎಂಬ ಎಚ್ಚರಿಕೆ ಫಲಕಗಳನ್ನು ಪ್ರತಿಯೊಂದು ಬ್ರಿವರಿಯಲ್ಲಿ ಎದ್ದು ಕಾಣುವಂತೆ ಹಾಕಿರಬೇಕು. ಅಪ್ರಾಪ್ತರು ಮದ್ಯದ ಅಂಗಡಿಗಳ ಒಳಗೆ ಕದ್ದುಮುಚ್ಚಿ ಮದ್ಯಪಾನ ಮಾಡಿದರೂ ಸಹ, ಅದಕ್ಕೆ ಅಲ್ಲಿನ ಆಡಳಿತ ಮಂಡಳಿಯೇ ಸಂಪೂರ್ಣ ಹೊಣೆಯಾಗುತ್ತದೆ. ಈ ಜವಾಬ್ದಾರಿಯಿಂದ ಮಾಲೀಕರು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ರಾಜಧಾನಿಯಲ್ಲಿ ಮಕ್ಕಳಿಗೆ ಮದ್ಯ ಕೊಟ್ಟವರ ಮೇಲೆ ಕೇಸ್!
ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಾರ್ ಮಾಲೀಕ ವಿ. ಚಿಟ್ಟಿಬಾಬು ವಿರುದ್ಧ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಮದ್ಯಪಾನದಿಂದ ಅಪ್ರಾಪ್ತರನ್ನು ಕಾಪಾಡುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಆದೇಶ ಇದೀಗ ಬಾರ್ ಮಾಲೀಕರಿಗೆ ನಡುಕ ಹುಟ್ಟಿದೆ.








